ADVERTISEMENT

ಪರಿಷತ್‌ಗೆ ಉಮಾಶ್ರೀ, MR ಸೀತಾರಾಮ್‌, ಸುಧಾಮ್‌ ದಾಸ್‌: ಸಚಿವರ ವಿರೋಧಕ್ಕಿಲ್ಲ ಮಣೆ

ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಎಂ.ಆರ್‌. ಸೀತಾರಾಮ್‌, ಉಮಾಶ್ರೀ ಮತ್ತು ಎಚ್‌.ಪಿ. ಸುಧಾಮ್‌ ದಾಸ್‌ ಹೆಸರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಂಕಿತ ಹಾಕಿದ್ದಾರೆ.

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2023, 15:58 IST
Last Updated 19 ಆಗಸ್ಟ್ 2023, 15:58 IST
ಸುಧಾಮ್‌ ದಾಸ್‌, ಉಮಾಶ್ರೀ, ಸೀತಾರಾಮ್‌
ಸುಧಾಮ್‌ ದಾಸ್‌, ಉಮಾಶ್ರೀ, ಸೀತಾರಾಮ್‌   

ಬೆಂಗಳೂರು: ತೀವ್ರ ವಿರೋಧವನ್ನು ಲೆಕ್ಕಿಸದೇ ವಿಧಾನ ಪರಿಷತ್‌ನ ಮೂರು ಸ್ಥಾನಗಳಿಗೆ ನಾಮ ನಿರ್ದೇಶನ ಮಾಡುವಂತೆ ರಾಜ್ಯ ಸರ್ಕಾರ ಶಿಫಾರಸು ಮಾಡಿದ್ದ ಎಂ.ಆರ್‌. ಸೀತಾರಾಮ್‌, ಉಮಾಶ್ರೀ ಮತ್ತು ಎಚ್‌.ಪಿ. ಸುಧಾಮ್‌ ದಾಸ್‌ ಹೆಸರಿಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅಂಕಿತ ಹಾಕಿದ್ದಾರೆ.

ಪರಿಷತ್‌ಗೆ ಸುಧಾಮ್ ದಾಸ್ ಅವರ ನಾಮನಿರ್ದೇಶನ ವಿರೋಧಿಸಿ ಸಚಿವರಾದ ಜಿ. ಪರಮೇಶ್ವರ, ಕೆ.ಎಚ್‌. ಮುನಿಯಪ್ಪ, ಡಾ.ಎಚ್‌.ಸಿ.ಮಹದೇವಪ್ಪ, ಆರ್‌.ಬಿ. ತಿಮ್ಮಾಪುರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಪತ್ರ ಬರೆದಿದ್ದರು. ಅವರ ಬದಲಿಗೆ ಬೇರೆ ಕಾರ್ಯಕರ್ತರಿಗೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು. ಆದರೆ, ಅವರ ಆಕ್ಷೇಪವನ್ನು ಬದಿಗೊತ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಫಾರಸು ಮಾಡಿದ್ದರು.

ಪತ್ರ ಬರೆದಿರುವುದನ್ನು ಗೃಹ ಸಚಿವ ಜಿ. ಪರಮೇಶ್ವರ ಒಪ್ಪಿಕೊಂಡಿದ್ದಾರೆ. ‘ಪತ್ರ ಬರೆದಿರುವುದು ನಿಜ. ಆ ಪತ್ರಕ್ಕೆ ಉತ್ತರ ಬಂದಿದೆ. ಏನಿದ್ದರೂ ಹೈಕಮಾಂಡ್ ತೀರ್ಮಾನವೇ ಅಂತಿಮ’ ಎಂದು ಅವರು ಹೇಳಿದ್ದಾರೆ.

