ADVERTISEMENT

ಇಬ್ಬರ ಸಾವಿಗೆ ಕಾರಣವಾಗಿದ್ದ ಒಂಟಿ ಸಲಗ ಸೆರೆ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 22:15 IST
Last Updated 23 ಫೆಬ್ರುವರಿ 2023, 22:15 IST
ಅರಣ್ಯ ಇಲಾಖೆಯವರು ಸೆರೆ ಹಿಡಿದ ಒಂಟಿ ಸಲಗ
ಅರಣ್ಯ ಇಲಾಖೆಯವರು ಸೆರೆ ಹಿಡಿದ ಒಂಟಿ ಸಲಗ   

ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲ್ಲೂಕಿನ ರೆಂಜಿಲಾಡಿ ಗ್ರಾಮದಲ್ಲಿ ಇಬ್ಬರ ಸಾವಿಗೆ ಕಾರಣವಾದ ಒಂಟಿ ಸಲಗವನ್ನು ಅರಣ್ಯ ಇಲಾಖೆಯವರು ಗುರುವಾರ ಸೆರೆ ಹಿಡಿದಿದ್ದಾರೆ.

ರೆಂಜಿಲಾಡಿ ಗ್ರಾಮದ ನೈಲಾದಲ್ಲಿ ಸೋಮವಾರ ಆನೆ ದಾಳಿಯಿಂದ ಸ್ಥಳೀಯ ರಂಜಿತಾ (22) ಹಾಗೂ ರಮೇಶ್ ರೈ (55) ಮೃತಪಟ್ಟಿದ್ದರು. ಅವರ ಮೇಲೆ ದಾಳಿ ನಡೆಸಿದ ಆನೆ ಸೆರೆ ಹಿಡಿಯಲು ಅರಣ್ಯ ಇಲಾಖೆ ವಿಶೇಷ ಕಾರ್ಯಾಚರಣೆ ಕೈಗೊಂಡಿತ್ತು.

ಮೂರು ದಿನ ಕಾಡಿನಲ್ಲಿ ಆನೆ ಹಿಡಿಯುವ ಕಾರ್ಯಾಚರಣೆ ನಡೆಯಿತು.

ADVERTISEMENT

‘ದಾಳಿ ನಡೆಸಿದ ಸ್ಥಳದಿಂದ ಸುಮಾರು 5 ಕಿ.ಮೀ ದೂರದಲ್ಲಿ ಆನೆ ಪತ್ತೆಯಾಗಿತ್ತು. ಅರಿವಳಿಕೆ ಮದ್ದು ಹಾರಿಸಿ ಸೆರೆ ಹಿಡಿದಿದ್ದೇವೆ. ಒಟ್ಟು 4 ಆನೆಗಳು ಕಾಣಿಸಿಕೊಂಡಿದ್ದವು. ಆದರೆ, ಈ ಒಂಟಿ ಸಲಗವೇ ಇಬ್ಬರನ್ನು ಬಲಿಪಡೆದಿತ್ತು. ಇದನ್ನು ಖಚಿತಪಡಿಸಿಕೊಂಡು ಒಂಟಿ ಸಲಗವನ್ನು ಮಾತ್ರ ಸೆರೆಹಿಡಿದಿದ್ದು, ದುಬಾರೆ ಆನೆ ಶಿಬಿರಕ್ಕೆ ಸಾಗಿಸಲಾಗುವುದು’ ಎಂದು ದಕ್ಷಿಣ ಕನ್ನಡ ಜಿಲ್ಲೆಯ ಉಪಅರಣ್ಯ ಸಂರಕ್ಷಣಾಧಿಕಾರಿ ದಿನೇಶ್‌ ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.