ADVERTISEMENT

ಕೇಂದ್ರ ಸರ್ಕಾರದ ಬಜೆಟ್ ಸ್ವತಃ ಬಿಜೆಪಿ ಸಂಸದರಿಗೇ ಅರ್ಥವಾಗಿಲ್ಲ: ಕಾಂಗ್ರೆಸ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2023, 13:09 IST
Last Updated 2 ಫೆಬ್ರುವರಿ 2023, 13:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ ಸ್ವತಃ ಬಿಜೆಪಿ ಸಂಸದರಿಗೇ ಅರ್ಥವಾಗಿಲ್ಲ ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

ಬಿಜೆಪಿ ಮುಖಂಡ ಸುಬ್ರಮಣಿಯನ್‌ ಸ್ವಾಮಿ ಹೇಳಿಕೆ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸ್ವತಃ ಬಿಜೆಪಿ ಸಂಸದರಿಗೇ ಕೇಂದ್ರ ಸರ್ಕಾರದ ಬಜೆಟ್ ಅರ್ಥವಾಗಿಲ್ಲ, ತಮ್ಮದೇ ಪಕ್ಷದವರನ್ನು ಮೆಚ್ಚಿಸಲಾಗದ ಬಜೆಟ್ ಜನ ಸಾಮಾನ್ಯರನ್ನು ತಲುಪುವುದೇ? ಬಜೆಟ್ ದಿನಸಿ ಅಂಗಡಿ ಮಾಲೀಕನೊಬ್ಬ ಕೊಡುವ ಬಿಲ್‌ನಂತಿದೆ ಎಂದು ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ. ಇದು ಸ್ಪಷ್ಟ ದೃಷ್ಟಿಕೋನವಿಲ್ಲದ ಪೊಳ್ಳು ಬಜೆಟ್ ಎನ್ನುವುದೇ ಇದರ ಅರ್ಥ! ಎಂದು ಕಿಡಿಕಾರಿದೆ.

‘ಇಂದು ಮಂಡಿಸಿದ್ದು ಬಜೆಟ್ ಹೌದೇ? ಇದೊಂದು ದಿನಸಿ ಅಂಗಡಿ ಮಾಲೀಕ ಕೊಡುವ ಬೆಲೆಪಟ್ಟಿ ಇದ್ದಂತಿದೆ- ಒಂದು ಒಳ್ಳೆಯ ಬಜೆಟ್‌ ತನ್ನ ಧ್ಯೇಯೋದ್ದೇಶಗಳೇನು ಎಂಬುದನ್ನು ತೆರೆದಿಡಬೇಕು. ಜಿಡಿಪಿ ಬೆಳವಣಿಗೆ ದರದ ಕುರಿತು ಹೇಳಬೇಕೆಂದರೆ, ಹೂಡಿಕೆಯ ಪ್ರಮಾಣ ಎಷ್ಟು, ಬರುವ ಆದಾಯ ಎಷ್ಟು, ಸರ್ಕಾರದ ಆದ್ಯತೆಗಳೇನು, ಆರ್ಥಿಕ ಮಾರ್ಗೋಪಾಯಗಳೇನು ಮತ್ತು ಸಂಪನ್ಮೂಲ ಕ್ರೋಡೀಕರಣ ಇವೆಲ್ಲವನ್ನೂ ಸಾರ್ವಜನಿಕರ ಮುಂದಿಡಬೇಕಾಗುತ್ತದೆ’ ಎಂದು ಸುಬ್ರಮಣಿಯನ್‌ ಸ್ವಾಮಿ ಟ್ವೀಟ್ ಮಾಡಿದ್ದರು.

ADVERTISEMENT

ನರೇಂದ್ರ ಮೋದಿ ಸರ್ಕಾರದ ಎರಡನೇ ಅವಧಿಯ ಕೊನೆಯ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬುಧವಾರ ಮಂಡಿಸಿದ್ದರು.

ಎನ್‌ಡಿಎ ಸರ್ಕಾರದ ಎರಡನೇ ಅವಧಿಯ ಪೂರ್ಣ ಪ್ರಮಾಣದ ಬಜೆಟ್‌ ಇದಾಗಿದ್ದು, ಈ ಬಾರಿಯ ಬಜೆಟ್‌ನಲ್ಲಿ ಜನಸಾಮಾನ್ಯರು ಬಳಸುವ ಕೆಲವು ಸರಕುಗಳ ಮೇಲಿನ ತೆರಿಗೆಯನ್ನು ಹೆಚ್ಚಿಸಿದ್ದರೆ, ಇನ್ನು ಹಲವು ಸರಕುಗಳ ಮೇಲಿನ ಸುಂಕವನ್ನು ಕಡಿಮೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.