ADVERTISEMENT

ವಾಲ್ಮೀಕಿ ನಿಗಮದ ಪ್ರಕರಣ: ಬೆಂಗಳೂರು, ಬಳ್ಳಾರಿ ಪ್ರಮುಖರಿಗೆ ಹಣ

ಮೊಬೈಲ್‌ ಸಾಕ್ಷ್ಯ ನಾಶಪಡಿಸಿದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ?

​ಪ್ರಜಾವಾಣಿ ವಾರ್ತೆ
Published 9 ಜೂನ್ 2024, 0:03 IST
Last Updated 9 ಜೂನ್ 2024, 0:03 IST
<div class="paragraphs"><p>ವಾಲ್ಮೀಕಿ ನಿಗಮ</p></div>

ವಾಲ್ಮೀಕಿ ನಿಗಮ

   

ಚಿತ್ರ ಕೃಪೆ: ಕರ್ನಾಟಕ ಸರ್ಕಾರ ವೆಬ್‌ಸೈಟ್‌

ಬೆಂಗಳೂರು: ಮಹರ್ಷಿ ವಾಲ್ಮೀಕಿ ನಿಗಮದ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಂಗಳೂರು ಹಾಗೂ ಬಳ್ಳಾರಿಯ ‘ಕೆಲವು ಪ್ರಮುಖರಿಗೆ’ ನಗದು ರೂಪದಲ್ಲಿ ದೊಡ್ಡ ಮೊತ್ತ ಸಂದಾಯ ಆಗಿರುವುದನ್ನು ಪತ್ತೆಹಚ್ಚಿದೆ.

ADVERTISEMENT

ಹೈದರಾಬಾದ್‌ನ ‘ಫಸ್ಟ್‌ ಫೈನಾನ್ಸ್ ಕ್ರೆಡಿಟ್ ಕೋ-ಆಪರೇಟಿವ್‌ ಸೊಸೈಟಿ’ಯ (ಎಫ್‌ಎಫ್‌ಸಿಸಿಎಸ್‌ಎಲ್‌) 18 ಖಾತೆಗಳಿಗೆ ವಾಲ್ಮೀಕಿ ನಿಗಮದ ಖಾತೆಯಿಂದ ₹94.73 ಕೋಟಿ ಹಣ ವರ್ಗಾವಣೆ ಆಗಿತ್ತು. ಈ ಸಂಬಂಧ ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ರಾಜ್ಯ ಸರ್ಕಾರವು ಎಸ್‌ಐಟಿಗೆ ವಹಿಸಿತ್ತು.

‘18 ಖಾತೆಗಳ ಪೈಕಿ ಒಂದು ಖಾತೆಯಿಂದ ನಿಗಮದ ಖಾತೆಗೆ ₹5 ಕೋಟಿ ಹಣ ವಾಪಸ್ ಬಂದಿದೆ. ಆದರೆ, ಉಳಿದ 17 ಖಾತೆಗಳಿದ್ದ ₹89.73 ಕೋಟಿ ಡ್ರಾ ಆಗಿರುವುದು ಪತ್ತೆಯಾಗಿದೆ. ಈ ಹಣವು ಬೆಂಗಳೂರು ಹಾಗೂ ಬಳ್ಳಾರಿಯ ಪ್ರಮುಖರ ಕೈಸೇರಿದೆ. ಯಾರಿಗೆ ಹಣ ಸಂದಾಯವಾಗಿದೆ ಎಂಬುದನ್ನು ಪತ್ತೆ ಹಚ್ಚಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.

