ಬೆಂಗಳೂರು: ಬೆಂಗಳೂರು ಮಹಾನಗರದ ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಬಹುಕೋಟಿ ರೂಪಾಯಿ ವೆಚ್ಚದ ಜೋಡಿ ಸುರಂಗ ಮಾರ್ಗ ಯೋಜನೆ ಕೈಗೆತ್ತಿಕೊಳ್ಳುವ ಪ್ರಸ್ತಾವದ ಟೆಂಡರ್ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಇಂದಿರಾ ನಗರದ ಡಾ.ಆದಿಕೇಶವುಲು ರವೀಂದ್ರ, ಜೆ.ಪಿ ನಗರದ ವಿನೋದ್ ವ್ಯಾಸುಲು ಮತ್ತು ಬಸವನಗುಡಿಯ ಎನ್.ಎಸ್.ಮುಕುಂದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ರಾಜ್ಯ ಪರಿಸರ ಅಧ್ಯಯನ ಮೌಲ್ಯಮಾನ ಪ್ರಾಧಿಕಾರ (ಎಸ್ಇಐಎಎ) ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್), ಬೆಂಗಳೂರು ಸ್ಮಾರ್ಟ್ ಮೂಲಸೌಕರ್ಯ ನಿಯಮಿತ (ಬಿ-ಸ್ಮೈಲ್) ರೋಡಿಕ್ ಕನ್ಸಲ್ಟೆಂಟ್ಸ್ ಮತ್ತು ಆಲ್ಟಿನೋಕ್ ಕನ್ಸಲ್ಟೆಂಟಿಂಗ್ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಿದೆ.
ಜೋಡಿ ಸುರಂಗ ರಸ್ತೆ ಯೋಜನೆಗೆ 2025ರ ಜುಲೈ 14ರಂದು ಕರೆದಿರುವ ಟೆಂಡರ್ ಅಧಿಸೂಚನೆ ರದ್ದುಗೊಳಿಸಬೇಕು. ಪೂರ್ವ-ಬಿಡ್, ಬಿಡ್ ಸಲ್ಲಿಕೆ, ಬಿಡ್ ಮೌಲ್ಯಮಾಪನ ಮತ್ತು ಉದ್ದೇಶಿತ ಟೆಂಡರ್ ಪ್ರಸ್ತಾವ ಅಂತಿಮಗೊಳಿಸುವ ಪತ್ರ ಸೇರಿದಂತೆ ಎಲ್ಲಾ ಹಂತಗಳ ಪ್ರಕ್ರಿಯೆ ರದ್ದುಗೊಳಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಹೆಬ್ಬಾಳದಿಂದ ಸಿಲ್ಕ್ ಬೋರ್ಡ್ ವರೆಗೆ ಅಂದಾಜು ₹19 ಸಾವಿರ ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ಯೋಜನೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.
ಉದ್ದೇಶಿತ ಸುರಂಗ ರಸ್ತೆ ನಿರ್ಮಾಣಕ್ಕಾಗಿ ಪರಿಸರ ಪರಿಣಾಮ ಮೌಲ್ಯಮಾಪನ ನಡೆಸಿಲ್ಲ. ಸಂಚಾರ ಯೋಜನೆ ಮತ್ತು ಸ್ವಾಧೀನದ ನಿರ್ದಿಷ್ಟ ವೆಚ್ಚದ ಪಟ್ಟಿಯನ್ನೂ ಸಿದ್ಧಪಡಿಸಿಲ್ಲ. ಚಾಲ್ತಿಯಲ್ಲಿರುವ ಎಲ್ಲ ಒಳಚರಂಡಿ ಮತ್ತು ರಾಜಕಾಲುವೆ ಮಾರ್ಗ ಮತ್ತು ಮಳೆ ನೀರು ಮಾರ್ಗಗಳ ನಕ್ಷೆ ಸಿದ್ಧಪಡಿಸಿಲ್ಲ. ಸುರಂಗ ಮಾರ್ಗದಿಂದ ರಾಜಕಾಲುವೆ ಮಾರ್ಗಗಳ ನಕ್ಷೆಗೆ ಅಡ್ಡಿ ಉಂಟಾದರೆ ಪರ್ಯಾಯ ವ್ಯವಸ್ಥೆ ಏನು ಎಂಬುದನ್ನು ಪ್ರಸ್ತಾವದಲ್ಲಿ ಕಾಣಿಸಿಲ್ಲ" ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.