ADVERTISEMENT

ತೆಲಂಗಾಣ ವಿಧಾನಸಭಾ ಚುನಾವಣೆ: ಉಮೇದುವಾರರ ವಿಧವಿಧ ಉಮೇದು

ಮತಬೇಟೆಗಾಗಿ ವೇಷ ವೈವಿಧ್ಯ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 20:41 IST
Last Updated 30 ಅಕ್ಟೋಬರ್ 2018, 20:41 IST
ಟಿಆರ್‌ಎಸ್‌ ಅಭ್ಯರ್ಥಿ ಸೆಲೂನ್‌ವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಶೇವಿಂಗ್‌ ಮಾಡಿ ಮತಯಾಚನೆ ಮಾಡಿದರು
ಟಿಆರ್‌ಎಸ್‌ ಅಭ್ಯರ್ಥಿ ಸೆಲೂನ್‌ವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಶೇವಿಂಗ್‌ ಮಾಡಿ ಮತಯಾಚನೆ ಮಾಡಿದರು   

ಹೈದರಾಬಾದ್‌: ಮತದಾರರ ಓಲೈಕೆಗೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಅಭ್ಯರ್ಥಿಗಳು ವಿನೂತನ ಹಾದಿಗಳನ್ನು ತುಳಿದಿದ್ದಾರೆ.

ವೃದ್ಧರಿಗೆ ಕೈಯ್ಯಾರೆ ಆಹಾರ ತಿನ್ನಿಸುವುದು, ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಸೆಲೂನ್‌ಗಳಲ್ಲಿ ಕೂದಲು ಕತ್ತರಿಸುವುದು, ಸ್ನಾನಕ್ಕೆ ನೀರು ಕೊಡುವುದು, ಬೀದಿಯಲ್ಲಿ ತರಕಾರಿ ಮಾರಾಟ ಮಾಡುವ ಮೂಲಕ ಮತದಾರರನ್ನು ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.ಅಂತ್ಯಕ್ರಿಯೆ ಮೆರವಣಿಗೆಯನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದ್ದಾರೆ.

ವಿಧಾನಸಭೆ ಮಾಜಿ ಅಧ್ಯಕ್ಷ ಹಾಗೂ ಟಿಆರ್‌ಎಸ್‌ ಅಭ್ಯರ್ಥಿ ಮಧುಸೂದನಾಚಾರ್ಯ ಭೂಪಾಲಪಲ್ಲಿಯ ಸೆಲೂನ್‌ವೊಂದರಲ್ಲಿ ಕೂದಲು ಕತ್ತರಿಸುವ ಮೂಲಕ ಮತಯಾಚನೆ ನಡೆಸಿದರು. ಮತದಾರರಲ್ಲಿ ಇದು ಆಶ್ಚರ್ಯ ಹುಟ್ಟಿಸಿತು. ವೃದ್ಧರೊಬ್ಬರಿಗೆ ಊಟ ಸಹ ಬಡಿಸಿದರು. ನಂತರ ಸಮೀಪದಲ್ಲಿಯೇ ಹೊರಟಿದ್ದ ಅಂತ್ಯಕ್ರಿಯೆ ಮೆರವಣಿಗೆಯಲ್ಲಿ ಪಾಲ್ಗೊಂಡು, ಪಾರ್ಥಿವ ಶರೀರಕ್ಕೆ ಹೆಗಲು ಕೊಟ್ಟರು.

ADVERTISEMENT

ಮತ್ತೊಂದು ಕ್ಷೇತ್ರದಲ್ಲಿ ಟಿಆರ್‌ಎಸ್‌ ಅಭ್ಯರ್ಥಿಯೊಬ್ಬರು ನಗುತ್ತಾ ಮೃತದೇಹಕ್ಕೆ ಹೆಗಲು ಕೊಟ್ಟಿದ್ದು, ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

