ADVERTISEMENT

ಸರ್ಕಾರದ ನಿರ್ಲಕ್ಷ್ಯಕ್ಕೆ ಕೆಎಸ್‌ಟಿಡಿಸಿ ಕ್ಯಾಬ್ ಚಾಲಕ ಬಲಿ: ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 5:22 IST
Last Updated 31 ಮಾರ್ಚ್ 2021, 5:22 IST
ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ
ಕರ್ನಾಟಕ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ   

ಬೆಂಗಳೂರು: ಸರ್ಕಾರದ ನಿರ್ಲಕ್ಷ್ಯಕ್ಕೆ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ (ಕೆಎಸ್‌ಟಿಡಿಸಿ) ಕ್ಯಾಬ್‌ ಚಾಲಕ ಪ್ರತಾಪ್‌ ಜೀವ ಬಲಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ನಾಯಕ ಎಚ್. ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹೊರ ಭಾಗದಲ್ಲಿ ಪ್ರತಾಪ್ ಎಂಬವರು ಕಾರಿನಲ್ಲೇ ಮೈ ಮೇಲೆ ಪೆಟ್ರೋಲ್ ಸುರಿದುಕೊಂಡು ಮಂಗಳವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಮಧ್ಯರಾತ್ರಿಯ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ.

ಕ್ಯಾಬ್ ಚಾಲನೆಯಿಂದ ನಷ್ಟಕ್ಕೆ ಸಿಲುಕಿದ್ದ ಪ್ರತಾಪ್ ಆರ್ಥಿಕ ಸಂಕಷ್ಟದಿಂದಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬುದು ವರದಿಯಾಗಿದೆ.

ADVERTISEMENT

ಈ ಕುರಿತು ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ಬಾಡಿಗೆ ದೊರೆಯದೇ ಆರ್ಥಿಕ ಸಂಕಷ್ಟಕ್ಕೀಡಾಗಿದ್ದ ಕೆಎಸ್‌ಟಿಡಿಸಿ ಕ್ಯಾಬ್‌ ಚಾಲಕ ಪ್ರತಾಪ್‌ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಮಧ್ಯರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ. ಪ್ರತಾಪ್‌ ಅವರ ಸಾವಿನೊಂದಿಗೆ ಕೆಎಸ್‌ಟಿಡಿಸಿ ಚಾಲಕರ ಸಮಸ್ಯೆಗಳು ತೆರೆದುಕೊಂಡಿವೆ' ಎಂದು ಹೇಳಿದ್ದಾರೆ.

'ಕ್ಯಾಬ್‌ ಉದ್ಯಮದ ದರ ಸಮರ, ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಾಪ್‌ ಜೀವ ಬಲಿಯಾಗಿದೆ. ಟ್ಯಾಕ್ಸಿ, ಕ್ಯಾಬ್‌ಗಳಿಗೆ ಸರ್ಕಾರ 1 ಕಿ.ಮೀಗೆ ₹24 ದರ ನಿಗದಿ ಮಾಡಿದೆ. ಕೆಎಸ್‌ಟಿಡಿಸಿ ಚಾಲಕರು ಇದನ್ನು ಪಾಲಿಸುತ್ತಿದ್ದರೆ, ಖಾಸಗಿ ಕಂಪನಿಗಳು ನಿಯಮ ಗಾಳಿಗೆ ತೂರಿ ಗ್ರಾಹಕರನ್ನು ಆಕರ್ಷಿಸುತ್ತಿವೆ. ಕೆಎಸ್‌ಟಿಡಿಸಿ ಚಾಲಕರು ಸೊರಗುತ್ತಿದ್ದಾರೆ' ಎಂದಿದ್ದಾರೆ.

'ಕೆಎಸ್‌ಟಿಡಿಸಿ ಕ್ಯಾಬ್‌ಗಳು ದರ ನಿಯಮ ಪಾಲಿಸುತ್ತಿದ್ದರೆ, ಖಾಸಗಿ ಕ್ಯಾಬ್‌ಗಳು ₹9ಕ್ಕೆ ಗ್ರಾಹಕರನ್ನು ಸೆಳೆಯುತ್ತಿವೆ. ಹೀಗಾಗಿ ಕೆಎಸ್‌ಟಿಡಿಸಿ ಕ್ಯಾಬ್‌ಗಳಿಗೆ ಗ್ರಾಹಕರೇ ಇಲ್ಲದಂತಾಗಿದೆ. ಚಾಲಕರು ಸಮಸ್ಯೆಗೆ ಸಿಲುಕಿದ್ದಾರೆ. ಇದರ ಜೊತೆಗೆ ವಿಮಾನ ನಿಲ್ದಾಣದ ಪಾರ್ಕಿಂಗ್‌ನಲ್ಲೂ ನಡೆಯುತ್ತಿರುವ ರಾಜಕೀಯ ಚಾಲಕರ ಕೊರಳು ಹಿಂಡುತ್ತಿದೆ' ಎಂದು ಹೇಳಿದ್ದಾರೆ.

'ಸರ್ಕಾರ ದರ ಸಮರದತ್ತ ಕೂಡಲೇ ಗಮನಹರಿಸಬೇಕು. ನಿಯಮ ಪಾಲಿಸದೇ ಮಾರುಕಟ್ಟೆಯಲ್ಲಿ ಅನಗತ್ಯ ಪೈಪೋಟಿ ಸೃಷ್ಟಿ ಮಾಡುತ್ತಿರುವ, ಆ ಮೂಲಕ ಅಮಾಯಕ ಚಾಲಕರ ಪ್ರಾಣ ಕಸಿಯುತ್ತಿರುವ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಬೇಕು. ಅದರ ಮೂಲಕ ಅಮಾಯಕ, ಶ್ರಮಜೀವಿ ಕ್ಯಾಬ್‌ ಚಾಲಕರ ರಕ್ಷಣೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ನಾನು ಆಗ್ರಹಿಸುತ್ತೇನೆ' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.