ADVERTISEMENT

ಭತ್ತ ಖರೀದಿ ಮಾಡೋಕೆ ಸರ್ಕಾರದ ಬಳಿ ಗೋಣಿ ಚೀಲವಿಲ್ಲ: ಕುಮಾರಸ್ವಾಮಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 10 ಜನವರಿ 2025, 14:07 IST
Last Updated 10 ಜನವರಿ 2025, 14:07 IST
   

ಮಂಡ್ಯ: ‘ಜನರು ಬೀದಿಗೆ ಇಳಿದು ಪ್ರತಿಭಟನೆ ಮಾಡುವ ಮುನ್ನ ಭತ್ತ ಖರೀದಿ ಕೇಂದ್ರ ತೆರೆಯಿರಿ ಎಂದು ಮಂಡ್ಯ ಜಿಲ್ಲಾಧಿಕಾರಿಗೆ ಕಳೆದ ವಾರವೇ ಹೇಳಿದ್ದೆ. ಪಾಪ ಇನ್ನೂ ಗೋಣಿಚೀಲ ಖರೀದಿ ಮಾಡ್ತಿದ್ದಾರೆ ಅನಿಸುತ್ತದೆ. ಭತ್ತ ಖರೀದಿ ಮಾಡೋಕೆ ಸರ್ಕಾರದ ಬಳಿ ಗೋಣಿ ಚೀಲ ಇಲ್ಲ. ಚಲುವರಾಯಸ್ವಾಮಿ ಅವರು ನನಗೆ ಅಭಿನಂದನೆ ಸಲ್ಲಿಸುವ ಬದಲು ಈ ಕೆಲಸವನ್ನು ಮೊದಲು ಮಾಡಲಿ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದರು. 

ಮದ್ದೂರು ತಾಲ್ಲೂಕಿನ ಚಾಕನಕೆರೆಯಲ್ಲಿ ಶನಿವಾರ ಬಾಗಿನ ಸಲ್ಲಿಸಿದ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ‘ಸಚಿವ ಪರಮೇಶ್ವರ್‌ ಮನೆಯ ಔತಣಕೂಟದಲ್ಲಿ ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್‌ ಬಗ್ಗೆ ಮಾತಾಡುತ್ತೇವೆ ಎಂದಿದ್ದಾರೆ. ಹಾಗಾದರೆ ಕ್ಯಾಬಿನೆಟ್‌ ಇರೋದು ಏಕೆ? ವಾಲ್ಮೀಕಿ ನಿಗಮದಲ್ಲಿ ಹೊಡೆದಿರೋ ದುಡ್ಡು ಬಂದಿಲ್ಲ ಅಂತ ಚರ್ಚೆ ಮಾಡ್ತಾರಾ? ಭೋವಿ ನಿಗಮದ ದುಡ್ಡಿನ ಪಾಲು ಬಂದಿಲ್ಲ ಎಂದು ಚರ್ಚೆ ಮಾಡ್ತಾರಾ? ಅಹಿಂದ ಮಹಾನ್‌ ನಾಯಕರು ಅಲ್ವಾ ಇವರು’ ಎಂದು ಟೀಕಿಸಿದರು. 

ಶಂಕುಸ್ಥಾಪನೆ ಕಲ್ಲು:

ಕೇಂದ್ರ ಸರ್ಕಾರದ ಕಾರ್ಯಕ್ರಮಕ್ಕೆ ಚಲುವರಾಯಸ್ವಾಮಿ ಭೂಮಿಪೂಜೆ ಮಾಡಿದ್ದಾರೆ. ಇದರಲ್ಲಿ ನಾನು ರಾಜಕೀಯ ಮಾಡಲ್ಲ. ನಾನು ಸಿಎಂ ಆಗಿದ್ದಾಗ ಕೊಟ್ಟ ಕಾರ್ಯಕ್ರಮಗಳು ಹಲವು ಇವೆ. ಕಲ್ಲನ್ನು ಶಂಕುಸ್ಥಾಪನೆ ಮಾಡೋದಾಗಿದ್ರೆ ರಾಜ್ಯದಾದ್ಯಂತ ನನ್ನ ಶಂಕುಸ್ಥಾಪನೆ ಕಲ್ಲುಗಳು ಇರುತ್ತಿದ್ದವು ಎಂದು ಹೇಳಿದರು. 

