ADVERTISEMENT

ಯುಪಿಎಸ್‌ಸಿ: ರಾಜ್ಯಕ್ಕೆ ರಂಗಮಂಜು ಟಾಪರ್‌

ಕರ್ನಾಟಕ 30ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2025, 15:42 IST
Last Updated 22 ಏಪ್ರಿಲ್ 2025, 15:42 IST
ರಂಗಮಂಜು
ರಂಗಮಂಜು   

ಬೆಂಗಳೂರು: ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಕರ್ನಾಟಕದ 30ಕ್ಕೂ ಹೆಚ್ಚು ಅಭ್ಯರ್ಥಿಗಳು ಅರ್ಹತೆ ಪಡೆದಿದ್ದು, 24ನೇ ರ್‍ಯಾಂಕ್‌ ಪಡೆದ ಬೆಂಗಳೂರಿನ ರಂಗಮಂಜು ರಾಜ್ಯಕ್ಕೆ ಮೊದಲಿಗರಾಗಿ ಹೊರಹೊಮ್ಮಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಕೋಡಿಯಾಲ ಹೊಸಪೇಟೆ ಗ್ರಾಮದ ವೈದ್ಯ ಡಾ.ಸಚಿನ್‌ ಬಿ. ಗುತ್ತೂರು 41ನೇ ರ‍್ಯಾಂಕ್‌, ತೇಜಸ್ವಿ ಪ್ರಸಾದ್‌ ದೇಶಪಾಂಡೆ 99ನೇ ರ್‍ಯಾಂಕ್‌ ಹಾಗೂ ಅನುಪ್ರಿಯ ಸಕ್ಯ 120ನೇ ರ್‍ಯಾಂಕ್‌ ಪಡೆದಿದ್ದಾರೆ. 

ರಂಗಮಂಜು ಅವರ ತಂದೆ ಆರ್. ರಮೇಶ್‌ ಐಪಿಎಸ್‌ ಅಧಿಕಾರಿ. ಮೂಲತಃ ರಾಮನಗರದ ಅವರು ದಶಕಗಳ ಹಿಂದೆಯೇ ಬೆಂಗಳೂರಿನಲ್ಲಿ ನೆಲೆಗೊಂಡಿದ್ದಾರೆ. ಬೆಂಗಳೂರು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿ. ತಂದೆಯ ನಿಧನದ (2019) ನಂತರ ಅವರಂತೆಯೇ ಅಧಿಕಾರಿಯಾಗಬೇಕು ಎಂಬ ಸಂಕಲ್ಪದಲ್ಲಿ ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸಿ, 6ನೇ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

‘ನನ್ನ ಸಾಧನೆಗೆ ತಂದೆಯೇ ಸ್ಫೂರ್ತಿ. ಅವರ ನಿಧನದ ನಂತರ ತಾಯಿ ಎನ್‌. ಸುನೀತಾ ಅವರು ಪ್ರೋತ್ಸಾಹ ನೀಡಿದರು. ಯಾವ ಅಕಾಡೆಮಿಯಲ್ಲೂ ತರಬೇತಿ ಪಡೆಯದೆ, ಮನೆಯಲ್ಲೇ ಕುಳಿತು ಸತತ ಅಧ್ಯಯನ ನಡೆಸಿದೆ. ಕೋವಿಡ್‌ ಸಮಯದಲ್ಲಿ ಯಶಸ್ಸು ಸಿಗಲಿಲ್ಲ. ಕೊನೆಯ ಪ್ರಯತ್ನದಲ್ಲಿ ಸಂದರ್ಶನಕ್ಕೆ ಅವಕಾಶ ಸಿಕ್ಕಿತ್ತು. ಯಶಸ್ವಿಯೂ ಆದೆ. ಕರ್ನಾಟಕದಲ್ಲಿ ಐಎಎಸ್‌ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಇಚ್ಛೆ ಇಟ್ಟುಕೊಂಡಿದ್ದೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಶಕ್ತಿ ದುಬೆಗೆ ಮೊದಲ ರ‍್ಯಾಂಕ್

ನವದೆಹಲಿ(ಪಿಟಿಐ): ಕಳೆದ ವರ್ಷದ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ಮಂಗಳವಾರ ಪ್ರಕಟಿಸಿದ್ದು, ಶಕ್ತಿ ದುಬೆ ಅವರು ಮೊದಲ ರ‍್ಯಾಂಕ್ ಪಡೆದಿದ್ದಾರೆ.

