ADVERTISEMENT

ವಿರುಪಾಪುರ ಗಡ್ಡೆ: ಕಂದಾಯ ಭೂಮಿಗಳಲ್ಲಿ ಮತ್ತೆ ಅನಧಿಕೃತ ರೆಸಾರ್ಟ್‌

ಎನ್.ವಿಜಯ್
Published 29 ಆಗಸ್ಟ್ 2021, 19:45 IST
Last Updated 29 ಆಗಸ್ಟ್ 2021, 19:45 IST
ಗಂಗಾವತಿ ಮಾರ್ಗವಾಗಿ ತೆರಳುವ ಹನುಮನಹಳ್ಳಿ ಸಮೀಪ ಕಂದಾಯ ಭೂಮಿಯಲ್ಲಿ ನಿರ್ಮಿಸಲಾದ ರೆಸಾರ್ಟ್‌
ಗಂಗಾವತಿ ಮಾರ್ಗವಾಗಿ ತೆರಳುವ ಹನುಮನಹಳ್ಳಿ ಸಮೀಪ ಕಂದಾಯ ಭೂಮಿಯಲ್ಲಿ ನಿರ್ಮಿಸಲಾದ ರೆಸಾರ್ಟ್‌   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ವಿರುಪಾಪುರ ಗಡ್ಡೆಯ ಸುತ್ತಮುತ್ತಲಿನ ಕಂದಾಯ ಭೂಮಿಗಳಲ್ಲಿ ಪರವಾನಗಿ ಪಡೆಯದೇ 16 ರೆಸಾರ್ಟ್‌ಗಳನ್ನು ನಿರ್ಮಿಸಲಾಗಿದೆ.

ಹಿಂದೆ ನಿರ್ಮಾಣಗೊಂಡಿದ್ದ ಎಲ್ಲ ರೆಸಾರ್ಟ್‌ಗಳನ್ನು ತೆರವುಗೊಳಿಸಲಾಗಿತ್ತು. ಆದರೂ ಕೆಲವರು ರಾಜಕೀಯ ಪ್ರಭಾವ ಬಳಸಿ ಸಾಣಾಪುರ, ಸೇತುವೆ, ಹನುಮನಹಳ್ಳಿ, ಚಿಕ್ಕರಾಂಪುರ, ಅಂಜನಳ್ಳಿ, ರಂಗಾಪುರ ಗ್ರಾಮದಲ್ಲಿ ಮತ್ತೆ ರೆಸಾರ್ಟ್‌ ನಿರ್ಮಿಸಿದ್ದಾರೆ.

‘ಆನೆಗುಂದಿ ಭಾಗದ ಸುತ್ತಮುತ್ತಲಿನ ಎಲ್ಲ ಗ್ರಾಮಗಳು ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ವ್ಯಾಪ್ತಿಗೆ ಬರುತ್ತವೆ. ಪ್ರಾಧಿಕಾರದ ಪರವಾನಗಿ ಇಲ್ಲದೇ ಕಟ್ಟಡ ನಿರ್ಮಾಣ, ವ್ಯಾಪಾರಕ್ಕೆ ಅವಕಾಶವಿಲ್ಲ ಎಂಬ ನಿಯಮ ಇದೆ. ಈ ನಿಯಮವನ್ನು ಗಾಳಿಗೆ ತೂರಲಾಗಿದೆ. ರೆಸಾರ್ಟ್‌ ನಿರ್ಮಾಣಕ್ಕೆ ಕೃಷಿಕರು ಭೂಮಿಯನ್ನು ಗುತ್ತಿಗೆ ರೂಪದಲ್ಲಿ ನೀಡಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ADVERTISEMENT

‘ಹಿಂದೆ ಕೆಲ ಕೃಷಿಕರು ಭೂಮಿಯನ್ನು ವಾರ್ಷಿಕ ₹50 ರಿಂದ ₹60 ಸಾವಿರಕ್ಕೆ ಗುತ್ತಿಗೆ ನೀಡುತ್ತಿದ್ದರು. ಈಗ ₹3 ಲಕ್ಷದವರೆಗೆ ಗುತ್ತಿಗೆ ನೀಡಿದ್ದು, 5 ರಿಂದ 10 ವರ್ಷಗಳವರೆಗೆ ಒಪ್ಪಂದ‌ ಮಾಡಿಕೊಳ್ಳಲಾಗುತ್ತಿದೆ’ ಎಂದೂ ಗ್ರಾಮಸ್ಥರು ತಿಳಿಸಿದ್ದಾರೆ.

ಪರವಾನಗಿಯೇ ಇಲ್ಲ: ಉಳುಮೆ ಮಾಡುವ ಭೂಮಿಯಲ್ಲಿ ವ್ಯಾಪಾರ-ವಹಿವಾಟು ನಡೆಸಲು, ಪರವಾನಗಿ ಪಡೆಯಬೇಕು. ಜೊತೆಗೆ ಉಳುಮೆಗೆ ಈ ಭೂಮಿ ಸೂಕ್ತವಲ್ಲ ಎಂದು (ಎನ್ಎ) ಸರ್ಟಿಫಿಕೇಟ್ ಪಡೆದಿರಬೇಕು. ಈ ಭಾಗದಲ್ಲಿ ನಿರ್ಮಾಣವಾದ ರೆಸಾರ್ಟ್‌ಗಳಿಗೆ ಪರವಾನಗಿಯೇ ಇಲ್ಲ ಎನ್ನಲಾಗಿದೆ.

ಅಧಿಕಾರಿಗಳ ಸಾಥ್: ’ರೆಸಾರ್ಟ್‌ ನಿರ್ಮಾಣದ ನಂತರ ವಿದ್ಯುತ್ ಸೌಲಭ್ಯಕ್ಕೆ ಸಂಬಂಧಪಟ್ಟ ಪಿಡಿಒಗಳಿಂದ ಎನ್‌ಒಸಿ ಸಹ ಪಡೆಯಲಾಗಿದೆ. ಈ ಪತ್ರದ ಆಧಾರದಲ್ಲಿ ಜೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡುತ್ತಿದ್ದಾರೆ’ ಎಂಬ ಆರೋಪಗಳಿವೆ.

*
ಸಾಣಪುರ ಭಾಗದ ಸುತ್ತಮುತ್ತ ಪರವಾನಗಿ ಪಡೆಯದ ರೆಸಾರ್ಟ್‌ಗಳಿಗೆ ತಾಲ್ಲೂಕು ಆಡಳಿತ ಮತ್ತು ಅರಣ್ಯ ಇಲಾಖೆ ವತಿಯಿಂದ ನೋಟಿಸ್ ನೀಡಲಾಗಿದೆ.
-ಯು.ನಾಗರಾಜ, ತಹಶೀಲ್ದಾರ್‌ ಗಂಗಾವತಿ

*
ಅನಧಿಕೃತ ರೆಸಾರ್ಟ್‌ಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಕೆಲ ಕಂದಾಯ ಭೂಮಿ ವಾರಸುದಾರರು ಪಹಣಿಗಳನ್ನು ನೀಡಿದ್ದು, ಜಂಟಿ ಸಮೀಕ್ಷೆ ನಡೆಸಲಾಗುವುದು.
-ಶಿವರಾಜ ಮೇಟಿ, ಅರಣ್ಯ ಸಂರಕ್ಷಣಾ ಅಧಿಕಾರಿ, ಗಂಗಾವತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.