ADVERTISEMENT

ದೇವೇಗೌಡರ ಸೋಲಿಗೆ ಅವರ ಇಬ್ಬರು ಸೊಸೆಯಂದಿರೇ ಕಾರಣ: ಆರ್.ರಾಜೇಂದ್ರ

​ಪ್ರಜಾವಾಣಿ ವಾರ್ತೆ
Published 27 ಮೇ 2019, 8:45 IST
Last Updated 27 ಮೇ 2019, 8:45 IST
ಪತ್ರಿಕಾಗೋಷ್ಠಿಯಲ್ಲಿ ಕೆ.ಎನ್ ರಾಜಣ್ಣ ಅವರ ಮಗ ಆರ್.ರಾಜೇಂದ್ರ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎನ್ ರಾಜಣ್ಣ ಅವರ ಮಗ ಆರ್.ರಾಜೇಂದ್ರ ಮಾತನಾಡಿದರು.   

ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಚ್.ಡಿ.ದೇವೇಗೌಡರು ಸೋಲುವುದಕ್ಕೆಅವರ ಇಬ್ಬರು ಸೊಸೆಯಂದಿರೇ ಕಾರಣ ಎಂದು ಹೊಳೆನರಸೀಪುರದ ಜನರೇ ಹೇಳುತ್ತಿದ್ದಾರೆ ಎಂದು ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಗೌಡರ ಇಬ್ಬರೂ ಸೊಸೆಯಂದಿರು ತಮ್ಮ ಮಕ್ಕಳಿಗೆ ಟಿಕೆಟ್ ಕೊಡಲೇಬೇಕು ಎಂದು ಹಠ ಹಿಡಿದಿದ್ದುಒಬ್ಬರು ಮಂಡ್ಯಕ್ಕೆ, ಮತ್ತೊಬ್ಬರು ಹಾಸನಕ್ಕೆ. ಇಬ್ಬರಲ್ಲಿ ಯಾರೂ ಕ್ಷೇತ್ರ ಬಿಟ್ಟು ಕೊಡುವುದಕ್ಕೆ ಸಿದ್ಧರಿರಲಿಲ್ಲ. ಇದರಿಂದ ದೇವೇಗೌಡರು ಅನಿವಾರ್ಯವಾಗಿ ಒಲ್ಲದ ಮನಸ್ಸಿನಿಂದ ಸ್ಪರ್ಧಿಸಿದರು. ಮೈತ್ರಿ ಅಭ್ಯರ್ಥಿ ಗೆಲ್ಲಿಸಲು ನಾವು ಕೆಲಸ ಮಾಡಿದ್ದೆವು ಆದರೆ ಜೆಡಿಎಸ್‌ನವರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡಲಿಲ್ಲ. ಅವರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಚುನಾವಣೆಯಲ್ಲಿ ನಮಗಿಂತ ಅವರೇ ಹೆಚ್ಚುಶ್ರಮ ಹಾಕಬೇಕಿತ್ತು. ಅದನ್ನು ಮಾಡಲಿಲ್ಲ’ ಎಂದರು

ದೇವೇಗೌಡರು ಚುನಾವಣೆ ವೇಳೆ ಎಲ್ಲರ ಮನೆಗಳಿಗೂ ಭೇಟಿ ನೀಡಿದ್ದರು. ಆದರೆ ಕೆ.ಎನ್.ರಾಜಣ್ಣ ಅವರ ಮನೆಗೆ ಬರಲಿಲ್ಲ. ರಾಜಣ್ಣ ಅವರ ಪಕ್ಕದ ಮನೆಗೆ ಬಂದು ಹೋಗಿದ್ದರು. ಹಾಗಂತ ಅವರಿಗೆ ವಿರುದ್ಧವಾಗಿ ಕೆಲಸ ಮಾಡಿಲ್ಲ. ಗೆಲ್ಲಿಸಲು ಪ್ರಯತ್ನ ಮಾಡಿದ್ದೆವು ಎಂದರು.

