ADVERTISEMENT

ರಾಸಾಯನಿಕ ತ್ಯಾಜ್ಯದಿಂದ ಹಸಿರಾದ ತುಂಗಭದ್ರೆ!

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 13:10 IST
Last Updated 8 ನವೆಂಬರ್ 2019, 13:10 IST
ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು
ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗಿರುವುದು   

ಹೊಸಪೇಟೆ: ಇಲ್ಲಿನ ತುಂಗಭದ್ರಾ ಜಲಾಶಯದ ನೀರು ಶುಕ್ರವಾರ ಹಸಿರು ಬಣ್ಣಕ್ಕೆ ತಿರುಗಿದೆ.

ಜಲಾಶಯದ ಮೇಲ್ಭಾಗದಿಂದ ಹೊಲ, ಗದ್ದೆಗಳ ರಸಗೊಬ್ಬರ, ಕಾರ್ಖಾನೆಗಳು ನದಿಗೆ ಬಿಡುವ ರಾಸಾಯನಿಕ ತ್ಯಾಜ್ಯದಿಂದ ಉತ್ಪತ್ತಿಯಾಗುವ ಸಯನೋ ಬ್ಯಾಕ್ಟಿರಿಯಾದಿಂದ(ಬ್ಲೂ ಗ್ರೀನ್‌ ಆಲ್ಗಿ) ಈ ರೀತಿಯಾಗಿದೆ ಎನ್ನುತ್ತಾರೆ ಪರಿಸರ ತಜ್ಞರು.

‘ತುಂಗಭದ್ರಾ ಅಣೆಕಟ್ಟೆಗೆ ಮಲೆನಾಡಿನಿಂದ ನೀರು ಹರಿದು ಬರುತ್ತದೆ. ಅಲ್ಲಿನ ಕಾಫಿ, ತೆಂಗು, ಅಡಿಕೆ ತೋಟಗಳಿಗೆ ಹೆಚ್ಚಿನ ರಸಾಯನಿಕ ಬಳಸುತ್ತಾರೆ. ಹೊಲ, ಗದ್ದೆಗಳಲ್ಲಿ ರಸಗೊಬ್ಬರ ಹಾಕುತ್ತಾರೆ. ಜಲಾಶಯದ ಸುತ್ತಮುತ್ತಲಿರುವ ಕಾರ್ಖಾನೆಗಳು ವಿಷಕಾರಕ ರಸಾಯನಿಕಗಳು ನೇರವಾಗಿ ನದಿಗೆ ಬೀಡುತ್ತವೆ. ಎಲ್ಲವೂ ಸೇರಿಕೊಂಡು ಸಯಾನೋ ಬ್ಯಾಕ್ಟಿರಿಯಾಗಳು ಹುಟ್ಟಿಕೊಂಡು, ಇಡೀ ನೀರನ್ನು ಹಸಿರು ಬಣ್ಣಕ್ಕೆ ತಿರುಗಿಸುತ್ತವೆ’ ಎನ್ನುತ್ತಾರೆ ಪರಿಸರ ತಜ್ಞ ಸಮದ್‌ ಕೊಟ್ಟೂರು.

ADVERTISEMENT

‘ಕೆಲವು ದಿನಗಳವರೆಗೆ ಮೋಡ ಮುಚ್ಚಿದ್ದ ವಾತಾವರಣ ಇದ್ದು, ಏಕಾಏಕಿ ಬಿಸಿಲು ಹೆಚ್ಚಾದಂತೆ ಬ್ಯಾಕ್ಟಿರಿಯಾಗಳ ಸಂಖ್ಯೆ ವೇಗವಾಗಿ ಹೆಚ್ಚಾಗುತ್ತದೆ. ಎರಡ್ಮೂರು ವಾರಗಳ ನಂತರ ನೀರಿನ ಬಣ್ಣ ಮೊದಲಿನ ಸಹಜ ಸ್ಥಿತಿಗೆ ಬರುತ್ತದೆ’ ಎಂದು ಹೇಳಿದರು.

‘ನೀರು ಹಸಿರಾದಾಗ ಯಾರು ಸಹ ನೇರವಾಗಿ ನೀರು ಕುಡಿಯಬಾರದು. ಅಷ್ಟೇ ಅಲ್ಲ, ಜಾನುವಾರುಗಳಿಗೂ ಕುಡಿಸಬಾರದು. ಇಂತಹ ಸಂದರ್ಭದಲ್ಲಿ ನೀರಿನಲ್ಲಿ ಈಜಾಡಿದರೆ ಚರ್ಮ ಕಾಯಿಲೆಗಳು ಬರುವ ಸಾಧ್ಯತೆಯೂ ಇರುತ್ತದೆ. ನೀರಿನ ಬಣ್ಣ ಸಹಜ ಸ್ಥಿತಿಗೆ ಬರುವವರೆಗೆ ಜನ ಎಚ್ಚರದಿಂದ ಇರಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.