ADVERTISEMENT

‘ಪಂಚಮಸಾಲಿ ಮೀಸಲಾತಿ: ಅವಸರ ಪಟ್ಟರೆ ಸಂಕಷ್ಟ’: ವಚನಾನಂದ ಸ್ವಾಮೀಜಿ

ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2022, 21:30 IST
Last Updated 6 ಮಾರ್ಚ್ 2022, 21:30 IST
ವಚನಾನಂದ ಸ್ವಾಮೀಜಿ
ವಚನಾನಂದ ಸ್ವಾಮೀಜಿ   

ಹರಿಹರ: ‘ಆರ್ಥಿಕ, ಸಾಮಾಜಿಕ, ರಾಜಕೀಯವಾಗಿ ಹಿಂದುಳಿದಿರುವ ಪಂಚಮಸಾಲಿ ಸಮುದಾಯದವರಿಗೆ ನ್ಯಾಯಯುತವಾಗಿ 2ಎ ಮೀಸಲಾತಿ ದೊರೆಯಬೇಕು. ಆದರೆ ಮೀಸಲಾತಿ ದೊರಕಿಸಲು ಅವಸರ ಪಟ್ಟರೆ ಸಂಕಷ್ಟ ಎದುರಾಗಬಹುದು’ ಎಂದು ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ ವಚನಾನಂದ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹನಗವಾಡಿ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಲ್ಲಿ ಭಾನುವಾರ ನಡೆದ ರಾಜ್ಯ ಪಂಚಮಸಾಲಿ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮಾಜಕ್ಕೆ 2ಎ ಮೀಸಲಾತಿಗಾಗಿ ಎಲ್ಲ ರೀತಿಯ ಹೋರಾಟಕ್ಕೆ ಸಿದ್ಧವಾಗಿದ್ದೇವೆ. ಈ ದಿಸೆಯಲ್ಲಿ ಹಿಂದುಳಿದ ಆಯೋಗದ ಮುಂದೆ ನಮ್ಮ ವಾದ ಮಂಡನೆ ಮಾಡುತ್ತಿದ್ದೇವೆ.ಹೋರಾಟದಿಂದ ಹಿಂದೆ ಬಿದ್ದಿಲ್ಲ. ಆದರೆ ಹಾದಿ, ಬೀದಿ ಹೋರಾಟ ಮಾಡಿ ಅವಸರದಲ್ಲಿ ಮೀಸಲಾತಿ ಪಡೆದರೆ ಸಂಕಷ್ಟ ಎದುರಾಗಬಹುದು. ಮಹಾರಾಷ್ಟ್ರದಲ್ಲಿ ಮರಾಠಿ ಜನಾಂಗದವರಿಗೆ ಮೀಸಲಾತಿ ಘೋಷಿಸಿದರೂ ಲಾಭ ದೊರೆಯದಂತಾಗಿದೆ. ಅಂತಹ ಸ್ಥಿತಿ ನಮಗೂ ಎದುರಾಗಬಾರದು ಎಂದು ಸಂಯಮದಿಂದ ಹೆಜ್ಜೆ ಇಡುತ್ತಿದ್ದೇವೆ’ ಎಂದು ಹೇಳಿದರು.

ADVERTISEMENT

‘ನಾವು ವಿಐಪಿ ಸ್ವಾಮೀಜಿಯೇ. ಇದರಲ್ಲಿ ತಪ್ಪೇನಿದೆ? ವಿಐಪಿ ಎಂದರೆ ವೆರಿ ಇಂಪಾರ್ಟೆಂಟ್ ಪಂಚಮಸಾಲಿ ಸ್ವಾಮೀಜಿ’ ಎಂದು ಹೇಳುವ ಮೂಲಕ ತಮ್ಮನ್ನು ವಿಐಪಿ, ಹೈಫೈ ಸ್ವಾಮೀಜಿ ಎನ್ನುವವರಿಗೆ ವಚನಾನಂದ ಸ್ವಾಮೀಜಿ ತಿರುಗೇಟು ನೀಡಿದರು.

ಏ.20ರಿಂದ 24ರವರೆಗೆ ಹರ ಜಾತ್ರೆ:ಏ.20ರಿಂದ 24ರವರೆಗೆ ಹರಜಾತ್ರೆ ಮಹೋತ್ಸವ ಆಚರಿಸಲಾಗುವುದು. ಈ ಬಾರಿ ಉದ್ಯೋಗ ಮೇಳ ನಡೆಸಲಿದ್ದು, 100 ಖಾಸಗಿ ಕಂಪನಿಗಳು ಭಾಗವಹಿಸಲು ಒಪ್ಪಿಗೆ ಸೂಚಿಸಿವೆ ಎಂದು ಸ್ವಾಮೀಜಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.