ADVERTISEMENT

ಮೈತ್ರಿಯಿಂದ ಕಾಂಗ್ರೆಸ್‌ಗೆ ದೊಡ್ಡ ಪೆಟ್ಟು ಬಿದ್ದಿದೆ. 1 ಸ್ಥಾನ ಗೆಲ್ಲುವಷ್ಟರ ಮಟ್ಡಿಗೆ ಹೀನಾಯ ಸ್ಥಿತಿ ತಲುಪಿದೆ. ಕಳೆದ ಬಾರಿ 8ಸ್ಥಾನ, ಉಪ ಚುನಾವಣೆಯಲ್ಲಿ ಎರಡು ಸ್ಥಾನ ಸೇರಿ ಹತ್ತು ಸ್ಥಾನ ಕಾಂಗ್ರೆಸ್ ಗಳಿಸಿತ್ತು. ಆದರೆ ಈಗ ಕೇವಲ 1 ಸ್ಥಾನಕ್ಕೆ ಕುಸಿದಿದೆ ಎಂದು ಹೇಳಿದರು.

ಹಳೆ ಮೈಸೂರು ಭಾಗದಲ್ಲೇ ನಾವು ಜೆಡಿಎಸ್ ಜೊತೆಗೆ ಫೈಟ್ ಮಾಡಿ ಸ್ಥಾನ ಗೆಲ್ಲುತ್ತಿದ್ದೆವು. ಮೈತ್ರಿಯಿಂದ ಬರುವ ಸ್ಥಾನಗಳು ಬಿಜೆಪಿ ಪಾಲಾಗಿವೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ವೀರಪ್ಪ ಮೊಯಿಲಿ ಅವರಂಥ ಘಟಾನುಘಟಿ ನಾಯಕರೇ ಸೋತಿದ್ದಾರೆ. ಈ ಸ್ಥಿತಿಯಲ್ಲಿ ನಾವು ಪಕ್ಷವನ್ನು ಯಾವ ರೀತಿ ಕಟ್ಟಬೇಕು ಎಂದರು.

ರಾಜ್ಯದಲ್ಲಿ ಜನಹಿತ ಕಡೆಗಣಿಸಲಾಗಿದೆ. ಬರ ಇದ್ದರೂ ಮಂತ್ರಿ, ಮುಖ್ಯಮಂತ್ರಿ ಗಮನ ಹರಿಸಿಲ್ಲ.ಮುಖ್ಯಮಂತ್ರಿ ಅವರಂತೂ ಹೆಚ್ಚು ಸಮಯವನ್ನು ತಾಜ್ ವೆಸ್ಟ್ ಎಂಡ್ ಹೊಟೇಲ್ ನಲ್ಲಿ ಕಳೆಯುತ್ತಿದ್ದಾರೆ. ಇದೆಲ್ಲ ಕಂಡೂ ಕಂಡು ಜನರು ಮತ ಹಾಕುತ್ತಾರೆಯೇ ಎಂದು ಹೇಳಿದರು.

ರಾಹುಲ್ ಗಾಂಧಿ ಅವರು ಪ್ರಧಾನಿಯಾಗುತ್ತಾರೆ ಎಂಬ ಕಾರಣಕ್ಕೆ ಮೈತ್ರಿಗೆ ಒಪ್ಪಿ ಕೆಲಸ ಮಾಡಿದೆವು. ಜೆಡಿಎಸ್ ನವರು ಎಷ್ಟೇ ತೊಂದರೆ ಕೊಟ್ಟರೆ ಸಹಿಸಿಕೊಂಡು ಕೆಲಸ ಮಾಡಿದ್ದೇವೆ. ಇದರಿಂದ ಕಾಂಗ್ರೆಸ್ ಗೆ ದೊಡ್ಡ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.