ಸಾಂಕೇತಿಕ ಚಿತ್ರ
ಬಾಗಲಕೋಟೆ: ಕಳೆದ ಹದಿನೈದು ದಿನಗಳಲ್ಲಿ ಮಹಾರಾಷ್ಟ್ರದ ಸಾಂಗ್ಲಿ ಮಾರುಕಟ್ಟೆಯಲ್ಲಿ ಅರಿಸಿನದ ಬೆಲೆಯು ಕ್ವಿಂಟಲ್‌ಗೆ ₹6 ಸಾವಿರ ಇಳಿಕೆಯಾಗಿದೆ. ಇದರಿಂದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಜಿಲ್ಲೆಯ ರಬಕವಿ ಬನಹಟ್ಟಿ, ಮುಧೋಳ, ತೇರದಾಳ, ಜಮಖಂಡಿ ತಾಲ್ಲೂಕಿನ 3,500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಅರಿಸಿನ ಬೆಳೆಯಲಾಗುತ್ತದೆ. ಆದರೆ, ಉತ್ಪನ್ನ ಮಾರಾಟಕ್ಕೆ ಸಾಂಗ್ಲಿಗೆ ಹೋಗಬೇಕಿದೆ. ಜಿಲ್ಲೆಯ ಮಹಾಲಿಂಗಪುರದಲ್ಲಿ ಮಾರುಕಟ್ಟೆ ಸ್ಥಾಪಿಸುವ ಪ್ರಯತ್ನ ನಡೆದರೂ ಫಲಪ್ರದವಾಗಿಲ್ಲ.
‘ಎ’ ಗ್ರೇಡ್ ಅರಿಸಿನಕ್ಕೆ ಹದಿನೈದು ದಿನಗಳ ಹಿಂದೆ ಪ್ರತಿ ಕ್ವಿಂಟಲ್‌ಗೆ ₹19,800 ಧಾರಣೆ ಇತ್ತು. ಈಗ ₹14 ಸಾವಿರದ ಆಸುಪಾಸಿನಲ್ಲಿದೆ.
ಘಟ್ಟಾ ಅರಿಸಿನ ಬೆಲೆಯು ಪ್ರತಿ ಕ್ವಿಂಟಲ್‌ಗೆ ₹13 ಸಾವಿರ ಇದ್ದರೆ, ಖಣಿ ಅರಿಸಿನದ ಬೆಲೆ ₹10 ಸಾವಿರಕ್ಕೆ ಇಳಿಕೆಯಾಗಿದೆ. ವಿವಿಧ ಬಗೆಯ ಅರಿಸಿನದ ಬೆಲೆ ಇಳಿಕೆಯಾಗುತ್ತಲೇ ಸಾಗಿದೆ.
‘ಔಷಧ, ರಸಗೊಬ್ಬರ, ಕೂಲಿ ಕಾರ್ಮಿಕರ ವೆಚ್ಚ ಹೆಚ್ಚಾಗಿದೆ. ಮೊದಲ ಬಾರಿ ಬೆಳೆದಾಗ ಪ್ರತಿ ಎಕರೆಗೆ ಅಂದಾಜು ₹1 ಲಕ್ಷಕ್ಕೂ ಹೆಚ್ಚು ಬರುತ್ತದೆ. ಪ್ರತಿ ಕ್ವಿಂಟಲ್‌ಗೆ ಕನಿಷ್ಠ ₹15 ಸಾವಿರಕ್ಕೂ ಹೆಚ್ಚು ದೊರತರೆ ಹಾಕಿದ ಬಂಡವಾಳಕ್ಕೆ ಮೋಸವಾಗು ವುದಿಲ್ಲ. ಇಲ್ಲದಿದ್ದರೆ ನಷ್ಟ ಆಗುತ್ತದೆ. ಕಳೆದ ಮೂರು ವರ್ಷಗಳಿಂದ ಅರಿಸಿನಕ್ಕೆ ಉತ್ತಮ ಬೆಲೆ ದೊರೆಯುತ್ತಿಲ್ಲ’ ಎನ್ನುತ್ತಾರೆ ಬನಹಟ್ಟಿಯ ರೈತ ಸಿದ್ದು ಗೌಡಪ್ಪನವರ.
‘ಈ ಬಾರಿ ಜಿಲ್ಲೆಯಲ್ಲಿ 1 ಲಕ್ಷ ಕ್ವಿಂಟಲ್‌ನಷ್ಟು ಉತ್ಪಾದನೆಯಾಗುವ ಅಂದಾಜಿದೆ. ಪ್ರತಿ ಎಕರೆಗೆ ಸರಾಸರಿ 25 ಕ್ವಿಂಟಲ್‌ನಷ್ಟು ಇಳುವರಿ ಬರುತ್ತದೆ. ಈ ವರ್ಷ ಇಳುವರಿ ಚೆನ್ನಾಗಿದೆ’ ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಹಕಾಟೆ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.