ADVERTISEMENT

‘ನಾನು ಹಲವು ಕೆರೆಗಳನ್ನು ತುಂಬಿಸಿದ್ದರೂ ಪ್ರಚಾರ ಪಡೆದಿಲ್ಲ. ನಿನ್ನೆ ಕೆರೆ ತುಂಬಿಸಿದ್ದೇವೆ ಎಂದು ಸಚಿವರು ಕುರಿ ಊಟ ಹಾಕಿಸಿದ್ದಾರೆ. ನಮ್ಮ ಕರ್ತವ್ಯ ಜನರ ಬದುಕು ಹಸನು ಮಾಡುವುದೇ ಹೊರತು ಪ್ರಚಾರವಲ್ಲ. ರೈತರ ಸಾಲ ಮನ್ನಾ ಯೋಜನೆಯಲ್ಲಿ ₹190 ಕೋಟಿ ಬಾಕಿ ಇದೆ. ಜಿಲ್ಲೆಯ ರೈತರಿಗೆ ಹಣ ಬಂದಿಲ್ಲ. ಹಣ ಕೊಟ್ಟು ಪುಣ್ಯ ಕಟ್ಟಿಕೋ ಎಂದು ಚಲುವರಾಯಸ್ವಾಮಿಗೆ ಹೇಳ್ತೀನಿ’ ಎಂದರು. 

ಶಾಶ್ವತ ಕಾರು ಕೊಡಿ: ಎಚ್‌ಡಿಕೆ

‘ಮಾಜಿ ಸಂಸದೆ ಸುಮಲತಾ ಅವರು ಬಳಸುತ್ತಿದ್ದ ಕಾರು ಹತ್ತಲ್ಲ ಎಂಬ ವಿಚಾರವನ್ನು ನಾನು ಪ್ರಸ್ತಾಪ ಮಾಡಿಲ್ಲ. ಸಚಿವ ಚಲುವರಾಯಸ್ವಾಮಿಗೆ ಆ ವಿಚಾರ ಹೇಗೆ ಹೋಗಿದೆ ಗೊತ್ತಿಲ್ಲ. ಅದು ಸರ್ಕಾರಿ ಕಾರು, ಅದೇನು ನಮ್ಮಪ್ಪನಾ ಆಸ್ತಿನಾ? ನಾನು ಸಿಎಂ ಆಗಿದ್ದಾಗ ಸರ್ಕಾರಿ ಕಾರು, ಚಾಲಕ ಮತ್ತು ಸಂಬಳ ತೆಗೆದುಕೊಂಡಿಲ್ಲ. ಈ ವಿಚಾರವನ್ನು ಚಿಲ್ಲರೆ ರೀತಿ ರಾಜಕೀಯವಾಗಿ ಬೆರಸೋ ಅಗತ್ಯವಿಲ್ಲ’ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು. 

‘ನಾನು ಅಧಿಕಾರದಲ್ಲಿ ಇರುವವರೆಗೆ ಒಂದು ಶಾಶ್ವತ ಕಾರು ಕೊಡಿ ಅಂತ ಕೇಳಿರೋದು. ಇಂತಹ ಸಣ್ಣ ವಿಚಾರವನ್ನು ಚರ್ಚೆ ಮಾಡುವ ಸಂಸ್ಕೃತಿಯನ್ನು ಚಲುವರಾಯಸ್ವಾಮಿ ಬಿಡುವುದು ಒಳ್ಳೆಯದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.