ADVERTISEMENT

ಏಕೀಕೃತ ಭೂಸ್ವಾಧೀನ ವ್ಯವಸ್ಥೆ ಜಾರಿ: ಕೃಷ್ಣ ಬೈರೇಗೌಡ

ಜಮೀನಿನ ಸ್ಥಿತಿಗತಿಯ ಮಾಹಿತಿಯ ಡ್ಯಾಶ್ ಬೋರ್ಡ್

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2025, 16:19 IST
Last Updated 29 ಸೆಪ್ಟೆಂಬರ್ 2025, 16:19 IST
ಕೃಷ್ಣ ಬೈರೇಗೌಡ
ಕೃಷ್ಣ ಬೈರೇಗೌಡ   

ಬೆಂಗಳೂರು: ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ದಕ್ಷತೆ ಮತ್ತು ನ್ಯಾಯ ಒದಗಿಸುವುದಕ್ಕಾಗಿ ‘ಏಕೀಕೃತ ಭೂಸ್ವಾಧೀನ ವ್ಯವಸ್ಥೆ’ಗೆ (ಯುಎಲ್‌ಎಂಎಸ್‌) ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಸೋಮವಾರ ಚಾಲನೆ ನೀಡಿದರು.

ಕಂದಾಯ ಇಲಾಖೆಯ ಭೂಮಿ ತಂತ್ರಾಂಶ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಇ–ಸ್ವತ್ತು, ನಗರಾಭಿವೃದ್ಧಿ ಇಲಾಖೆಯ ಇ– ಆಸ್ತಿ ತಂತ್ರಾಂಶ, ಯುಎಲ್‌ಎಂಎಸ್‌ ಇ–ಖಾತಾ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಕಾವೇರಿ 2.0 ತಂತ್ರಾಂಶ ಮತ್ತು ಕೆಜಿಐಎಸ್‌ನಂತಹ ಎಲ್ಲಾ ತಂತ್ರಾಂಶಗಳನ್ನು ಒಳಗೊಂಡ ವ್ಯವಸ್ಥೆಯಾಗಿದೆ.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸಚಿವ ಕೃಷ್ಣಬೈರೇಗೌಡ, ‘ಈ ವ್ಯವಸ್ಥೆಯು ನೈಜ ದತ್ತಾಂಶವನ್ನು ಒದಗಿಸುತ್ತದೆ. ಅಲ್ಲದೇ, ಆರ್ಥಿಕ ಇಲಾಖೆಯ ಖಜಾನೆ–2 ತಂತ್ರಾಂಶದೊಂದಿಗೆ ಜೋಡಣೆ ಮಾಡಲಾಗಿದೆ. ಸಮಗ್ರ ಭೂಸ್ವಾಧೀನ ವ್ಯವಸ್ಥೆಯು ರಾಜ್ಯದಾದ್ಯಂತ ಭೂಸ್ವಾಧೀನ ಪ್ರಕ್ರಿಯೆಯನ್ನು ಸಮನ್ವಯಗೊಳಿಸುತ್ತದೆ. ಅಲ್ಲದೇ, ಈಗ ಕೈಗೊಳ್ಳಲಾಗುತ್ತಿರುವ ಭೂಸ್ವಾಧೀನ ಪ್ರಕ್ರಿಯೆ ಮತ್ತು ಹಿಂದೆ ನಡೆಸಿದ ಭೂಸ್ವಾಧೀನ ಪ್ರಕರಣಗಳಲ್ಲಿನ ಮೊಕದ್ದಮೆಗಳನ್ನು ಗುರುತಿಸುವ ಸಮಗ್ರ ಡಿಜಿಟಲ್‌ ವೇದಿಕೆಯೂ ಇದಾಗಿದೆ’ ಎಂದರು.

ADVERTISEMENT

ಕಂದಾಯ, ಜಲಸಂಪನ್ಮೂಲ, ನಗರಾಭಿವೃದ್ಧಿ, ಲೋಕೋಪಯೋಗಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ಕೆಶಿಪ್‌, ಕೆ–ರೈಡ್‌, ಮೆಟ್ರೊ, ಕೆಐಎಡಿಬಿ ಮತ್ತಿತರ ಸಂಸ್ಥೆಗಳು ಭೂಸ್ವಾಧೀನ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ. ಇವುಗಳ ಭೂಸ್ವಾಧೀನದ ಸಂಪೂರ್ಣ ಮಾಹಿತಿಯು ಈ ವ್ಯವಸ್ಥೆಯಲ್ಲಿ ಸಿಗುತ್ತದೆ.  ಭೂಸ್ವಾಧೀನದ ಎಲ್ಲಾ ಪ್ರಸ್ತಾವನೆಗಳು, ಅದರ ಸ್ಥಿತಿಗತಿಯ ಬಗ್ಗೆ ನೈಜ ಸಮಯದ ಮಾಹಿತಿಯನ್ನು ಪಾಲುದಾರರು ಮತ್ತು ತೀರ್ಮಾನ ತೆಗೆದುಕೊಳ್ಳುವ ಸಂಸ್ಥೆಗಳಿಗೆ ಕ್ರೋಡೀಕೃತ ಡ್ಯಾಶ್ ಬೋರ್ಡ್‌ ಮೂಲಕ ಒದಗಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಭೂಸ್ವಾಧೀನ ಪ್ರಕರಣಗಳಿಗೆ ಸಂಬಂಧಿಸಿದಂತೆ ಐ–ತೀರ್ಪು ರಚನೆ, ಪರಿಹಾರ ವಿತರಣೆ ಮತ್ತು ಪುನರ್ವಸತಿವರೆಗಿನ ಸಂಪೂರ್ಣ ಪ್ರಕ್ರಿಯೆ ನಿರ್ವಹಿಸಲು ಈ ವ್ಯವಸ್ಥೆ ಏಕ ಮಾತ್ರ ಡಿಜಿಟಲ್ ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಕೃಷ್ಣಬೈರೇಗೌಡ ಹೇಳಿದರು. 

ರಾಜ್ಯದ ಎಲ್ಲ ಜಿಲ್ಲೆಗಳು ಮತ್ತು ಅಗತ್ಯವಿರುವ ಭೂಸ್ವಾಧೀನ ಸಂಸ್ಥೆಗಳು ಹಂತ ಹಂತವಾಗಿ ಈ ತಂತ್ರಾಂಶವನ್ನು ಅಳವಡಿಸಿಕೊಳ್ಳುತ್ತವೆ. ಈ ತಂತ್ರಾಂಶವು ರಾಜ್ಯದಲ್ಲಿ ಭೂಸ್ವಾಧೀನ ಪ್ರಕ್ರಿಯೆಯ ಪ್ರಮಾಣೀಕೃತ ಮತ್ತು ಕಾನೂನುಬದ್ಧ ಅನುಸರಣಾ ವಿಧಾನವನ್ನು ಖಚಿತಪಡಿಸುತ್ತದೆ ಎಂದರು.

ಏಕೀಕೃತ ಭೂಸ್ವಾಧೀನ ವ್ಯವಸ್ಥೆಯು ಆಡಳಿತದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಭೂಮಾಲೀಕರು ಮತ್ತು ಬಾಧಿತ ಕುಟುಂಬಗಳಿಗೆ ಸ್ವಾಧೀನ ಪ್ರಕ್ರಿಯೆಯಲ್ಲಿ ಪಾರದರ್ಶಕತೆಯನ್ನು ಖಚಿತ ಪಡಿಸುತ್ತದೆ.
– ಕೃಷ್ಣ ಬೈರೇಗೌಡ, ಕಂದಾಯ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.