ಮಹಿಳಾ ಮತದಾರರನ್ನು ಓಲೈಸಿಕೊಳ್ಳುವ ಉದ್ದೇಶದಿಂದ ಸ್ಟೇಷನ್ ಘನಪುರ ಮತ್ತು ಅದಿಲಾಬಾದ್‌ನ ಟಿಆರ್‌ಎಸ್‌ ಅಭ್ಯರ್ಥಿಗಳಾದ ರಾಜಣ್ಣ ಹಾಗೂ ಜೋಗು ರಾಮಣ್ಣ ಬೀದಿಯಲ್ಲಿ ತರಕಾರಿ ಮಾರಾಟ ನಡೆಸಿದರು. ಜನಗಾಂವ್‌ ಕ್ಷೇತ್ರದ ಅಭ್ಯರ್ಥಿ ಮುತ್ತಿರೆಡ್ಡಿ ಹಾಗೂ ಜಗತ್ಯಾಲ್‌ ಅಭ್ಯರ್ಥಿ ರವಿಶಂಕರ್‌ ಅವರು ಬಟ್ಟೆ ತೊಳೆಯುವುದು ಮತ್ತು ಸ್ನಾನಕ್ಕೆ ನೀರು ತೆಗೆದು ಕೊಡುವ ಮೂಲಕ ಪ್ರಚಾರ ನಡೆಸಿದ್ದಾರೆ. ಮೆಹಬೂಬಾಬಾದ್‌ ಕ್ಷೇತ್ರದ ಟಿಆರ್‌ಎಸ್‌ ಅಭ್ಯರ್ಥಿ ಶಂಕರ್‌ ನಾಯಕ್‌ ಅವರು ಬಟ್ಟೆ ಇಸ್ತ್ರಿ ಮಾಡುವ ಮೂಲಕ ಮತಯಾಚನೆ ನಡೆಸಿದರು. ಮೆಹಬೂಬನಗರ ಕ್ಷೇತ್ರದ ಟಿಆರ್‌ಎಸ್‌ನ ಶ್ರೀನಿವಾಸ್‌ ಗೌಡ ಅಂಗಡಿಯೊಂದರಲ್ಲಿ ಹೊಲಿಗೆ ಯಂತ್ರ ನಡೆಸುವ ಮೂಲಕ ಮತದಾರರ ಮನ ಗೆಲ್ಲಲು ಪ್ರಯತ್ನಿಸಿದರು.

ಯಲ್ಲಾರೆಡ್ಡಿ ಕ್ಷೇತ್ರದ ಅಭ್ಯರ್ಥಿ ಇ.ರವೀಂದರ್‌ ರೆಡ್ಡಿ ಅವರು 50 ಮಹಿಳಾ ಸ್ವಸಹಾಯ ಗುಂಪುಗಳಿಗೆ ತಲಾ ₹5 ಲಕ್ಷ ನೀಡುವುದಾಗಿ ಬಹಿರಂಗವಾಗಿ ಪ್ರಕಟಿಸಿದ್ದಾರೆ. ಹಣ ಪಡೆದವರು ಟಿಆರ್‌ಎಸ್‌ಗೆ ಮತ ಹಾಕುತ್ತೇವೆ ಎಂದು ಪ್ರತಿಜ್ಞೆ ಮಾಡಬೇಕು ಎಂದು ಅವರು ನೀಡಿರುವ ಆಹ್ವಾನ ಈಗ ವಿವಾದದ ಸ್ವರೂಪ ಪಡೆದುಕೊಂಡಿದೆ. ಈ ಬಗ್ಗೆ ದೂರು ದಾಖಲಾಗಿದೆ. ಟಿಆರ್‌ಎಸ್ ಅಭ್ಯರ್ಥಿ ಅರೂರಿ ಪ್ರಕಾಶ್‌ ಅವರು ಗ್ರಾಮಗಳಲ್ಲಿ ಇಂಥ ಪ್ರತಿಜ್ಞಾವಿಧಿ ಕೈಕೊಳ್ಳುವ ಕಾರ್ಯಕ್ರಮ ನಡೆಸುತ್ತಿದ್ದಾರೆ.