‘ಹಣ ವರ್ಗಾವಣೆಯಲ್ಲಿ ಮಾಜಿ ಸಚಿವ ಬಿ.ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್‌ ಹಾಗೂ ಆತನ ಸಂಬಂಧಿ ನಾಗೇಶ್ವರ ರಾವ್‌ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರ ವಿಚಾರಣೆ ನಡೆಸಲಾಗುತ್ತಿದೆ.
ಎಫ್‌ಎಫ್‌ಸಿಸಿಎಸ್‌ಎಲ್‌ ಅಧ್ಯಕ್ಷ ಸತ್ಯನಾರಾಯಣ ಅವರು ಕಸ್ಟಡಿಯಲಿದ್ದು, 17 ನಕಲಿ ಖಾತೆಗಳನ್ನು ತೆರೆದವರಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಹೇಳಿವೆ.

ಮೊಬೈಲ್‌ ನಾಶಪಡಿಸಿದ ಎಂಡಿ?:

‘ನಿಗಮದ ಹಿಂದಿನ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಜೆ.ಜೆ.ಪದ್ಮನಾಭ್‌ ತನ್ನ ಮೊಬೈಲ್‌ ನಾಶಪಡಿಸಿದ್ದಾನೆ. ಪದ್ಮನಾಭ್‌ ಸ್ನೇಹಿತ ಎಸ್‌.ಎಂ.ದಿವಾಕರ್‌ ಎಂಬವರನ್ನು ವಿಚಾರಣೆ ನಡೆಸಲಾಗಿದೆ. ಅಕ್ರಮಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳು ಲಭಿಸಿವೆ’ ಎಂದು ಗೊತ್ತಾಗಿದೆ.

‘ನಿಗಮದ ಅಧಿಕಾರಿಗಳ ವಿಚಾರಣೆ ಮುಂದುವರಿದಿದ್ದು ಕೆಲವು ಗೊಂದಲದ ಹೇಳಿಕೆ ನೀಡುತ್ತಿದ್ದಾರೆ. ನಾಗರಾಜ್‌, ನಾಗೇಶ್ವರ ರಾವ್ ಹಾಗೂ ನಿಗಮದ ಬಂಧಿತ ಅಧಿಕಾರಿಗಳನ್ನು ಮುಖಾಮುಖಿ ವಿಚಾರಣೆ ನಡೆಸಲಾಗಿದೆ. ನಾಗರಾಜ್ ಸೂಚನೆ ಮೇರೆಗೆ ಹಣ ವರ್ಗಾವಣೆ ಮಾಡಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲ. ನಿಗಮದ ನಕಲಿ ಸೀಲುಗಳು ಹಾಗೂ ದಾಖಲೆಗಳನ್ನು ನಾಗರಾಜ್‌, ನಾಗೇಶ್ವರ ರಾವ್ ಅವರೇ ಸೃಷ್ಟಿಸಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ’ ಎಂದು ಗೊತ್ತಾಗಿದೆ.

