ADVERTISEMENT

ಎಂಎಸ್‌ಎಂಇ | ₹45 ಸಾವಿರ ಕೋಟಿ ಸಾಲ ವಿತರಣೆ: ಸಚಿವ ಪ್ರಲ್ಹಾದ ಜೋಶಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2020, 10:03 IST
Last Updated 10 ಜುಲೈ 2020, 10:03 IST
ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವ ಪ್ರಲ್ಹಾದ ಜೋಶಿ   

ಹುಬ್ಬಳ್ಳಿ: ಕೊರೊನಾ ಸಂಕಷ್ಟದಿಂದ ಉಂಟಾದ ಆರ್ಥಿಕ ಪುನಶ್ಚೇತನಕ್ಕಾಗಿ ಸಣ್ಣ ಮತ್ತು ಅತಿ ಸಣ್ಣ 30 ಲಕ್ಷ ಘಟಕಗಳಿಗೆ 45 ಸಾವಿರ ಕೋಟಿ ಸಾಲ ವಿತರಣೆ ಮಾಡಲಾಗಿದೆ. ಒಟ್ಟಾರೆ ₹1.10 ಲಕ್ಷ ಸಾಲ ಮಂಜೂರು ಮಾಡಲಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅದರಲ್ಲಿ ಸರ್ಕಾರಿ ಸ್ವಾಮ್ಯದ ಬಾಂಕ್‌ಗಳು 57 ಸಾವಿರ ಕೋಟಿ ಹಾಗೂ ಖಾಸಗಿ ಬ್ಯಾಂಕ್‌ಗಳು 44 ಸಾವಿರ ಕೋಟಿ ಸಾಲ ನೀಡಿವೆ. ಕರ್ನಾಟಕದಲ್ಲಿ 66,785 ಉದ್ಯಮಿಗಳಿಗೆ 3,391 ಕೋಟಿ ಸಾಲ ಮಂಜೂರಾಗಿದ್ದು, ₹2,024 ಕೋಟಿ ವಿತರಣೆಯಾಗಿದೆ ಎಂದರು.

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ 8.94 ಕೋಟಿ ಜನರಿಗೆ ₹17,891 ಕೋಟಿ ವಿತರಿಸಲಾಗಿದೆ. ಜನಧನ ಖಾತೆಯ ಹೊಂದಿರುವ 20.65 ಕೋಟಿ ಮಹಿಳೆಯರಿಗೆ ತಲಾ ₹1500 ರಂತೆ ಅವರ ಖಾತೆಗೆ ವರ್ಗಾವಣೆ ಮಾಡಲಾಗಿದೆ. 2.3 ಕೋಟಿ ಕಟ್ಟಡ ಕಾರ್ಮಿಕರಿಗೆ ₹4,312 ಕೋಟಿ ಆರ್ಥಿಕ ಸಹಾಯ ನೀಡಲಾಗಿದೆ ಎಂದು ಹೇಳಿದರು.

ADVERTISEMENT

ಸ್ವಾವಲಂಬಿ ಭಾರತ ಯೋಜನೆಯಲ್ಲಿ 8 ಲಕ್ಷ ಮೆಟ್ರಿಕ್‌ ಟನ್‌ ಆಹಾರಧಾನ್ಯವನ್ನು 1.22 ಕೋಟಿ ವಲಸೆ ಕಾರ್ಮಿಕರಿಗೆ ವಿತರಣೆ ಮಾಡಲಾಗಿದೆ. ಉಜ್ವಲ ಯೋಜನೆಯಡಿ 8.52 ಕೋಟಿ ಬಡ ಕುಟುಂಬಗಳಿಗೆ ಜೂನ್‌ ಅಂತ್ಯದವರೆಗೆ 3.46 ಕೋಟಿ ಉಚಿತ ಸಿಲಿಂಡರ್‌ ನೀಡಲಾಗಿದೆ.

ನರೇಗಾದಡಿ ಪ್ರಸಕ್ತ ಸಾಲಿನಲ್ಲಿ ₹43,094 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ ₹35,317 ಕೋಟಿ ಬಳಕೆ ಮಾಡಲಾಗಿದೆ. 125 ಕೋಟಿ ಮಾನವ ದಿನಗಳಲ್ಲಿ ಸೃಜಿಸಲಾಗಿದೆ. 23.4 ಲಕ್ಷ ನೌಕರರು ಭವಿಷ್ಯನಿಧಿಯಿಂದ ₹6,509 ಕೋಟಿ ವಾಪಸ್‌ ಪಡೆದಿದ್ದಾರೆ ಎಂದರು.

ಧಾರವಾಡ ಜಿಲ್ಲೆಯಲ್ಲಿ 4,832 ಎಂಎಸ್‌ಎಂಇ ಉದ್ಯಮಿಗಳಿಗೆ ₹238 ಕೋಟಿ ಸಾಲ ಮಂಜೂರು ಮಾಡಲಾಗಿದೆ. ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಜಿಲ್ಲೆಯಲ್ಲಿ 1.10 ಲಕ್ಷ ರೈತರಿಗೆ 115 ಕೋಟಿ ನೇರವಾಗಿ ಅವರ ಖಾತೆಗೆ ವರ್ಗಾವಣೆಯಾಗಿದೆ. ಜಿಲ್ಲೆಯ ₹4 ಲಕ್ಷ ಮಹಿಳೆಯರ ಜನಧನ ಖಾತೆಗೆ ಹಣ ಜಮಾ ಮಾಡಲಾಗಿದೆ. ಉಜ್ವಲ ಯೋಜನೆಯಡಿ ಜಿಲ್ಲೆಯ 63 ಸಾವಿರ ಫಲಾನುಭವಿಗಳಿಗೆ ಸಿಲಿಂಡರ್ ವಿತರಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.