ADVERTISEMENT

ಗಾಂಧಿ ಕುಟುಂಬದ ನಾಯಕತ್ವವನ್ನು ಪ್ರಶ್ನಿಸುತ್ತಿರುವುದು ದುರದೃಷ್ಟಕರ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2020, 14:43 IST
Last Updated 23 ಆಗಸ್ಟ್ 2020, 14:43 IST
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   

ಬೆಂಗಳೂರು: ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, 'ಕಾಂಗ್ರೆಸ್ ಪಕ್ಷದಲ್ಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕೆಲವರು ಪ್ರಶ್ನಿಸುತ್ತಿರುವುದು ದುರದೃಷ್ಟಕರ. ಅಘೋಷಿತ ತುರ್ತು ಪರಿಸ್ಥಿತಿ ಮತ್ತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ದೇಶದ ಪ್ರಜಾಸತ್ತೆಯನ್ನೇ ನಾಶ ಮಾಡಲು ಹೊರಟಿರುವ ಸಂದರ್ಭದಲ್ಲಿ, ನಾವು ಒಟ್ಟಾಗಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸಲು‌ ಪ್ರಯತ್ನಿಸಬೇಕು ಮತ್ತು ದುರ್ಬಲಗೊಳಿಸುವುದಲ್ಲ' ಎಂದು ಹೇಳಿದ್ದಾರೆ.

ಸೋಮವಾರ ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಗೂ ಮುನ್ನ, ಪಕ್ಷದಲ್ಲಿನ 'ನಾಯಕತ್ವ' ಬದಲಾವಣೆ ವಿಷಯಗಳಿಗೆ ಸಂಬಂಧಿಸಿದಂತೆ ಆಂತರಿಕ ವಿವಾದ ಉಂಟಾಗಿದೆ.

ADVERTISEMENT

ಹಲವಾರು ಹಿರಿಯ ಕಾಂಗ್ರೆಸ್ ನಾಯಕರು ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದು, ಪಕ್ಷವನ್ನು ಪುನರುಜ್ಜೀವನಗೊಳಿಸಲು ಐದು ಅಂಶಗಳ ಕಾರ್ಯಸೂಚಿ, ಪಕ್ಷದಲ್ಲಿ ಸಕ್ರಿಯ ನಾಯಕತ್ವದ ಅಗತ್ಯ ಮತ್ತು ಪಕ್ಷದ ಸ್ಥಿತಿ ಮತ್ತು ನಿರ್ದೇಶನದ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಚುನಾವಣೆಗೆ ಒತ್ತಾಯಿಸಿದ್ದಾರೆ.

ಮೂಲಗಳ ಪ್ರಕಾರ, ಸಿಡಬ್ಲ್ಯುಸಿನ ಕೆಲವು ಸದಸ್ಯರು, ಸಂಸದರು ಮತ್ತು ನಾಯಕರು ಪತ್ರ ಬರೆದು ಪಕ್ಷದ ಕಾರ್ಯವೈಖರಿಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಎತ್ತಿದ್ದಾರೆ ಮತ್ತು ಸಲಹೆಗಳನ್ನು ನೀಡಿದ್ದಾರೆ.

ಇಬ್ಬರು ಹಿರಿಯ ಮುಖಂಡರು ರಚಿಸಿರುವ ಐದು ಪುಟಗಳ ಪತ್ರವನ್ನು ಇತರರು ಚರ್ಚಿಸಿ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರನ್ನು ಬಹಿರಂಗವಾಗಿ ಟೀಕಿಸಿಲ್ಲ. ಆದರೆ ಇದನ್ನು ಪಕ್ಷದ ಹೈಕಮಾಂಡ್, ಮುಖ್ಯವಾಗಿ ರಾಹುಲ್ ಗಾಂಧಿ ಅವರ ವಿರುದ್ಧ ಅಪನಂಬಿಕೆ ಮತ್ತು ಚಾರ್ಜ್‌ಶೀಟ್‌ನಂತೆ ನೋಡಲಾಗುತ್ತಿದೆ ಎನ್ನಲಾಗುತ್ತಿದೆ.

ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್, ಮನೀಶ್ ತಿವಾರಿ, ಶಶಿ ತರೂರ್, ಜಿತಿನ್ ಪ್ರಸಾದ್, ವೀರಪ್ಪ ಮೊಯಿಲಿ, ಸಂದೀಪ್ ದೀಕ್ಷಿತ್, ಪ್ರಮೋದ್ ತಿವಾರಿ, ಪಿ.ಜೆ. ಕುರಿಯನ್ ಅವರ ಸಹಿಯನ್ನು ಪತ್ರದಲ್ಲಿ ಹಾಕಲಾಗಿದೆ. ಆದರೆ ಈ ನಾಯಕರಲ್ಲಿ ಯಾರೂಬ್ಬರು ತಾವು ಸಹಿ ಹಾಕಿದ್ದೇವೆ ಎಂದು ಒಪ್ಪಿಕೊಂಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.