ಸಾಂದರ್ಭಿಕ ಚಿತ್ರ
ಬೆಂಗಳೂರು: ಗ್ರಾಮ ಆಡಳಿತ ಅಧಿಕಾರಿಗಳ (ವಿಎಒ) ನೇಮಕಾತಿಯಲ್ಲಿ ಜಿಲ್ಲೆಗಳ ನಡುವೆ ಏಕರೀತಿಯ ಮೀಸಲಾತಿ ನಿಯಮ ಅನುಸರಿಸಿಲ್ಲ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾ
ಗಿದೆ ಎಂದು ಪರೀಕ್ಷೆ ಬರೆದಿದ್ದ ಹಲವು ಆಕಾಂಕ್ಷಿಗಳು ದೂರಿದ್ದಾರೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಒಂದು ಸಾವಿರ ವಿಎಒ ಹುದ್ದೆಗಳ ನೇಮಕಾತಿಗೆ ಅ.27 ರಂದು ಲಿಖಿತ ಪರೀಕ್ಷೆ ನಡೆಸಿತ್ತು. 4 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅಂತಿಮ ಫಲಿತಾಂಶದ ಅರ್ಹತಾ ಪಟ್ಟಿಯನ್ನು ಪ್ರಾಧಿಕಾರ ಕಂದಾಯ ಇಲಾಖೆಗೆ ಸಲ್ಲಿಸಿತ್ತು.
ಅಂತಿಮ ಪಟ್ಟಿ ಸಲ್ಲಿಕೆಯಾದ ನಂತರ ಜಿಲ್ಲಾವಾರು ನೇಮಕಾತಿ ಮಾಡುತ್ತಿದ್ದು, ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು 1:3 ಆಧಾರದಲ್ಲಿ ಅರ್ಹತಾ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಎಲ್ಲ ಜಿಲ್ಲೆಗಳೂ ಜಾತಿವಾರು ಮೀಸಲಾತಿಯನ್ನು ಸರಿಯಾಗಿ ಅನ್ವಯಿಸಿವೆ. ಆದರೆ, ಮಹಿಳಾ ಮೀಸಲು, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿ, ನಿರಾಶ್ರಿತರು, ಮಾಜಿ ಸೈನಿಕ ಮೊದಲಾದ ಮೀಸಲು ನಿಯಮವನ್ನು ಕೆಲ ಜಿಲ್ಲೆಗಳು ಕ್ರಮಬದ್ಧವಾಗಿ ಪಾಲಸಿಲ್ಲ ಎನ್ನುವುದು ಅಭ್ಯರ್ಥಿಗಳ ಆರೋಪ.
ನಿಯಮದ ಪ್ರಕಾರ ಅರ್ಹತಾ ಪಟ್ಟಿ ಸಿದ್ಧಪಡಿಸುವಾಗ ಮೊದಲು ಮಹಿಳಾ ಮೀಸಲಾತಿ, ನಂತರ ಕನ್ನಡ ಮಾಧ್ಯಮ ಹಾಗೂ ಕೊನೆಯಲ್ಲಿ ಇತರೆ.. ಕಾಲಂಗಳನ್ನು ಭರ್ತಿ ಮಾಡಿರುವ ಅಭ್ಯರ್ಥಿಗಳನ್ನು ಪರಿಗಣಿಸಬೇಕು. ಶಿವಮೊಗ್ಗ, ಚಿತ್ರದುರ್ಗ, ದಕ್ಷಿಣ ಕನ್ನಡ, ಬಾಗಲಕೋಟೆ ಸೇರಿದಂತೆ ಕೆಲ ಜಿಲ್ಲೆಗಳು ಮಾತ್ರ ಈ ನಿಯಮ ಪಾಲಿಸಿವೆ. ಉಳಿದ ಜಿಲ್ಲೆಗಳು ಪಾಲಿಸಿಲ್ಲ ಎಂದು ಅಭ್ಯರ್ಥಿಗಳಾದ ಸುರೇಶ್, ಲತಾ, ಅರ್ಜುನ್ ದೂರಿದ್ದಾರೆ. ಈ ಕುರಿತು ಸರ್ಕಾರಕ್ಕೆ ಮನವಿ ಮಾಡಿದರೂ ಸ್ಪಂದನೆ ದೊರೆತಿಲ್ಲ. ಇದರಿಂದ ಅರ್ಹ ಹಲವು ಅಭ್ಯರ್ಥಿಗಳು ನೇಮಕಾತಿ ಪಟ್ಟಿಯಿಂದ ಹೊರಗೆ ಉಳಿದಿದ್ದಾರೆ. ತಕ್ಷಣ ಪಟ್ಟಿ ಸರಿಪಡಿಸಲು ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚಿಸಬೇಕು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ, ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರನ್ನು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.