ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ
ರಾಯಚೂರು: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಣ ಅಕ್ರಮ ವರ್ಗಾವಣೆ ಹಗರಣದಲ್ಲಿ ಹಿಂದೆ ಸಚಿವ ಎನ್.ಎಸ್. ಬೋಸರಾಜು, ನಿಗಮದ ಅಧ್ಯಕ್ಷ ಶಾಸಕರೂ ಆಗಿರುವ ಬಸನಗೌಡ ದದ್ದಲ್ ಅವರ ಕೈವಾಡವಿದ್ದು, ಅವರ ವಿರುದ್ಧವೂ ಎಫ್ ಐಆರ್ ದಾಖಲಿಸಬೇಕು ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ ಒತ್ತಾಯಿಸಿದರು.
ತೆಲಂಗಾಣ ರಾಜ್ಯದ ವಿಧಾನಸಭಾ ಚುನಾವಣೆಗಾಗಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಜೀರೊ ಬ್ಯಾಲೆನ್ಸ್ ಖಾತೆ ತೆರೆದು ₹94 ಕೋಟಿ ಹಣ ವರ್ಗಾವಣೆ ಮಾಡಲಾಗಿದೆ ಎಂದು ಶುಕ್ರವಾರ ಮಾಧ್ಯಮ ಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದರು.
ಶೋಷಿತ ಸಮುದಾಯ ಪರಿಶಿಷ್ಟ ಪಂಗಡದ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ. ಅಕ್ರಮದ ಬಗ್ಗೆ ಸಿಬಿಐಗೆ ದೂರು ನೀಡಲಾಗಿತ್ತು. ಸಚಿವ ನಾಗೇಂದ್ರ ಆಪ್ತ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗದ ಅಧ್ಯಕ್ಷ ಬಸನಗೌಡ ದದ್ದಲ್ ಅವರ ಗಮನಕ್ಕೆ ಬಾರದೇ ಇಷ್ಟು ದೊಡ್ಡ ಮಟ್ಟದ ಹಣ ವರ್ಗಾವಣೆ ನಡೆಯಲು ಅಸಾಧ್ಯ ಎಂದು ಹೇಳಿದರು.
ತೆಲಂಗಾಣದ ಕಾಂಗ್ರೆಸ್ ಉಸ್ತುವಾರಿಯಾಗಿದ್ದ ಸಚಿವ ಎನ್.ಎಸ್. ಬೋಸರಾಜು ಅವರು ಈ ಅಕ್ರಮದ ಹಿಂದೆ ಇದ್ದಾರೆ. ಇಬ್ಬರನ್ನು ಪಕ್ಷದಿಂದ ವಜಾಗೊಳಿಸುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮನವಿ ಸಲ್ಲಿಸಲಾಗುವುದು. ನಿರ್ಲಕ್ಷ್ಯ ವಹಿಸಿದ್ದಲ್ಲಿ ಮೈತ್ರಿ ಪಕ್ಷದಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ಮುಖಂಡರಾದ ಸಣ್ಣ ನರಸಿಂಹ ನಾಯಕ, ರಾಮಕೃಷ್ಣ, ವಕೀಲ ಎನ್.ಶಿವಶಂಕರ, ಹಂಪಯ್ಯ ನಾಯಕ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.