ಹರ್ಷಿತಾ ಗೋಯಲ್ ಹಾಗೂ ಡೋಂಗ್ರೆ ಅರ್ಚಿತ್ ಪರಾಗ್ ಅವರು ಕ್ರಮವಾಗಿ 2 ಮತ್ತು 3ನೇ ರ‍್ಯಾಂಕ್ ಪಡೆದಿದ್ದಾರೆ. ಶಾಹ ಮಾರ್ಗಿ ಚಿರಾಗ್‌ ಹಾಗೂ ಆಕಾಶ್ ಗರ್ಗ್ ಕ್ರಮವಾಗಿ 4 ಮತ್ತು 5ನೇ ಸ್ಥಾನ ಪಡೆದಿದ್ದು,
ಮೊದಲ ಐದು ರ‍್ಯಾಂಕ್‌ ಪಡೆದವರ ಪೈಕಿ ಮೂವರು ಮಹಿಳೆಯರು ಇದ್ದಾರೆ.

ಶಕ್ತಿ ದುಬೆ ಅವರು ಅಲಹಾಬಾದ್‌ ವಿಶ್ವ ವಿದ್ಯಾಲಯದಿಂದ ಜೀವರಸಾಯನ ವಿಜ್ಞಾನ ಪದವಿ ಪಡೆದಿದ್ದಾರೆ. ರಾಜಕೀಯಶಾಸ್ತ್ರ ಹಾಗೂ ಅಂತರರಾಷ್ಟ್ರೀಯ ಸಂಬಂಧಗಳು ಐಚ್ಛಿಕ ವಿಷಯಗಳನ್ನಾಗಿ ತೆಗೆದುಕೊಂಡು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.

2ನೇ ಸ್ಥಾನ ಪಡೆದಿರುವ ಹರ್ಷಿತಾ ಗೋಯಲ್ ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಿಂದ ವಾಣಿಜ್ಯ ಪದವಿ ಪೂರೈಸಿದ್ದಾರೆ. ಇವರು ಐಚ್ಛಿಕ ವಿಷಯ ಗಳನ್ನಾಗಿ ರಾಜಕೀಯಶಾಸ್ತ್ರ ಹಾಗೂ ಅಂತರರಾಷ್ಟ್ರೀಯ ಸಂಬಂಧಗಳು ತೆಗೆದುಕೊಂಡಿದ್ದರು ಎಂದು ಯುಪಿಎಸ್‌ಸಿ ಪ್ರಕಟಣೆ ತಿಳಿಸಿದೆ.

ಮೂರನೇ ಸ್ಥಾನ ಪಡೆದಿರುವ ಪರಾಗ್, ತಮಿಳುನಾಡಿನ ವೆಲ್ಲೂರ್ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ(ವಿಐಟಿ)ಯಿಂದ ಎಲೆಕ್ಟ್ರಿ ಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ತತ್ವಶಾಸ್ತ್ರ ವನ್ನು ಇವರು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದರು.

ಶಾಹ ಮಾರ್ಗಿ ಚಿರಾಗ್ ಅವರು ಅಹಮದಾ ಬಾದ್‌ನ ಗುಜರಾತ್‌ ಟೆಕ್ನಾಲಜಿಕಲ್ ಯುನಿವರ್ಸಿಟಿಯಿಂದ ಕಂಪ್ಯೂಟರ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು, ಸಮಾಜವಿಜ್ಞಾನವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದರು.

ದೆಹಲಿಯ ಗುರು ಗೋವಿಂದ ಸಿಂಗ್‌ ಇಂದ್ರಪ್ರಸ್ಥ ಯುನಿವರ್ಸಿಟಿಯಿಂದ ಕಂಪ್ಯೂಟರ್‌ ಸೈನ್ಸ್‌ನಲ್ಲಿ ಪದವಿ ಪಡೆದಿರುವ ಆಕಾಶ್‌ ಗರ್ಗ್ ಕೂಡ ಸಮಾಜವಿಜ್ಞಾನ ವನ್ನು ಐಚ್ಛಿಕ ವಿಷಯವನ್ನಾಗಿ ತೆಗೆದುಕೊಂಡಿದ್ದರು.