ಮತದಾರರಿಗೆ ಹಂಚಲು ಟಿಆರ್‌ಎಸ್‌ ಲಾರಿಯಲ್ಲಿ ತಂದಿದ್ದ 157 ಬಂಡಲ್‌ ಸೀರೆಗಳನ್ನು ವಿರೋಧ ಪಕ್ಷಗಳ ಕಾರ್ಯಕರ್ತರು ವಶಕ್ಕೆ ಪಡೆದು ಚುನಾವಣಾಧಿಕಾರಿಗೆ ಒಪ್ಪಿಸಿದ್ದಾರೆ. ಸೀರೆ ಹಂಚುವುದನ್ನು ಮುಖ್ಯ ಚುನಾವಣಾಧಿಕಾರಿ ತಡೆದಿದ್ದಾರೆ.

ಛತ್ತೀಸಗಡ: ಬಿಜೆಪಿ 3ನೇ ಪಟ್ಟಿ ಬಿಡುಗಡೆ

ರಾಯಪುರ: ಛತ್ತೀಸಗಡ ವಿಧಾನಸಭೆ ಚುನಾವಣೆಗೆ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ 11 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಯಪುರ ನಗರ (ಉತ್ತರ) ಕ್ಷೇತ್ರ ಹೊರತುಪಡಿಸಿ ಉಳಿದ 89 ಕ್ಷೇತ್ರಗಳಿಗೂ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ.

ಸಾಹು ಸಮುದಾಯಕ್ಕೆ ಹೆಚ್ಚಿನ ಆದ್ಯತೆ ನೀಡಿರುವ ಬಿಜೆಪಿ, ಬಹುತೇಕ ಕ್ಷೇತ್ರಗಳಲ್ಲಿ ಹೊಸ ಮುಖಗಳಿಗೆ ಟಿಕೆಟ್‌ ನೀಡಿದೆ. ರಾಯಪುರ ನಗರ (ಉತ್ತರ) ಕ್ಷೇತ್ರಕ್ಕೆ ಸಿಂಧಿ ಸಮಾಜದ ಅಭ್ಯರ್ಥಿಗೆ ಟಿಕೆಟ್‌ ನೀಡಲು ಒಲವು ತೋರಿದೆ. ಹಾಲಿ ಶಾಸಕ ಶ್ರೀಚಂದ್‌ ಸುಂದರೇನಿ ಹಾಗೂ ಛತ್ತೀಸಗಡದ ವಾಣಿಜ್ಯೋದ್ಯಮ ಸಂಸ್ಥೆಯ ಅಮರ್‌ ಪರ್ವಾನಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ಬಿಜೆಪಿ ಜತೆ ಮುನಿಸು: ಆರ್‌ಎಲ್‌ಎಸ್‌ಪಿ ಸ್ವತಂತ್ರ ಸ್ಪರ್ಧೆ

ನವದೆಹಲಿ: ಬಿಹಾರ ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯಿಂದ ಮುನಿಸಿಕೊಂಡಿರುವ ಎನ್‌ಡಿಎ ಅಂಗಪಕ್ಷ ಆರ್‌ಎಲ್‌ಎಸ್‌ಪಿ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ನೂರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಿಸಿದೆ.

ರಾಷ್ಟ್ರೀಯ ಲೋಕ ಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ನೂರು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಅಧ್ಯಕ್ಷ ಮತ್ತು ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಹೇಳಿದ್ದಾರೆ.

ಬಿಹಾರದಲ್ಲಿ ಸಮಸ್ಥಾನಗಳಲ್ಲಿ ಸ್ಪರ್ಧಿಸಲು ಬಿಜೆಪಿ ಮತ್ತು ಜೆಡಿಯು ನಿರ್ಧರಿಸಿವೆ. ಮಿತ್ರಪಕ್ಷವಾದ ಆರ್‌ಎಲ್‌ಎಸ್‌ಪಿಗೆ ಕೇವಲ ಎರಡು ಲೋಕಸಭಾ ಕ್ಷೇತ್ರ ಬಿಟ್ಟು ಕೊಡುವುದಾಗಿ ಹೇಳಿದೆ.

ಇದರಿಂದ ಎನ್‌ಡಿಎ ಮಿತ್ರ ಪಕ್ಷಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಹಾಗಾಗಿಯೇ, ಮಧ್ಯ ಪ್ರದೇಶದಲ್ಲಿ ನೂರು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಕುಶ್ವಾಹ ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.