
ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ದ್ವೇಷ ಭಾಷಣ ಮಸೂದೆ ಕುರಿತು ವ್ಯಾಪಕ ಚರ್ಚೆಗೆ ಅವಕಾಶ ನೀಡಲಾಗಿತ್ತು ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರು ತಿಳಿಸಿದರು.
ಈ ಮಸೂದೆಯನ್ನು ತರಾತುರಿಯಲ್ಲಿ ಅಂಗೀಕರಿಸಿಲ್ಲ. ವಿರೋಧ ಪಕ್ಷಗಳು ಬಯಸಿದ ರೀತಿಯಲ್ಲೇ ಚರ್ಚೆಗೆ ಅವಕಾಶ ನೀಡಿದ್ದಾಗಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
‘ಸಚಿವರೊಬ್ಬರು ನೀಡಿದ ಹೇಳಿಕೆಯನ್ನು ಆಧರಿಸಿ ಬಿಜೆಪಿ ಸದಸ್ಯರು ಪೀಠದ ಮುಂದೆ ಬಂದು ಪ್ರತಿಭಟನೆ ನಡೆಸಿದರು. ಇದು ಎಷ್ಟರ ಮಟ್ಟಿಗೆ ಸರಿ? ವಿರೋಧ ಪಕ್ಷದ ನಾಯಕರು ಮಾತನಾಡುತ್ತಿರುವ ಸಂದರ್ಭದಲ್ಲಿ ಈ ರೀತಿ ವರ್ತಿಸಿದ್ದು ಸರಿಯೇ’ ಎಂದು ಅವರು ಪ್ರಶ್ನಿಸಿದರು.
ಬೆಳಗಾವಿಯಲ್ಲಿ ಚಳಿಗಾಲದ ಬದಲು ಮುಂಗಾರು ಅಧಿವೇಶನ ನಡೆಸಬೇಕು ಎಂಬ ಚರ್ಚೆ ನಡೆಯುತ್ತಿದೆ. ಡಿಸೆಂಬರ್‌ನಲ್ಲಿ ಮದುವೆ ಮತ್ತು ಇತರ ಕಾರ್ಯಕ್ರಮಗಳು ನಡೆಯುತ್ತವೆ. ಆಗ ಲಾಡ್ಜ್ ಮತ್ತು ಹೊಟೇಲ್ ರೂಮ್‌ಗಳೂ ಬುಕ್ ಆಗಿರುತ್ತವೆ. ಇದರಿಂದ ಸಮಸ್ಯೆ ಆಗುತ್ತಿದೆ. ಹೀಗಾಗಿ ಮಳೆಗಾಲದಲ್ಲಿ ಅಧಿವೇಶನ ನಡೆಸಬಹುದು ಎಂಬ ಸಲಹೆಗಳು ಬಂದಿವೆ ಎಂದು ಅವರು ಹೇಳಿದರು.
‘ಸಚಿವೆ ಲಕ್ಷ್ಮಿ ಹೆಬ್ಬಾಳಕರ ಅವರು ತಪ್ಪು ಉತ್ತರ ನೀಡಿದ್ದರಿಂದ ಸದನವನ್ನು ತಪ್ಪು ದಾರಿಗೆ ಎಳೆದಂತಾಗಿದೆಯಲ್ಲವೇ’ ಎಂಬ ಪ್ರಶ್ನೆಗೆ, ‘ತಪ್ಪು ಮಾಹಿತಿ ನೀಡಿದ ಕಾರಣಕ್ಕೆ ಕ್ಷಮೆ ಕೇಳಿದ್ದಾರಲ್ಲ’ ಎಂದು ಖಾದರ್ ಹೇಳಿದರು.
ಈ ಬಾರಿ ಒಟ್ಟು 30,010 ಜನ ಕಲಾಪವನ್ನು ವೀಕ್ಷಣೆ ಮಾಡಿದ್ದು, ಈ ಪೈಕಿ 14,462 ಮಂದಿ ಶಾಲಾ ವಿದ್ಯಾರ್ಥಿಗಳು ಬಂದಿದ್ದರು ಎಂದು ಅವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.