
ವಿ. ಸೋಮಣ್ಣ
ಬೆಂಗಳೂರು: ‘ಕಷ್ಟಕರವಾದ ಯಾವುದೇ ಮೂರು ಲೋಕಸಭಾ ಕ್ಷೇತ್ರಗಳ ಉಸ್ತುವಾರಿ ಕೊಟ್ಟರೂ ಸರಿ, ಅವುಗಳನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ವರಿಷ್ಠರಿಗೆ ಹೇಳಿದ್ದೇನೆ’ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು.
ಸೋಮವಾರ ಅವರು ಸುದ್ದಿಗಾರರ ಜತೆ ಮಾತನಾಡಿ, ‘ವರಿಷ್ಠರನ್ನು ಶನಿವಾರ ಭೇಟಿ ಮಾಡಿದಾಗ ರಾಜ್ಯಸಭೆಗೆ ಟಿಕೆಟ್ ಕೇಳುವುದರ ಜತೆಗೆ ಮೂರು ಲೋಕಸಭಾ ಕ್ಷೇತ್ರಗಳ ಗೆಲ್ಲಿಸಿಕೊಂಡು ಬರುವ ಜವಾಬ್ದಾರಿಯನ್ನೂ ಕೇಳಿದ್ದೇನೆ’ ಎಂದರು.
‘ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಐದು ನಿಮಿಷ ಸಮಯ ಕೇಳಿದ್ದೆ. ಆದರೆ, ಅವರು ನನ್ನ ಜತೆ ಅರ್ಧ ಗಂಟೆ ಮಾತನಾಡಿದರು. ಇದೀಗ ಎಲ್ಲವೂ ಸುಖಾಂತ್ಯವಾಗಿದೆ. ಒಳ್ಳೆಯತನಕ್ಕೆ ಮತ್ತು ಒಳ್ಳೆಯ ನಡವಳಿಕೆಗೆ ಬೆಲೆ ಇರುತ್ತದೆ ಎಂಬುದಕ್ಕೆ ದೆಹಲಿ ಭೇಟಿಯೇ ಒಂದು ಉದಾಹರಣೆ. ಅಮಿತ್ ಶಾ ಅವರು ನನ್ನ ಬಗ್ಗೆ ಸಕಾರಾತ್ಮಕವಾಗಿಯೇ ಇದ್ದರು. ಮುಂದೆ ಒಳ್ಳೆಯ ತೀರ್ಮಾನವನ್ನೇ ತೆಗೆದುಕೊಳ್ಳಲಿದ್ದಾರೆ’ ಎಂದು ಸೋಮಣ್ಣ ವಿಶ್ವಾಸ ವ್ಯಕ್ತಪಡಿಸಿದರು.
‘ಕೆಲಸ ಮಾಡಿ ಮುಂದಿನದು ಚರ್ಚೆ ಮಾಡುತ್ತೇವೆ ಎಂದು ಶಾ ಅವರು ಹೇಳಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.