ಕೆಇಎ
ಬೆಂಗಳೂರು: ಪ್ರಸಕ್ತ ಸಾಲಿನ ಪದವಿ ಮತ್ತು ಸ್ನಾತಕೋತ್ತರ ಪದವಿಯ ಆಯುಷ್ ಕೋರ್ಸ್‌ಗಳ ಪ್ರವೇಶಕ್ಕೆ ಕೊನೆ ಸುತ್ತಿನ ಸೀಟು ಹಂಚಿಕೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅವಕಾಶ ಕಲ್ಪಿಸಿದ್ದು, ಅರ್ಹ ಅಭ್ಯರ್ಥಿಗಳು ಇದೇ 23ರಿಂದ ಕೋರ್ಸ್ ಶುಲ್ಕವನ್ನು ಮುಂಗಡವಾಗಿ ಪಾವತಿಸಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು.
ಭಾರತೀಯ ವೈದ್ಯ ಪದ್ಧತಿಯ ರಾಷ್ಟ್ರೀಯ ಆಯೋಗ ಈ ಕೋರ್ಸ್‌ಗಳ ಪ್ರವೇಶಕ್ಕೆ ಇದೇ 31ರವರೆಗೆ ಸಮಯ ನೀಡಿದೆ. ಹೀಗಾಗಿ, ಹಂಚಿಕೆಯಾಗದೆ ಉಳಿದಿರುವ ಸೀಟುಗಳನ್ನು ಕೊನೆ ಸುತ್ತಿನಲ್ಲಿ ಹಂಚಿಕೆ ಮಾಡಲಾಗುವುದು ಎಂದು ಕೆಇಎ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.
ಸದ್ಯ ಯುಜಿ ಆಯುಷ್‌ನಲ್ಲಿ 436 ಹಾಗೂ ಪಿಜಿ ಆಯುಷ್‌ನಲ್ಲಿ 201 ಸೀಟು ಹಂಚಿಕೆಗೆ ಲಭ್ಯ ಇವೆ. ಇನ್ನೂ ಕೆಲವರು ಕಾಲೇಜುಗಳಿಗೆ ವರದಿ ಮಾಡಿಕೊಳ್ಳದಿದ್ದರೆ ಅಂಥವರ ಸೀಟುಗಳನ್ನೂ ಹಂಚಿಕೆಗೆ ಪರಿಗಣಿಸಲಾಗುವುದು ಎಂದರು.
ವೇಳಾಪಟ್ಟಿ: ‘ಕೋರ್ಸ್ ಶುಲ್ಕ ಮುಂಗಡ ಪಾವತಿಗೆ ಡಿ 26ರವರೆಗೆ ಅವಕಾಶ ನೀಡಲಾಗಿದೆ. ಶುಲ್ಕ ಪಾವತಿಸಿದವರು ಡಿ. 24ರಿಂದ 26ರವರೆಗೆ ಆಪ್ಷನ್ಸ್ ದಾಖಲಿಸಬೇಕು. ಡಿ. 26ರಂದು ಸಂಜೆ 6ಕ್ಕೆ ತಾತ್ಕಾಲಿಕ ಹಾಗೂ 27ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುವುದು. ಡಿ.27ರಿಂದ 29ರವರೆಗೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡು, 30ರೊಳಗೆ ಕಾಲೇಜುಗಳಿಗೆ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ವಿವರಗಳು ವೆಬ್ ಸೈಟ್‌ನಲ್ಲಿ ಲಭ್ಯವಿದೆ’ ಎಂದೂ ಅವರು ತಿಳಿಸಿದ್ದಾರೆ.
ರಾಯಚೂರು ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ನಡೆದ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಡೆದ ಅಂಕಗಳ ಅಂತಿಮ ಪಟ್ಟಿಯನ್ನು ಕೆಇಎ ವೆಬ್ ಸೈಟ್‌ನಲ್ಲಿ ಪ್ರಕಟಿಸಿದೆ.
‘ನ. 24ರಂದು ಪರೀಕ್ಷೆ ನಡೆದಿತ್ತು. ಕೇವಲ 19 ದಿನಗಳಲ್ಲೇ ಅಭ್ಯರ್ಥಿಗಳು ಪಡೆದಿರುವ ಅಂಕಗಳ ತಾತ್ಕಾಲಿಕ ಪಟ್ಟಿ ಪ್ರಕಟಿಸಲಾಗಿತ್ತು. ಇದಕ್ಕೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿ, ಅಂತಿಮ ಅಂಕಪಟ್ಟಿ ಪ್ರಕಟಿಸಿ, ವಿಶ್ವವಿದ್ಯಾಲಯಕ್ಕೆ ರವಾನಿಸಲಾಗಿದೆ’ ಎಂದು ಎಚ್. ಪ್ರಸನ್ನ ತಿಳಿಸಿದ್ದಾರೆ.
ಒಟ್ಟು 16 ವಿಷಯಗಳ 24 ಹುದ್ದೆಗಳಿಗೆ ಒಟ್ಟು 1,175 ಮಂದಿ ಪರೀಕ್ಷೆ ಬರೆದಿದ್ದರು. ಅಂತಿಮ ಅಂಕಪಟ್ಟಿಯ ಆಧಾರದ ಮೇಲೆ ಆಯ್ಕೆ ಪಟ್ಟಿಯನ್ನು ವಿಶ್ವವಿದ್ಯಾಲಯವೇ ಮಾಡಲಿದೆ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.