ADVERTISEMENT

ಸಿರಿಧಾನ್ಯ ಕೇಂದ್ರವಾಗಿ ಕಲ್ಯಾಣ ಕರ್ನಾಟಕ: ನಿರ್ಮಲಾ ಸೀತಾರಾಮನ್‌

ಸಿರಿಧಾನ್ಯಗಳ ಸಮಾವೇಶದಲ್ಲಿ ಕೇಂದ್ರ ಸಚಿವೆ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2022, 5:52 IST
Last Updated 28 ಆಗಸ್ಟ್ 2022, 5:52 IST
ಸಿರಿಧಾನ್ಯಗಳ ಸಮಾವೇಶದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಳಿಗೆಗಳನ್ನು ವೀಕ್ಷಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಬಾರ್ಡ್‌ ಅಧಿಕಾರಿಗಳು ಇದ್ದರು
ಸಿರಿಧಾನ್ಯಗಳ ಸಮಾವೇಶದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಳಿಗೆಗಳನ್ನು ವೀಕ್ಷಿಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನಬಾರ್ಡ್‌ ಅಧಿಕಾರಿಗಳು ಇದ್ದರು   

ರಾಯಚೂರು: ‘ಕಲ್ಯಾಣ ಕರ್ನಾಟಕವನ್ನು ಸಿರಿಧಾನ್ಯಗಳ ಕೇಂದ್ರವಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ಜೊತೆ ಕೇಂದ್ರವೂ ನೆರವು ನೀಡಲಿದೆ’ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಶನಿವಾರ ತಿಳಿಸಿದರು.

ರಾಯಚೂರು ಕೃಷಿ ವಿ.ವಿ. ಆವರಣದಲ್ಲಿ ನಬಾರ್ಡ್ ಸಹಯೋಗ ದಲ್ಲಿ ನಡೆದ ಸಿರಿಧಾನ್ಯಗಳ ಸಮಾವೇಶದ ಸಮಾರೋಪದಲ್ಲಿ ಅವರು, ‘ಸಿರಿಧಾನ್ಯ ಬೆಳೆ ಸಂಸ್ಕರಿಸಲು, ಪ್ಯಾಕೇಜಿಂಗ್‌ ಮತ್ತು ದಾಸ್ತಾನು ಮಾಡಲು ಬದ್ಧತೆ ತೋರಿಸಬೇಕು’ ಎಂದರು.

‘ಕಲ್ಯಾಣ ಕರ್ನಾಟಕವು ಸಿರಿಧಾನ್ಯಗಳ ತಾಣವಾಗಿ ಅಭಿವೃದ್ಧಿಗೊಂಡು, ದೊಡ್ಡ ಕಂಪನಿಗಳಿಂದ ವಹಿವಾಟು ನಡೆಸಬೇಕು. ಉದ್ಯೋಗ ಸೃಷ್ಟಿಯಾಗ ಬೇಕು. ಪ್ರತಿ ಜಿಲ್ಲೆಯಲ್ಲೂ ಸಿರಿಧಾನ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಿದರೆ, ಮಹಿಳೆಯರಿಗೆ ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗ ದೊರೆಯುತ್ತವೆ. ಆಹಾರ ಸಂಸ್ಕರಣಾ ಘಟಕಗಳಿಗೆ 5 ವರ್ಷ ತೆರಿಗೆ ವಿನಾಯಿತಿಯಿದೆ’ ಎಂದರು.

ADVERTISEMENT

ಮುಖ್ಯಮಂತ್ರಿ ಬಸರಾಜ ಬೊಮ್ಮಾಯಿ ಅವರು, ‘ರಾಯಚೂರು ಸಿರಿಧಾನ್ಯ ಘೋಷಣೆ' ಪ್ರಕಟಿಸುವ ಕಾರ್ಯ ಕುಲಪತಿ ಮಾಡಬೇಕು. ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಗೆ ಒಂದು ಸಿರಿಧಾನ್ಯ ಗೊತ್ತುಪಡಿಸಿ‌ ಬೆಳೆಸಬೇಕು‘ ಎಂದರು. ‘ಪ್ರತಿ ಜಿಲ್ಲೆಯಲ್ಲಿ ಸಂಸ್ಕರಣ ಘಟಕ‌ ಸ್ಥಾಪಿಸಲಾಗುವುದು. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣ ಮತ್ತು ರಫ್ತು ನಿಗಮದಿಂದ (ಕೆಪೆಕ್) ಎಲ್ಲ ರೀತಿ ನೆರವು‌ ನೀಡಲಾಗುವುದು’ ಎಂದರು.

ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ನರೇಂದ್ರಸಿಂಗ್‌ ತೋಮರ್‌, ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ, ಕೃಷಿ ಸಚಿವ ಬಿ.ಸಿ.ಪಾಟೀಲ, ನಬಾರ್ಡ್‌ ಉಪ‍ ಪ್ರಧಾನ ನಿರ್ದೇಶಕ ಪಿವಿಎಸ್‌ ಸೂರ್ಯಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ, ಸಂಸದರಾದ ರಾಜಾ ಅಮರೇಶ್ವರ ನಾಯಕ ಸಂಗಣ್ಣ ಕರಡಿ, ವಿವಿ ಕುಲಪತಿ ಡಾ. ಕೆ.ಎನ್.ಕಟ್ಟಿಮನಿ ಮತ್ತು ಶಾಸಕ ಡಾ.ಶಿವರಾಜ ಪಾಟೀಲ ಇದ್ದರು.

‘ಏಮ್ಸ್ ಸ್ಥಾಪನೆಗೆ ರಾಯಚೂರು ಸೂಕ್ತ’
‘ಏಮ್ಸ್ ಸ್ಥಾಪನೆಗೆ ರಾಜ್ಯದಲ್ಲಿ ಸಮೀಕ್ಷೆ ನಡೆಸಿ ಸ್ಥಳ ನಿರ್ಧರಿಸಲು ಹಾಗೂ ಹಿಂದುಳಿದ ಪ್ರದೇಶದಲ್ಲೇ ಸ್ಥಾಪಿಸಲು ಕೇಳಿಕೊಳ್ಳಲಾಗಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

‘ರಾಯಚೂರು ಜಿಲ್ಲೆಯಲ್ಲಿ ಅಪೌಷ್ಟಿಕ ಸಮಸ್ಯೆ ವ್ಯಾಪಕವಾಗಿದೆ. ಮಹತ್ವಾಕಾಂಕ್ಷಿ ಯೋಜನೆಯಲ್ಲೂ ಇದೆ. ಏಮ್ಸ್ ಸ್ಥಾಪಿಸಲು ರಾಯಚೂರು ಸೂಕ್ತ ಸ್ಥಳವಾಗಿದೆ’ ಎಂದು ಪ್ರತಿಪಾದಿಸಿದರು.

ತೆಲಂಗಾಣ ರಾಜ್ಯದಲ್ಲಿ ರಾಯಚೂರು ವಿಲೀನದ ಬಗ್ಗೆ ಅಲ್ಲಿನ ಮುಖ್ಯ ಮಂತ್ರಿ ಚಂದ್ರಶೇಖರರಾವ್ ಹೇಳಿಕೆ ಹಾಸ್ಯಾಸ್ಪದವಾಗಿದೆ. ಒಂದಿಂಚೂ ಜಾಗ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ರಾಜಕೀಯ ಪ್ರೇರಿತವಾಗಿ ಅವರು ಹೇಳಿಕೆ ನೀಡಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.