ನಾಗರಿಕ ಸೇವೆಗಳ ಪ್ರಿಲಿಮನರಿ ಪರೀಕ್ಷೆಯು ಕಳೆದ ವರ್ಷ ಜೂನ್‌ 16ರಂದು ನಡೆದಿತ್ತು. 9,92,599 ಅರ್ಜಿ ಸಲ್ಲಿಸಿದ್ದರು. ಈ ಪೈಕಿ, 5,83,213 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ನಡೆದ ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಈ ಪೈಕಿ ಸಂದರ್ಶನಕ್ಕೆ 2,845 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದರು. ಜನವರಿ 7 ಹಾಗೂ ಏಪ್ರಿಲ್‌ 17ರಂದು ಸಂದರ್ಶನ ನಡೆದಿತ್ತು.

ತಾತ್ಕಾಲಿಕ ಪಟ್ಟಿಯಲ್ಲಿ 241 ಅಭ್ಯರ್ಥಿಗಳು: 241 ಅಭ್ಯರ್ಥಿಗಳ ಹೆಸರುಗಳನ್ನು ತಾತ್ಕಾಲಿಕ ಪಟ್ಟಿಯಲ್ಲಿ ಇಡಲಾಗಿದ್ದು,  ಒಬ್ಬ ಅಭ್ಯರ್ಥಿಯ ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಕಾಯ್ದಿರಿಸಿದ ಪಟ್ಟಿಯಲ್ಲಿ 230 ಅಭ್ಯರ್ಥಿಗಳು ಇದ್ದಾರೆ ಎಂದು ಯುಪಿಎಸ್‌ಸಿ ತಿಳಿಸಿದೆ.

‘ನೆರವು ಕೇಂದ್ರ’ ಸ್ಥಾಪನೆ: ಅಭ್ಯರ್ಥಿಗಳ ಅನುಕೂಲಕ್ಕಾಗಿ ದೆಹಲಿಯಲ್ಲಿನ ಆಯೋಗದ ಕಚೇರಿ ಆವರಣದಲ್ಲಿ ‘ನೆರವು ಕೇಂದ್ರ’ ಸ್ಥಾಪಿಸಲಾಗಿದೆ. ಪರೀಕ್ಷೆ ಅಥವಾ ನೇಮಕಾತಿಗೆ ಸಂಬಂಧಿಸಿ ಮಾಹಿತಿ ಇಲ್ಲವೇ ಸ್ಪಷ್ಟನೆಗಾಗಿ ಅಭ್ಯರ್ಥಿಗಳು ಎಲ್ಲ ದಿನಗಳಂದು ಕಚೇರಿ ಅವಧಿ ವೇಳೆ (ಬೆಳಿಗ್ಗೆ 10ರಿಂದ ಸಂಜೆ 5)  ದೂರವಾಣಿ ಸಂಖ್ಯೆ 23385271/23381125/23098543ಕ್ಕೆ ಕರೆ ಮಾಡಬಹುದು ಎಂದು ಯುಪಿಎಸ್‌ಸಿ ಹೇಳಿದೆ.

www.upsc.gov.in ವೆಬ್‌ಸೈಟ್‌ನಲ್ಲಿ ಕೂಡ ಫಲಿ ತಾಂಶ ಲಭ್ಯವಿದ್ದು, 15 ದಿನಗಳ ಒಳಗಾಗಿ ಅಂಕಗಳನ್ನು ಕೂಡ ಪ್ರಕಟಿಸಲಾಗುವುದು ಎಂದೂ ಹೇಳಿದೆ.

ವರ್ಗವಾರು ಅಭ್ಯರ್ಥಿಗಳ ವಿವರ

ವರ್ಗ;ಸಂಖ್ಯೆ

ಸಾಮಾನ್ಯ;335

ಇಡಬ್ಲ್ಯುಎಸ್‌;109

ಒಬಿಸಿ;318

ಎಸ್‌ಸಿ;160

ಎಸ್‌ಟಿ;87

ಒಟ್ಟು;1,009

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.