ADVERTISEMENT

ಬುಡಕಟ್ಟು ಜನರ ಆರೋಗ್ಯದ ಕಾಳಜಿ ಯಾರ ಹೊಣೆ?ಸರ್ಕಾರದ ವಿರುದ್ಧ BY ವಿಜಯೇಂದ್ರ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಅಕ್ಟೋಬರ್ 2025, 10:03 IST
Last Updated 27 ಅಕ್ಟೋಬರ್ 2025, 10:03 IST
   

ಬೆಂಗಳೂರು: ಬುಡಕಟ್ಟು ಸಮುದಾಯಗಳ ಜನರಿಗೆ ಕಳಪೆ ಆಹಾರ ಪೂರೈಕೆಯಾಗುತ್ತಿರುವ ಬಗ್ಗೆ ವರದಿಯಾದ ಬೆನ್ನಲ್ಲೆ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ 'ಪ್ರಜಾವಾಣಿ' ವರದಿ ಉಲ್ಲೇಖಿಸಿ ಪೋಸ್ಟ್‌ ಹಂಚಿಕೊಂಡಿರುವ ಅವರು, 'ಬುಡಕಟ್ಟು ಸಮುದಾಯಗಳ ಜನರ ಜೀವನ ಸುಧಾರಿಸಲು ಪೌಷ್ಠಿಕ ಆಹಾರ ಒದಗಿಸುವ ಯೋಜನೆಯಡಿ ಮುಗ್ಗಲು ಹಿಡಿದ ಬೆಳೆಗಳು, ಕಳಪೆ ಆಹಾರಗಳ ವಿತರಣೆಯಾಗುತ್ತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ. ಬುಡಕಟ್ಟು ಸಮುದಾಯದ ಕುಟುಂಬಗಳ ಕುರಿತು ಕಾಂಗ್ರೆಸ್‌ ಸರ್ಕಾರಕ್ಕಿರುವ ತಾತ್ಸಾರ ಧೋರಣೆಯನ್ನು ಇದು ಪ್ರತಿಬಿಂಬಿಸುತ್ತದೆ' ಎಂದು ತಿಳಿಸಿದ್ದಾರೆ.

'ರಾಜ್ಯದ ಸುಮಾರು 47,859 ಬುಡಕಟ್ಟು ಸಮುದಾಯಗಳ ಕುಟುಂಬಗಳಿಗೆ ಪೌಷ್ಠಿಕ ಆಹಾರ ಪೂರೈಕೆ ಮಾಡಲು ರಾಜ್ಯ ಸರ್ಕಾರ ವಾರ್ಷಿಕವಾಗಿ ₹120 ಕೋಟಿ ವ್ಯಯಿಸುತ್ತಿದ್ದರೂ, ಆದಿವಾಸಿ ಸುಮುದಾಯದ ಬಡವರಿಗೆ ಗುಣಮಟ್ಟದ ಆಹಾರ ಪೂರೈಕೆಯಾಗದಿರುವುದು ಸರ್ಕಾರದ ಆಡಳಿತ ಯಂತ್ರಕ್ಕೆ ತುಕ್ಕು ಹಿಡಿದಿದೆ' ಎಂದು ಟೀಕಿಸಿದ್ದಾರೆ.

ADVERTISEMENT

'ಕಳಪೆ ಆಹಾರಗಳ ಸೇವನೆಯಿಂದ ಅನಾರೋಗ್ಯ ಸಮಸ್ಯೆಗಳು ಉದ್ಭವಿಸಿದಲ್ಲಿ ಇದಕ್ಕೆ ಯಾರು ಹೊಣೆ? ರಾಜ್ಯ ಸರ್ಕಾರ ಈ ಕೂಡಲೇ ಅಪೌಷ್ಟಿಕ ಆಹಾರ ತಲುಪಿಸುತ್ತಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಉತ್ತಮ ಪೌಷ್ಟಿಕ ಆಹಾರ ಒದಗಿಸುವ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸಲಿ' ಎಂದು ವಿಜಯೇಂದ್ರ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.