
ಸಂಸದ ಇ ತುಕಾರಾಂ
ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ ಕ್ರೆಸ್ಟ್‌ಗೇಟ್ ಅಳವಡಿಕೆಗಾಗಿ ಆಂಧ್ರಪ್ರದೇಶ ನೀಡಿದ್ದ ಹಣದಲ್ಲಿ ₹10 ಕೋಟಿ ತಡೆಹಿಡಿದಿದ್ದ ರಾಜ್ಯ ಸರ್ಕಾರ ಅದನ್ನು ಬಿಡುಗಡೆ ಮಾಡಿದೆ ಎಂದು ಸಂಸದ ಇ.ತುಕಾರಾಂ ತಿಳಿಸಿದರು.
‘ಹಣ ತಡೆಹಿಡಿದ ಕುರಿತಂತೆ ಜನವರಿ 23 ಮತ್ತು 28ರಂದು ‘ಪ್ರಜಾವಾಣಿ’ ವರದಿ ಮಾಡಿತ್ತು. ನಾನು ತಕ್ಷಣ ರಾಜ್ಯ ಸರ್ಕಾರದೊಂದಿಗೆ ಚರ್ಚಿಸಿ ಕಾಮಗಾರಿಗೆ ಧಕ್ಕೆ ಆಗಬಾರದೆಂದು ತಿಳಿಸಿದ್ದೆ. ನನ್ನ ಮನವಿಗೆ ಸ್ಪಂದಿಸಿ ತುಂಗಭದ್ರಾ ಮಂಡಳಿಗೆ ₹10 ಕೋಟಿ ಬಿಡುಗಡೆ ಮಾಡುವಂತೆ ಆರ್ಥಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರು ಖಜಾನೆ ಇಲಾಖೆ ಆಯುಕ್ತರಿಗೆ ಫೆ.2ರಂದು ಸೂಚನೆ ನೀಡಿದ್ದಾರೆ, ಅದರ ಪ್ರತಿಯನ್ನು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಅವರಿಗೂ ಕಳುಹಿಸಲಾಗಿದೆ’ ಎಂದು ಅವರು ಶುಕ್ರವಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ತಿಂಗಳಾಂತ್ಯಕ್ಕೆ 20 ಗೇಟ್ ಸಿದ್ಧ
‘ತುಂಗಭದ್ರಾ ಅಣೆಕಟ್ಟೆಯಲ್ಲಿ ಗೇಟ್ ಅಳವಡಿಕೆ ಕಾರ್ಯ ಚುರುಕಿನಿಂದ ನಡೆಯುತ್ತಿದೆ. ಫೆ.ಅಂತ್ಯದೊಳಗೆ 20 ಗೇಟ್‌ಗಳನ್ನು ಅಳವಡಿಸುವ ಭರವಸೆಯನ್ನು ತುಂಗಭದ್ರಾ ಮಂಡಳಿಯವರು ನನಗೆ ನೀಡಿದ್ದಾರೆ’ ಎಂದು ಸಂಸದರು ಹೇಳಿದರು.
ಗೇಟ್ ತಜ್ಞ ಕನ್ಹಯ್ಯ ನಾಯ್ಡು ಅವರು ಜನವರಿ 20ರಂದು ಗೇಟ್ ಪರಿಶೀಲನೆಗೆ ಬಂದವರು ರಾಜ್ಯ ಸರ್ಕಾರ ₹10 ಕೋಟಿ ತಡೆಹಿಡಿದ ಕಾರಣ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಹೇಳಿದ್ದರು. ಆ ಸುದ್ದಿ ಜ.23ರಂದು ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅದರ ಬಳಿಕ ಹಲವು ಸಚಿವರು ಸರ್ಕಾರ ದುಡ್ಡು ತಡೆಹಿಡಿದಿಲ್ಲ ಎಂದು ಹೇಳಿಕೊಂಡಿದ್ದರು. ತುಂಗಭದ್ರಾ ಮಂಡಳಿಯ ಕಾರ್ಯದರ್ಶಿಯವರೇ ರಾಜ್ಯ ಸರ್ಕಾರಕ್ಕೆ ಹಣ ಬಿಡುಗಡೆ ಮಾಡುವಂತೆ ಪತ್ರ ಬರೆದ ವಿಚಾರವನ್ನು ಜನವರಿ 28ರಂದು ಪತ್ರಿಕೆ ವರದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.