ADVERTISEMENT

ಹಿಂದುಳಿದ ವರ್ಗಗಳ ಕೋಟಾದಿಂದ ಎಂ.ಆರ್‌. ಸೀತಾರಾಮ್‌, ಅಲ್ಪಸಂಖ್ಯಾತ ಕೋಟಾದಿಂದ ಮನ್ಸೂರ್‌ ಅಲಿ ಖಾನ್‌, ಪರಿಶಿಷ್ಟ ಜಾತಿ ಎಡಗೈ ಕೋಟಾದಡಿ, ಜಾರಿ ನಿರ್ದೇಶನಾಲಯದ ನಿವೃತ್ತ ಅಧಿಕಾರಿ ಸುಧಾಮ್ ದಾಸ್ ಹೆಸರನ್ನು ಪರಿಷತ್‌ಗೆ ನಾಮ ನಿರ್ದೇಶನ ಮಾಡಲು ಈ ಹಿಂದೆಯೇ ಕಾಂಗ್ರೆಸ್‌ ನಾಯಕರು ಮುಂದಾಗಿದ್ದರು. ಆ ಬೆನ್ನಿಗೆ, ಸುಧಾಮ್ ದಾಸ್ ಅವರ ನಾಮನಿರ್ದೇಶನಕ್ಕೆ ಕಾಂಗ್ರೆಸ್‌ನ ಪರಿಶಿಷ್ಟ ಜಾತಿ ಎಡಗೈ ಬಣದ ಪ್ರಮುಖ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ, ಪಕ್ಷಕ್ಕೆ ಕೆಲಸ ಮಾಡಿದ ಬೇರೆಯವರಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಅಲ್ಲದೆ, ಕರ್ನಾಟಕ ರಾಜ್ಯ ಮುಸ್ಲಿಂ ಜನಜಾಗೃತಿ ವೇದಿಕೆ ಮತ್ತು ‘ನ್ಯಾಯಮಿತ್ರ’ ಸಂಘಟನೆಯ ಕಾರ್ಯದರ್ಶಿ ರಾಘವಾಚಾರ್‌ ಶಾಸ್ತ್ರಿ, ‘ಈ ಮೂವರನ್ನು ನಾಮನಿರ್ದೇಶನ ಮಾಡಲು ರಾಜ್ಯ ಸರ್ಕಾರ ಮುಂದಾಗಿರುವುದು ಗೊತ್ತಾಗಿದೆ. ಆದರೆ, ಅವರ ಮೇಲೆ ಕೆಲವು ಆರೋಪಗಳಿವೆ’ ಎಂದು ದಾಖಲೆಗಳ ಸಹಿತ ರಾಜ್ಯಪಾಲರಿಗೆ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದರು. ಈ ಕುರಿತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದ ರಾಜಭವನ, ಈ ಹೆಸರುಗಳನ್ನು ಪರಿಗಣಿಸುವ ಮೊದಲು ಅವರ ವಿರುದ್ಧ ರಾಜ್ಯಪಾಲರಿಗೆ ಸಲ್ಲಿಕೆಯಾಗಿರುವ ದೂರುಗಳನ್ನು ಪರಿಶೀಲಿಸಿ, ನಿಯಮಗಳನ್ವಯ ಸೂಕ್ತ ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿತ್ತು.

ಉಮಾಶ್ರೀಗೆ ಒಲಿದ ಪರಿಷತ್‌ ಸ್ಥಾನ: ನಂತರದ ಬೆಳವಣಿಗೆಯಲ್ಲಿ ಮನ್ಸೂರ್ ಅಲಿ ಖಾನ್ ಬದಲು ಉಮಾಶ್ರೀ ಹೆಸರನ್ನು ಪರಿಗಣಿಸುವಂತೆ ಹೈಕಮಾಂಡ್‌ ಮೇಲೆ ಮುಖ್ಯಮಂತ್ರಿ ಒತ್ತಡ ಹೇರಿದ್ದರು. ವಿಧಾನಸಭೆ ಚುನಾವಣೆಯಲ್ಲಿ ತೇರದಾಳ ಕ್ಷೇತ್ರದಿಂದ ಕಣಕ್ಕಿಳಿಯಲು ಮುಂದಾಗಿದ್ದ ಉಮಾಶ್ರೀ ಅವರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಈ ವೇಳೆ ಅವರನ್ನು ಪರಿಷತ್‌ಗೆ ನಾಮನಿರ್ದೇಶನ ಮಾಡುವ ಭರವಸೆ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.