‘ಅಕ್ರಮ ನಡೆದಿದ್ದರೆ ತನಿಖೆ ನಡೆಸಲಿ’
ಬೆಂಗಳೂರು: ‘ನಾನು ಸಮಾಜ ಕಲ್ಯಾಣ ಸಚಿವನಾಗಿದ್ದ ಅವಧಿಯಲ್ಲಿ ಯಾವುದೇ ಭ್ರಷ್ಟಾಚಾರ ನಡೆಸಿದ್ದರೆ ರಾಜ್ಯ ಸರ್ಕಾರ ನಿಷ್ಪಕ್ಷಪಾತ ತನಿಖೆ ನಡೆಸಲಿ. ರಾಜಕೀಯಕ್ಕಾಗಿ ಆಧಾರರಹಿತ ಆರೋಪ ಮಾಡುವುದು ಬೇಡ’ ಎಂದು ಉಡುಪಿ– ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ‘ಕೋಟ ಶ್ರೀನಿವಾಸ ಪೂಜಾರಿ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದ ಅವಧಿಯಲ್ಲಿ ಬೋವಿ ಅಭಿವೃದ್ಧಿ ನಿಗಮದಲ್ಲಿ ₹ 100 ಕೋಟಿ ಅಕ್ರಮ ನಡೆದಿದೆ’ ಎಂಬ ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ ಆರೋಪದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಯಾವುದೇ ಭ್ರಷ್ಟಾಚಾರ ನಡೆಸಿಲ್ಲ. ಆರೋಪ ಮಾಡುವವರ ಬಳಿ ಆಧಾರಗಳು ಇದ್ದರೆ ಸಮಗ್ರವಾಗಿ ತನಿಖೆ ನಡೆಸಲು ಅನುಕೂಲವಾಗುವಂತೆ ದಾಖಲೆಗಳನ್ನು ಸರ್ಕಾರಕ್ಕೆ ಕೊಡಲಿ’ ಎಂದರು. ‘ಸಮಾಜ ಕಲ್ಯಾಣ ಸಚಿವನಾದ ತಕ್ಷಣವೇ ಇಲಾಖೆ ವ್ಯಾಪ್ತಿಯ ನಿಗಮದಲ್ಲಿ ಅವ್ಯವಹಾರ ನಡೆದಿರುವ ಮಾಹಿತಿ ದೊರಕಿತು. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಿದ್ದೆ. ಬಿಜೆಪಿ ಅಧಿಕಾರದಿಂದ ಇಳಿದು ಒಂದು ವರ್ಷವಾಯಿತು. ಈವರೆಗೂ ತನಿಖೆ ಏನಾಗಿದೆ ಎಂಬುದು ಗೊತ್ತಿಲ್ಲ. ಅಕ್ರಮದಲ್ಲಿ ನನ್ನ ಪಾತ್ರ ಇರುವುದು ಕಂಡುಬಂದರೆ ನನ್ನನ್ನೂ ತನಿಖೆಗೆ ಒಳಪಡಿಸಲಿ’ ಎಂದು ಹೇಳಿದರು. ‘ಗೂಳಿಹಟ್ಟಿ ಶೇಖರ್‌ ಯಾವ ಕಾರಣಕ್ಕೆ ಆರೋಪ ಮಾಡಿದ್ದಾರೊ ಗೊತ್ತಿಲ್ಲ. ಈಗ ಅವರು ನಿರಾಧಾರ ಆರೋಪ ಮಾಡಿರುವುದಕ್ಕೆ ಕ್ಷಮೆಯನ್ನೂ ಕೇಳಿದ್ದಾರೆ. ಆದರೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅಕ್ರಮ ವರ್ಗಾವಣೆ ಹಗರಣದಲ್ಲಿ ಬಿ. ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ನನ್ನ ಹೆಸರನ್ನು ಎಳೆದು ತಂದು ದಿಕ್ಕು ತಪ್ಪಿಸಲು ಕಾಂಗ್ರೆಸ್ ನಾಯಕರು ಯತ್ನಿಸಿದ್ದಾರೆ’ ಎಂದರು. ‘ಹಿಂದೆಯೂ ಇದೇ ರೀತಿ ನನ್ನ ತೇಜೋವಧೆ ಯತ್ನ ನಡೆದಿತ್ತು. ₹63 ಕೋಟಿ ಮೌಲ್ಯದ ಆಸ್ತಿ ಸಂಪಾದಿಸಿದ್ದೇನೆ ಎಂಬ ಸುಳ್ಳು ಆರೋಪ ಮಾಡಿದ್ದರು. ನಾನೇ ಲೋಕಾಯುಕ್ತರಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದೆ. ತನಿಖೆ ನಡೆಸಿದ ಲೋಕಾಯುಕ್ತರು, ನನ್ನ ಬಳಿ ಇರುವುದು ₹3.5 ಕೋಟಿ ಮೌಲ್ಯದ ಆಸ್ತಿ ಮಾತ್ರ ಎಂಬ ಪ್ರಮಾಣಪತ್ರ ನೀಡಿದ್ದರು. ಅದು ಈಗಲೂ ನನ್ನ ಬಳಿ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.