
ವಿಜಯಪುರ ಜಿಲ್ಲೆ ಹಲಸಂಗಿ ಗ್ರಾಮದ ಬಂಗಾರದ ಅಂಗಡಿ ದರೋಡೆ ಪ್ರಕರಣವನ್ನು ಬೇಧಿಸಿ, ಕಳುವಾದ ಚಿನ್ನಾಭರಣವನ್ನು ಹಿಂದಿರುಗಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಂಡಕ್ಕೆ ‘ಭೂಮಿಕಾ ಜ್ಯುವೆಲ್ಲರಿ’ ಅಂಗಡಿ ಮಾಲೀಕ ಮಹಾರುದ್ರ ಕಂಚಗಾರ ದಂಪತಿ ಕೃತಜ್ಞತೆ ಸಲ್ಲಿಸಿದರು
ವಿಜಯಪುರ: ಜಿಲ್ಲೆಯ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಲಸಂಗಿ ಗ್ರಾಮದಲ್ಲಿ ಜನವರಿ 26ರಂದು ನಡೆದಿದ್ದ ಬಂಗಾರದ ಅಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಇಬ್ಬರು ದರೋಡೆಕೋರರನ್ನು ಬಂಧಿಸಿ, ಕದ್ದ ಮಾಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಹಾರಾಷ್ಟ್ರದ ಸಂಖ ಗ್ರಾಮದ ಡೈರಿ ವ್ಯಾಪಾರಿ, ಹಾಲಿ ಪುಣೆಯಲ್ಲಿ ವಾಸವಾಗಿರುವ ಹಣಮಂತ ವಾಘೋಲಿ(28) ಮತ್ತು ಶಿವರಾಜ್ ನಾವಿ(28) ಎಂಬುವವರನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಬಂಧಿತ ಆರೋಪಿಗಳಿಂದ ₹22 ಲಕ್ಷ ಮೌಲ್ಯದ 205 ಗ್ರಾಂ ಬಂಗಾರದ ಆಭರಣ ಮತ್ತು 1 ಕೆಜಿ ಬೆಳ್ಳಿಯ ಆಭರಣಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಮೂರು ಕಂಟ್ರಿ ಪಿಸ್ತೂಲ್, 26 ಜೀವಂತ ಗುಂಡುಗಳು, ಒಂದು ಏರ್ ಗನ್ ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ಸೊಲ್ಲಾಪುರದಲ್ಲಿ ಬಂಗಾರದ ಅಂಗಡಿ ದರೋಡೆಗೆ ಆರಂಭದಲ್ಲಿ ಯೋಜನೆ ರೂಪಿಸಿದ್ದರು. ಆದರೆ, ಆ ದಿನ ಅಲ್ಲಿಯ ಬಹುತೇಕ ಚಿನ್ನಾಭರಣ ಮಳಿಗೆಗಳಲ್ಲಿ ಗ್ರಾಹಕರು ಹೆಚ್ಚು ಇದ್ದ ಕಾರಣ ಪೂರ್ವ ಯೋಜಿತ ದರೋಡೆ ಕೈಬಿಟ್ಟು, ಹಲಸಂಗಿಗೆ ಬಂದು ದರೋಡೆ ಮಾಡಿದ್ದಾರೆ ಎಂಬುದು ಆರೋಪಿಗಳ ವಿಚಾರಣೆಯಿಂದ ತಿಳಿಸಿದುಬಂದಿದೆ ಎಂದರು.
ಆರೋಪಿಗಳು ಸೊಲ್ಲಾಪುರ–ಝಳಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಹಲಸಂಗಿಯಲ್ಲಿ ದರೋಡೆ ಮಾಡಿ ಬಳಿಕ ಚಡಚಣ ಮಾರ್ಗವಾಗಿ ಜತ್ ಮೂಲಕ ಪರಾರಿಯಾಗಿದ್ದರು. ದರೋಡೆಕೋರರು ಚಲಿಸಿದ 100 ಕಿ.ಮೀ. ಮಾರ್ಗದಲ್ಲಿ ಇರುವ ಎಲ್ಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ, ತನಿಖೆ ಕೈಗೊಂಡು ಬಂಧಿಸುವಲ್ಲಿ ಪೊಲೀಸ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ ಎಂದರು.
