ADVERTISEMENT

ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಹೆಸರಿಡಿ: ಉಗ್ರಪ್ಪ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 15:55 IST
Last Updated 24 ಜನವರಿ 2026, 15:55 IST
ವಿ.ಎಸ್.ಉಗ್ರಪ್ಪ
ವಿ.ಎಸ್.ಉಗ್ರಪ್ಪ   

ಬೆಂಗಳೂರು: ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರು ಇಡಿ ಎಂದು ಒತ್ತಾಯಿಸಿ ಕೆಪಿಸಿಸಿ ಉಪಾಧ್ಯಕ್ಷ ವಿ.ಎಸ್‌.ಉಗ್ರಪ್ಪ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

2014ರಲ್ಲಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಬಂದ ನಂತರ ಮಹಾತ್ಮ ಗಾಂಧಿ ಅವರ ಹೆಸರನ್ನು ತೊಡೆದುಹಾಕುವ ಕೃತ್ಯಗಳು ನಡೆಯುತ್ತಲೇ ಇವೆ ಎಂದು ಅವರು ಆಪಾದಿಸಿದ್ದಾರೆ.

ಗ್ರಾಮೀಣ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಆರಂಭಿಸಲಾಗಿದ್ದ ‘ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ಯನ್ನು ಪ್ರಧಾನಿ ಮೋದಿ ಅವರ ಸರ್ಕಾರವು ರದ್ದುಪಡಿಸಿದೆ. ಗಾಂಧೀಜಿ ಹಂತಕ ಗೋಡ್ಸೆ ಮತ್ತು ಆರ್‌ಎಸ್‌ಎಸ್‌ನ ಸಿದ್ಧಾಂತಗಳನ್ನು ಜಾರಿಗೆ ತರುವ ರಹಸ್ಯ ಕಾರ್ಯಸೂಚಿಯ ಭಾಗವಾಗಿ ಹೀಗೆ ಮಾಡಲಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಬಿಜೆಪಿಯ ಈ ಹುನ್ನಾರಕ್ಕೆ ಕಾಂಗ್ರೆಸ್‌ ತಕ್ಕ ಉತ್ತರ ನೀಡಬೇಕಿದೆ. ಜನಮಾನಸದಲ್ಲಿ ಗಾಂಧೀಜಿ ಅವರ ಹೆಸರು ಉಳಿಯುವಂತೆ ಮಾಡಬೇಕಿದೆ. ಇದಕ್ಕಾಗಿ ರಾಜ್ಯದ ಎಲ್ಲ ಗ್ರಾಮ ಪಂಚಾಯತಿ ಕಚೇರಿಗಳ ಹೆಸರನ್ನು, ‘ರಾಷ್ಟ್ರಪಿತ ಮಹಾತ್ಮಗಾಂಧಿ ಗ್ರಾಮ ಪಂಚಾಯತಿ ಕಚೇರಿ’ ಎಂದು ಮರುನಾಮಕರಣ ಮಾಡಬೇಕು. ಇತರ ಸ್ಥಳೀಯ ಸಂಸ್ಥೆಗಳ ಕಚೇರಿಗಳಿಗೂ ಇದೇ ರೀತಿಯ ಹೆಸರು ಇಡಬೇಕು’ ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.