ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಅಂಕಪಟ್ಟಿಗೆ ಸುರಕ್ಷತೆ ಒದಗಿಸಿ, ನಕಲು ದಂಧೆಗೆ ಕೊನೆ ಹಾಡಲು ಪರಿಚಯಿಸಿದ ಡಿಜಿಟಲ್ ವ್ಯವಸ್ಥೆಯೇ ಈಗ ಕಂಟಕವಾಗಿದ್ದು, ಸಾವಿರಾರು ವಿದ್ಯಾರ್ಥಿಗಳ ಅಂಕಪಟ್ಟಿಗಳಿಂದ ಅಂಕಗಳೇ ನಾಪತ್ತೆಯಾಗಿವೆ.
ಪ್ರತಿ ವಿಶ್ವವಿದ್ಯಾಲಯವೂ ತನ್ನ ವ್ಯಾಪ್ತಿಯ ಪದವಿ ಹಾಗೂ ಸ್ನಾತಕೋತ್ತರ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ನಂತರ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿಗಳನ್ನು (ಹಾರ್ಡ್ ಕಾಪಿ) ವಿತರಿಸುತ್ತಿತ್ತು. ಉನ್ನತ ಶಿಕ್ಷಣ ಇಲಾಖೆಯು 2021–22ನೇ ಸಾಲಿನಿಂದ ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳ ನಿರ್ವಹಣಾ ವ್ಯವಸ್ಥೆಯನ್ನು (ಯುಯುಸಿಎಂಎಸ್) ಜಾರಿಗೆ ತಂದಿದೆ. ಅಂದಿನಿಂದ ಎಲ್ಲ ವಿಶ್ವವಿದ್ಯಾಲಯಗಳೂ ಪ್ರತಿ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಯುಯುಸಿಎಂಎಸ್‌ನಲ್ಲಿ ನಮೂದಿಸುತ್ತವೆ. ವಿದ್ಯಾರ್ಥಿಗಳು ತಮ್ಮ ಲಾಗಿನ್ ಮೂಲಕ ಪರೀಕ್ಷಾ ಸಂಖ್ಯೆ ನಮೂದಿಸಿ, ಆಯಾ ವರ್ಷದ ಡಿಜಿಟಲ್ ಅಂಕಪಟ್ಟಿ ಪಡೆಯಬಹುದು.
ಪ್ರತಿ ಸೆಮಿಸ್ಟರ್‌ನಲ್ಲೂ ಅಧಿಕ ಅಂಕಗಳೊಂದಿಗೆ ತೇರ್ಗಡೆಯಾಗಿದ್ದ ವಿದ್ಯಾರ್ಥಿಗಳು ಈಗ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಂಡರೆ ಅದರಲ್ಲಿ ಅಂಕಗಳೇ ನಾಪತ್ತೆಯಾಗಿವೆ. ಅವರ ಉನ್ನತ ಶಿಕ್ಷಣ, ಉದ್ಯೋಗದ ಕನಸುಗಳು ಭಗ್ನವಾಗಿವೆ. ಪದವಿ ಮುಗಿಸಿದ ಹಲವು ವಿದ್ಯಾರ್ಥಿಗಳು ಮೂರು ವರ್ಷಗಳ ಡಿಜಿಟಲ್ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಂಡಾಗ ಮೊದಲ ಹಾಗೂ ಎರಡನೇ ವರ್ಷದ ಪದವಿಯ ನಾಲ್ಕು ಸೆಮಿಸ್ಟರ್‌ಗಳಲ್ಲಿ ಅವರು ಅನುತ್ತೀರ್ಣರಾಗಿದ್ದಾರೆಂದು ಅಂಕಪಟ್ಟಿ ತೋರಿಸುತ್ತಿದೆ. ಅಂತಹ ವಿದ್ಯಾರ್ಥಿಗಳು ತಾವು ಓದಿದ ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ನಿತ್ಯವೂ ಅಲೆಯುವಂತಾಗಿದೆ. ಪರೀಕ್ಷಾ ವಿಭಾಗದ ಮುಂದೆ ಅಂಕಪಟ್ಟಿ ತಿದ್ದುಪಡಿಗೆ ನಿಂತವರ ಸರದಿ ಸಾಲು ಬೆಳೆಯುತ್ತಲೇ ಇದೆ. ಅಧಿಕಾರಿಗಳು ಮತ್ತು ಸಿಬ್ಬಂದಿ ತಿದ್ದುಪಡಿ ಸಾಧ್ಯವಾಗದೇ ಹೈರಾಣಾಗುತ್ತಿದ್ದಾರೆ.