ಪ್ರಕರಣದ ಹಿನ್ನೆಲೆ:
ಜನವರಿ 26 ರಂದು ಮಧ್ಯಾಹ್ನ 3.30ರ ಸುಮಾರಿಗೆ ಇಬ್ಬರೂ ಆರೋಪಿಗಳು ಮುಖಕ್ಕೆ ಕಪ್ಪು ಬಟ್ಟೆ ಮತ್ತು ಹೆಲ್ಮೇಟ್ ಹಾಕಿಕೊಂಡು ತಮ್ಮ ಚಹರೆಪಟ್ಟಿ ಮರೆ ಮಾಚಿ ಕಪ್ಪು ಬಣ್ಣದ ಯುನಿಕಾರ್ನ್ ಬೈಕ್ ಮೇಲೆ ಹಲಸಂಗಿ ಗ್ರಾಮಕ್ಕೆ ಬಂದು, ತಮ್ಮ ಹತ್ತಿರವಿದ್ದ ಪಿಸ್ತೂಲ್ ತೋರಿಸಿ, ಮಹಾರುದ್ರ ಕಂಚಗಾರ ಅವರ ‘ಭೂಮಿಕಾ ಜ್ಯುವೆಲ್ಲರಿ’ ಬಂಗಾರದ ಅಂಗಡಿಯಲ್ಲಿದ್ದ ಚಿನ್ನಾಭರಣವನ್ನು ದರೋಡೆ ಮಾಡಿದ್ದರು.
ದರೋಡೆ ಮಾಡುವ ದೃಶ್ಯವನ್ನು ಮೊಬೈಲ್ ಕ್ಯಾಮೆರಾದಲ್ಲಿ ಚಿತ್ರೀಕರಿಸುತ್ತಿದ್ದ ವ್ಯಕ್ತಿಯ ಮೇಲೆ ಆರೋಪಿಗಳು ಗುಂಡು ಹಾರಿಸಿದ್ದರು. ಈ ವೇಳೆ ಅಂಗಡಿ ಮುಂದೆ ನಿಂತಿದ್ದ ಬಾಲಕನೊಬ್ಬನ ಕಾಲಿಗೆ ತಗುಲಿ, ಗಾಯವಾಗಿತ್ತು.
ಭಯಭೀತಿ ಹುಟ್ಟಿಸಿದ್ದ ಈ ದರೋಡೆ ಪ್ರಕರಣದ ಆರೋಪಿಗಳ ಪತ್ತೆ ಹಚ್ಚಲು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಗೌಡ ಹಟ್ಟಿ, ಇಂಡಿ ಡಿಎಸ್‌ಪಿ ಸದಾಶಿವ ಕಟ್ಟೀಮನಿ, ಸಿಇಎನ್ ಪೊಲೀಸ್ ಠಾಣೆ ಡಿಎಸ್‌ಪಿ ಸುನೀಲ ಕಾಂಬಳೆ ನೇತೃತ್ವದಲ್ಲಿ ಚಡಚಣ ಸಿಪಿಐ ಪರಶುರಾಮ ಮನಗೂಳಿ, ಝಳಕಿ ಪಿಎಸ್ಐ ಮಂಜುನಾಥ ತಿರಕ್ಕನ್ನವರ, ಚಡಚಣ ಪಿಎಸ್ಐ ಸೋಮೇಶ ಗೆಜ್ಜಿ, ಹೊರ್ತಿ ಪಿಎಸ್ಐ ರಾಕೇಶ ಬಗಲಿ ಹಾಗೂ ಕ್ರೈಂ, ತಾಂತ್ರಿಕ ಸಿಬ್ಬಂದಿ ಒಳಗೊಂಡಂತೆ 2 ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು.
ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಘಟನೆ ನಡೆದ ದಿನದ ತಾಂತ್ರಿಕ ಸಾಕ್ಷಿ, ಪುರಾವೆಗಳನ್ನು ಗುರುತಿಸಿ ಎಲ್ಲ ಆಯಾಮಗಳಿಂದ ತನಿಖೆ ಕೈಕೊಂಡಿ, ಘಟನೆ ನಡೆದ 20 ದಿನಗಳ ಒಳಗಾಗಿ ಆರೋಪಿಗಳನ್ನು ವಶಕ್ಕೆ ಪಡೆದು, ದರೋಡೆಯಾದ ಎಲ್ಲ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ಯಶಸ್ವಿ ಕಾರ್ಯಾಚರಣೆ ಮಾಡಿದ ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ಪ್ರಶಂಸನಾ ಪತ್ರ ನೀಡಿ, ಗೌರವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.