ಹಣ
ಬೆಂಗಳೂರು: ವ್ಯಾಟ್‌ನಿಂದ ಜಿಎಸ್‌ಟಿ ನಡುವಿನ ವ್ಯತ್ಯಾಸದ ತೆರಿಗೆ ಮೊತ್ತ ಸುಮಾರು ₹600 ಕೋಟಿಯನ್ನು ಮಾರ್ಚ್ 31ರೊಳಗೆ ಪಾವತಿಸಬೇಕಾದ ಅನಿವಾರ್ಯ ಸ್ಥಿತಿ ರಾಜ್ಯ ಗುತ್ತಿಗೆದಾರರಿಗೆ ಎದುರಾಗಿದೆ.
ರಾಜ್ಯದಲ್ಲಿ 2019–20ರಿಂದ 2021–22ರ ಅವಧಿಯ ಕಾಮಗಾರಿಗಳಿಗೆ ಶೇ 4ರಷ್ಟು ವ್ಯಾಟ್ (ಮೌಲ್ಯವರ್ಧಿತ ತೆರಿಗೆ) ಅನ್ವಯವಾಗಿತ್ತು. ಈ ಅವಧಿಯಲ್ಲಿ ವ್ಯಾಟ್ ರದ್ದು ಮಾಡಿ, ಶೇ 12ರಷ್ಟು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಜಾರಿ ಮಾಡಲಾಯಿತು. ತದನಂತರ, ಜಿಎಸ್‌ಟಿಯನ್ನು ಶೇ 18ಕ್ಕೆ ಹೆಚ್ಚಿಸಲಾಯಿತು. ಶೇ 12ರಿಂದ ಶೇ 18ಕ್ಕೆ ಹೆಚ್ಚುವರಿಯಾದ ಜಿಎಸ್‌ಟಿ ವ್ಯತ್ಯಾಸದ ಮೊತ್ತವನ್ನು ರಾಜ್ಯ ಸರ್ಕಾರ ಭರಿಸಿದೆ. ಆದರೆ, ವ್ಯಾಟ್ ರದ್ದಾದ ಮೇಲೆ ಶೇ 8ರಷ್ಟು ಹೆಚ್ಚಾದ ಜಿಎಸ್‌ಟಿ ಮೊತ್ತವನ್ನೂ ಇನ್ನೂ ಭರಿಸಿಲ್ಲ.
‘ಕೇಂದ್ರ ಸರ್ಕಾರ ಇತ್ತೀಚೆಗೆ ಗುತ್ತಿಗೆದಾರರಿಗೆ ಅಮ್ನೆಸ್ಟಿ ಯೋಜನೆಯನ್ನು ಜಾರಿ ಮಾಡಿ, ಮಾರ್ಚ್ 31ರೊಳಗೆ ಬಾಕಿ ಉಳಿದಿರುವ ವ್ಯಾಟ್– ಜಿಎಸ್‌ಟಿ ನಡುವಿನ ವ್ಯತ್ಯಾಸ ಮೊತ್ತವನ್ನು ಪಾವತಿಸಲು ಸೂಚಿಸಿದೆ. ಆದರೆ, ಇದನ್ನು ಪಾವತಿಸುವ ಸ್ಥಿತಿಯಲ್ಲಿ ಗುತ್ತಿಗೆದಾರರು ಇಲ್ಲ. ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಂಡು, ‘ಬುಕ್ ಅಡ್ಜೆಸ್ಟ್‌ಮೆಂಟ್’ ಪ್ರಕ್ರಿಯೆ ಪೂರ್ಣಗೊಳಿಸಬೇಕು’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್. ಮಂಜುನಾಥ್ ಆಗ್ರಹಿಸಿದರು.
‘ಹೈಕೋರ್ಟ್‌ನ 2023ರ ಏಪ್ರಿಲ್ 11ರ ಸೂಚನೆಯಂತೆ ವ್ಯಾಟ್– ಜಿಎಸ್‌ಟಿ ನಡುವಿನ ವ್ಯತ್ಯಾಸ ಮೊತ್ತವನ್ನು ಭರಿಸಲು ರಾಜ್ಯ ಸರ್ಕಾರ ಭರವಸೆ ನೀಡಿತ್ತು. ಒಡಿಸ್ಸಾ ಮಾದರಿಯಂತೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದಾಗಿಯೂ ಹೇಳಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಮುಂದೆಯೇ ಹಣಕಾಸು ಇಲಾಖೆ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿದ್ದಾರೆ. ಆದರೆ, ಇದೀಗ ಕೇಂದ್ರದ ಗಡುವು ಸಮೀಪಕ್ಕೆ ