
ಬೆಂಗಳೂರು: ‘ಬೆಂಗಳೂರು–ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಸಂಚಾರ ಶೀಘ್ರ ಆರಂಭವಾಗಲಿದೆ. ಎರಡು ರೈಲುಗಳಿಗೆ ಅನುಮತಿ ನೀಡಲಾಗಿದ್ದು, ಮುಂದಿನ ದಿನಗಳಲ್ಲಿ ಕಾರವಾರದವರೆಗೂ ವಿಸ್ತರಿಸಲಾಗುವುದು’ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಈ ಸಾಲಿನ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ₹7,748 ಕೋಟಿ ಸಿಗಲಿದೆ. ಇದು ಹಿಂದಿನ ಯುಪಿಎ ಅವಧಿಯಲ್ಲಿ ನೀಡಿದ್ದ ಮೊತ್ತಕ್ಕಿಂತ 9 ಪಟ್ಟು ಹೆಚ್ಚು. ಯುಪಿಎ ಅವಧಿಯಲ್ಲಿ ಕರ್ನಾಟಕಕ್ಕೆ ವಾರ್ಷಿಕ ₹800 ಕೋಟಿ ಸಿಗುತ್ತಿತ್ತು ಎಂದು ಅವರು ವಿವರಿಸಿದರು.
ಬೆಂಗಳೂರಿನಿಂದ ಚೆನ್ನೈ ಹಾಗೂ ಹೈದರಾಬಾದ್ ನಗರಗಳಿಗೆ ಹೈಸ್ಪೀಡ್ ರೈಲು ಯೋಜನೆಗಳಿಗೆ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಯೋಜನೆ ಅನುಷ್ಠಾನದ ನಂತರ ಬೆಂಗಳೂರಿನಿಂದ ಚೆನ್ನೈಗೆ 73 ನಿಮಿಷಗಳಲ್ಲಿ ತಲುಪಬಹುದು. ಯಶವಂತಪುರದಿಂದ ಕೋಲಾರಕ್ಕೆ ಮತ್ತೊಂದು ರೈಲು ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಉತ್ಪಾದನೆಗೆ ಆದ್ಯತೆ ನೀಡಬೇಕಿದೆ. 200 ಪರಂಪರಾ ಕೈಗಾರಿಕಾ ಸಮೂಹಗಳ ಪುನರುತ್ಥಾನ ಕಾರ್ಯ ನಡೆಯಬೇಕಿದೆ. ವೆಚ್ಚದ ಮೇಲಿನ ನಿಯಂತ್ರಣ, ಸಮೂಹ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಹೊಂದುವುದು, ನೀರಿನ ಸೌಕರ್ಯ ವೃದ್ಧಿ, ಕಾರ್ಮಿಕರ ಸಮೂಹ ಗೃಹ ವ್ಯವಸ್ಥೆ, ಉತ್ತಮ ರಸ್ತೆ ವ್ಯವಸ್ಥೆಯನ್ನು ಪರಂಪರಾ ಕೈಗಾರಿಕಾ ಸಮೂಹಗಳಲ್ಲಿ ಅಳವಡಿಸಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಪಿ.ಸಿ.ಮೋಹನ್, ಡಾ.ಸಿ.ಎನ್.ಮಂಜುನಾಥ್, ಮಾಜಿ ಸಂಸದ ಮುನಿಸ್ವಾಮಿ ಉಪಸ್ಥಿತರಿದ್ದರು.
ಕೇಂದ್ರ ಬಜೆಟ್‌ನಲ್ಲಿ ರಾಜ್ಯಕ್ಕೆ ಸಿಕ್ಕಿರುವುದು ಚೊಂಬು ಎಂಬ ಸಿ.ಎಂ ಸಿದ್ದರಾಮಯ್ಯ ಹೇಳಿಕೆ ಸರಿಯಲ್ಲ. ಸಂಕುಚಿತ ದೃಷ್ಟಿಕೋನ ಹೊಂದಿರುವವರು ಮಾತ್ರ ಆ ರೀತಿ ವ್ಯಾಖ್ಯಾನಿಸಲು ಸಾಧ್ಯ.– ಅಶ್ವಿನಿ ವೈಷ್ಣವ್, ಕೇಂದ್ರ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.