ಬೆಂಗಳೂರು: ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಬಿಡುಗಡೆ ಮಾಡಿರುವ ‘ಕಲಿಕಾ ಪಠ್ಯಕ್ರಮ ಆಧಾರಿತ ಕಲಿಕಾ ಚೌಕಟ್ಟು’ (ಎಲ್‌ಒಸಿಎಫ್) ಕರಡು ಪ್ರತಿಗೆ ರಾಜ್ಯ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಸುದ್ದಿಗಾರರ ಜೊತೆ ಈ ಬಗ್ಗೆ ಮಾತನಾಡಿದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್, ‘ಯುಜಿಸಿ ರೂಪಿಸಿದ ಪಠ್ಯಕ್ರಮವನ್ನು ಒಪ್ಪಿಕೊಳ್ಳುವ ಪ್ರಶ್ನೆಯೇ ಇಲ್ಲ’ ಎಂದರು.
‘ಯುಜಿಸಿ ಒಂದು ನಿಯಂತ್ರಣ ಸಂಸ್ಥೆ. ಅದು ಪಠ್ಯಕ್ರಮ ರೂಪಿಸಲು ಅಧಿಕಾರ ಹೊಂದಿಲ್ಲ. ಪಠ್ಯಕ್ರಮ ರೂಪಿಸುವ ಅಧಿಕಾರವು ಪ್ರತಿ ವಿಶ್ವವಿದ್ಯಾಲಯದ ಅಧ್ಯಯನ ಮಂಡಳಿಗೆ (ಬಿಒಎಸ್) ಇದೆ. ಯುಜಿಸಿ ಬಿಡುಗಡೆ ಮಾಡಿದ ಪಠ್ಯಕ್ರಮ ಕರಡನ್ನು ಅಧ್ಯಯನ ಮಾಡಲು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಮಂಡಳಿ ತಜ್ಞರ ಸಮಿತಿಯನ್ನು ರಚಿಸಲಿದೆ’ ಎಂದರು.
‘ಯುಜಿಸಿ ಎಲ್ಲ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಿರುವುದು ಏಕೆಂದು ನಮಗೂ ಅರ್ಥವಾಗುತ್ತಿಲ್ಲ. ಅದು ತನ್ನ ಮಿತಿಗಳನ್ನು ತಿಳಿದುಕೊಳ್ಳಬೇಕು. ಯುಜಿಸಿಗೆ ಪಠ್ಯದ ಚೌಕಟ್ಟು ರೂಪಿಸುವ ಹಕ್ಕಿದೆಯೇ ಹೊರತು ಪಠ್ಯಕ್ರಮ ಅಲ್ಲ’ ಎಂದರು.
‘ಯುಜಿಸಿ ತೆಗೆದುಕೊಂಡ ಇತ್ತೀಚಿನ ಕ್ರಮಗಳು ಕೇಂದ್ರ ಸರ್ಕಾರವು ಶಿಕ್ಷಣ ವ್ಯವಸ್ಥೆಯ ಮೇಲೆ ಹಿಡಿತ ಸಾಧಿಸಲು ಮತ್ತು ತನ್ನ ಸಿದ್ಧಾಂತಗಳನ್ನು ಮಕ್ಕಳ ಮೇಲೆ ಹೇರಲು ಪ್ರಯತ್ನಿಸುತ್ತಿದೆ ಎಂಬುದನ್ನು ತೋರಿಸುತ್ತವೆ. ಯುಜಿಸಿ ತನ್ನ ಕಾರ್ಯಸೂಚಿಯನ್ನು ಹೇರಲು ನಾವು ಅವಕಾಶ ನೀಡುವುದಿಲ್ಲ. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳನ್ನು ನೇಮಿಸುವ ರಾಜ್ಯ ಸರ್ಕಾರದ ಅಧಿಕಾರವನ್ನು ತೆಗೆದುಹಾಕಲು ಹಿಂದಿನ ಕರಡು ಪ್ರತಿಯಲ್ಲಿ ಯುಜಿಸಿ ಯತ್ನಿಸಿದ್ದನ್ನು ಮರೆಯುವಂತಿಲ್ಲ. ಅದಕ್ಕೆ ವಿರೋಧ ವ್ಯಕ್ತಪಡಿಸಿದವರಲ್ಲಿ ನಾವೇ ಮೊದಲಿಗರು. ಈಗ ಪಠ್ಯಕ್ರಮದ ಮೂಲಕ ಯುಜಿಸಿ ಮತ್ತೊಂದು ಪ್ರಯತ್ನ ಮಾಡುತ್ತಿದೆ’ ಎಂದು ಆರೋಪಿಸಿದರು.