ಉನ್ನತ ಶಿಕ್ಷಣ, ಉದ್ಯೋಗಕ್ಕೂ ಅಡ್ಡಿ: ಪದವಿ ಪೂರೈಸಿ ಎಂ.ಎ, ಎಂ.ಕಾಂ, ಎಂ.ಎಸ್‌ಸಿ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಅರ್ಜಿ ಸಲ್ಲಿಸಿದ, ಎಂ.ಬಿ.ಎ, ಎಂ.ಸಿ.ಎ ಮೊದಲಾದ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಬರೆದಿದ್ದ ಹಲವು ವಿದ್ಯಾರ್ಥಿಗಳಿಗೆ ಅಂಕಗಳ ದೋಷದ ಕಾರಣ ಸೀಟು ಪಡೆಯಲು ಸಾಧ್ಯವಾಗಿಲ್ಲ. ಉದ್ಯೋಗಕ್ಕೆ ಅರ್ಜಿ ಸಲ್ಲಿಸಲೂ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ.
‘ಶಿವಮೊಗ್ಗದ ಬಾಪೂಜಿ ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಮ್ಮ ಮಗಳು ಈ ಬಾರಿ ಬಿ.ಸಿ.ಎ ಮುಗಿಸಿದ್ದಾಳೆ. ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆಯಲು ಡಿಜಿಟಲ್ ಅಂಕಪಟ್ಟಿ ಡೌನ್‌ಲೋಡ್ ಮಾಡಿಕೊಂಡಾಗ ಮೂರನೇ ಸೆಮಿಸ್ಟರ್ ಅಂಕಪಟ್ಟಿಯೇ ಮಾಯವಾಗಿದೆ. ಈ ಕುರಿತು ಕಾಲೇಜಿನ ಪ್ರಾಶುಪಾಲರು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವರಿಗೆ ಪತ್ರ ಕೊಟ್ಟಿದ್ದಾರೆ. ದೂರದ ಊರಿನಿಂದ ಕಾಲೇಜು ಹಾಗೂ ವಿಶ್ವವಿದ್ಯಾಲಯಕ್ಕೆ ಅಲೆದು ಸಾಕಾಗಿದೆ. ಒಂದು ತಿಂಗಳಾದರೂ ಸಮಸ್ಯೆ ಬಗೆಹರಿದಿಲ್ಲ’ ಎನ್ನುತ್ತಾರೆ ಪೋಷಕ ಭಾಗಜ್ಜಿ ಮಂಜಪ್ಪ.
‘ನಿಯಮದ ಪ್ರಕಾರ ಬೇಡಿಕೆ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಭೌತಿಕ ಅಂಕಪಟ್ಟಿ ನೀಡುವುದು ಕಡ್ಡಾಯ. ಆದರೆ, ಬಹುತೇಕ ವಿಶ್ವವಿದ್ಯಾಲಯಗಳು ನೀಡುತ್ತಿಲ್ಲ. ಹಲವು ಕಂಪನಿಗಳು ಉದ್ಯೋಗ ನೀಡುವಾಗ ಡಿಜಿಟಲ್ ಅಂಕಪಟ್ಟಿ ನಿರಾಕರಿಸುತ್ತಿವೆ. ಇದರಿಂದ ಉದ್ಯೋಗಕ್ಕೂ ಅಡ್ಡಿಯಾಗಿದೆ’ ಎನ್ನುತ್ತಾರೆ ಪದವೀಧರ ವಿದ್ಯಾರ್ಥಿ ಅನಿಲ್‌ಕುಮಾರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.