ADVERTISEMENT

ಕೋವಿಡ್‌ನಿಂದ ಗುಣವಾದವರಿಗೆ ಕ್ಷಯರೋಗ ಪರೀಕ್ಷೆ: ಸುಧಾಕರ್

ಕೋವಿಡ್‌: 28 ಲಕ್ಷಕ್ಕೂ ಹೆಚ್ಚು ಜನರಿಗೆ ಪರೀಕ್ಷೆ– ಆರೋಗ್ಯ ಸಚಿವ ಕೆ. ಸುಧಾಕರ್

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 19:46 IST
Last Updated 17 ಆಗಸ್ಟ್ 2021, 19:46 IST
ಸುಧಾಕರ್
ಸುಧಾಕರ್   

ಬೆಂಗಳೂರು: ‘ರಾಜ್ಯದಲ್ಲಿ ಕೋವಿಡ್‌ನಿಂದ ಗುಣಮುಖರಾಗಿರುವ 28 ಲಕ್ಷಕ್ಕೂ ಹೆಚ್ಚು ಜನರನ್ನು ಕ್ಷಯ ರೋಗ ಪರೀಕ್ಷೆಗೆ ಒಳಪಡಿಸಲಾಗುವುದು’ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.

ಇದೇ 31ರವರೆಗೆ ನಡೆಯಲಿರುವ ಕ್ಷಯ ರೋಗ ಪತ್ತೆ ಆಂದೋಲನಕ್ಕೆ ವಿಧಾನಸೌಧದಲ್ಲಿ ಮಂಗಳವಾರ ಚಾಲನೆ ನೀಡಿ ಮಾತನಾಡಿದ ಅವರು, ‘ಜನರು ಸ್ವಯಂಪ್ರೇರಿತರಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಕೋವಿಡ್ ಶ್ವಾಸಕೋಶಕ್ಕೆ ಹೆಚ್ಚು ಹಾನಿ ಉಂಟು ಮಾಡುತ್ತದೆ. ಕ್ಷಯ ರೋಗ ಕೂಡ ಶ್ವಾಸಕೋಶಕ್ಕೆ ಹಾನಿ ಮಾಡುತ್ತದೆ. ಕ್ಷಯ ನಿಯಂತ್ರಣಕ್ಕಾಗಿ ಈ ಕ್ರಮ ವಹಿಸಲಾಗಿದ್ದು, ಕೋವಿಡ್‌ನಿಂದ ಗುಣಮುಖರಾದವರ ಪೈಕಿ, 24 ಮಂದಿಯಲ್ಲಿ ಕ್ಷಯ ರೋಗ ಪತ್ತೆಯಾಗಿದೆ’ ಎಂದರು.

ADVERTISEMENT

‘2017ರಿಂದ ಕ್ಷಯ ರೋಗ ಪತ್ತೆ ಆರಂಭಿಸಿ 75 ಲಕ್ಷ ಜನರನ್ನು ಗುರುತಿಸಿ, ಶೇ 88ರಷ್ಟು ಜನರಿಗೆ ಪರೀಕ್ಷೆ ಮಾಡಲಾಗಿದೆ. ಈ ಪೈಕಿ ಶೇ 3.9ರಷ್ಟು ಜನರಲ್ಲಿ ರೋಗ ಪತ್ತೆಯಾಗಿದೆ. ಕೋವಿಡ್‌ನಿಂದ 2019 ಮತ್ತು 2020ರಲ್ಲಿ ಪರೀಕ್ಷೆ ಕಡಿಮೆಯಾಗಿದೆ. 2021ರಲ್ಲಿ 1.25 ಕೋಟಿ ಜನರನ್ನು ಪರೀಕ್ಷೆಗೆ ಒಳಪಡಿಸಲು ಗುರಿ ನಿಗದಿಪಡಿಸಲಾಗಿದೆ. ಈಗಾಗಲೇ 79,938 ಜನರನ್ನು ತಪಾಸಣೆ ನಡೆಸಲಾಗಿದ್ದು, 2,714 ಜನರಲ್ಲಿ ಕ್ಷಯ ಪತ್ತೆಯಾಗಿದೆ’ ಎಂದರು.

ಲಸಿಕೆಗೆ ಮನವಿ: ‘18 ವರ್ಷ ದಾಟಿದ ಎಲ್ಲರಿಗೂ ಡಿಸೆಂಬರ್ ಒಳಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಕೇಂದ್ರ ಸಚಿವರೊಂದಿಗೆ ಸಮಾಲೋಚಿಸಿ ಹೆಚ್ಚು ಲಸಿಕೆ ಪೂರೈಸುವಂತೆ ಮನವಿ ಮಾಡಲಾಗುವುದು. ಲಸಿಕೆ ಉತ್ಪಾದಕ ಕಂಪನಿಗಳು ಶೇ 25ರಷ್ಟನ್ನು ಖಾಸಗಿ ವಲಯಕ್ಕೆ ನೀಡಬಹುದು. ಸಿಎಸ್‌ಆರ್ ನಿಧಿಯಡಿ ಲಸಿಕೆ ಖರೀದಿಸಿ ಸರ್ಕಾರಕ್ಕೆ ನೀಡುವಂತೆ ದೊಡ್ಡ ದೊಡ್ಡ ಕಂಪನಿಗಳಲ್ಲಿ ಮನವಿ ಮಾಡಲಾಗುತ್ತಿದೆ. ಇದರಿಂದ ಲಸಿಕೆ ಲಭ್ಯವಾಗಿ ವೇಗವಾಗಿ ನೀಡಲು ಸಾಧ್ಯವಾಗಲಿದೆ’ಎಂದರು.

ಮಕ್ಕಳ ತಪಾಸಣೆಗೆ ‘ಆರೋಗ್ಯ ನಂದನ’

‘ರಾಜ್ಯದಲ್ಲಿರುವ ಸುಮಾರು 1.50 ಕೋಟಿ ಮಕ್ಕಳ ಆರೋಗ್ಯ ತಪಾಸಣೆಗೆ ವಿನೂತನ ಕಾರ್ಯಕ್ರಮ ‘ಆರೋಗ್ಯ ನಂದನ'ಕ್ಕೆ ಮುಖ್ಯಮಂತ್ರಿ ಶೀಘ್ರ ಚಾಲನೆ ನೀಡಲಿದ್ದಾರೆ’ ಎಂದು ಸುಧಾಕರ್‌ ತಿಳಿಸಿದರು.

‘ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿ, ಪೌಷ್ಟಿಕ ಆಹಾರವನ್ನು ಈ ಯೋಜನೆಯಡಿ ನೀಡಲಾಗುವುದು. ಕೋವಿಡ್ ಸಂಭವನೀಯ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಲಿದೆ ಎಂಬ ಅಭಿಪ್ರಾಯ ಹಿನ್ನೆಲೆಯಲ್ಲಿ ಹೊಸ ಕಾರ್ಯಕ್ರಮ ರೂಪಿಸಲಾಗಿದೆ. ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಂಟಿಯಾಗಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.