ಮುಂದಿನ ಸಚಿವ ಸಂಪುಟ ಸಭೆಗೆ ಎಸ್‌ಇಪಿ: ‘ರಾಜ್ಯ ಶಿಕ್ಷಣ ನೀತಿ ಆಯೋಗ (ಎಸ್‌ಇಪಿ) ನೀಡಿರುವ ವರದಿಯನ್ನು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು. ಎಸ್‌ಇಪಿಯ ಸಂಕ್ಷಿಪ್ತ ವರದಿ ಸಿದ್ಧಪಡಿಸಲು ಉನ್ನತ ಶಿಕ್ಷಣ ಅಧಿಕಾರಿಗಳ ಪ್ರತ್ಯೇಕ ತಂಡ ರಚಿಸಲಾಗಿದೆ’ ಎಂದು ಸಚಿವರು ತಿಳಿಸಿದರು.
‘ವಿಜ್ಞಾನ ಕಲಾ ವಿಭಾಗಕ್ಕೂ ಎಇಡಿಪಿ’
‘ವಾಣಿಜ್ಯ ಪದವಿಯ (ಬಿ.ಕಾಂ) ನಾಲ್ಕು ಕೋರ್ಸ್‌ಗಳಿಗೆ ಸೀಮಿತವಾಗಿರುವ ‘ಅಪ್ರೆೆಂಟಿಶಿಪ್ ಎಂಬೆಡೆಡ್ ಡಿಗ್ರಿ ಪ್ರೋಗ್ರಾಮ್ (ಎಇಡಿಪಿ) ಅನ್ನು ಮುಂದಿನ ದಿನಗಳಲ್ಲಿ ಡಿಪ್ಲೊಮಾ ಜತೆಗೆ ವಿಜ್ಞಾನ ಮತ್ತು ಕಲಾ ವಿಭಾಗಕ್ಕೂ ಪರಿಚಯಿಸುವ ಚಿಂತನೆ ಇದೆ’ ಎಂದು ಡಾ.ಎಂ.ಸಿ. ಸುಧಾಕರ್ ತಿಳಿಸಿದರು. ಯುಜಿಸಿ ಪರಿಷ್ಕೃತ ಮಾರ್ಗಸೂಚಿಗಳ ಅನ್ವಯ 68 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಬೋಟ್ (ಬಿಒಎಟಿ-ಶಿಷ್ಯವೇತನ ತರಬೇತಿ ಮಂಡಳಿ) ನಡುವೆ ಒಡಂಬಡಿಕೆಗೆ ಸಹಿ ಹಾಕುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ‘ನೇರವಾಗಿ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಬಿ.ಕಾಂ ಕೋರ್ಸ್‌ಗಳಿಗೆ 2024-25ನೇ ಸಾಲಿನಲ್ಲಿ ಎಇಡಿಪಿ ಶೈಕ್ಷಣಿಕ ಕೋರ್ಸ್ ಪರಿಚಯಿಸಲಾಗಿದೆ. ರಾಜ್ಯದ 44 ಪ್ರಥಮ ದರ್ಜೆ ಕಾಲೇಜುಗಳ ಸುಮಾರು 1600 ವಿದ್ಯಾರ್ಥಿಗಳು ಅದರಡಿ ಪ್ರವೇಶ ಪಡೆದಿದ್ದರು. ಈ ಬಾರಿ ಮತ್ತೆೆ 24 ಕಾಲೇಜುಗಳಲ್ಲಿ 2600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.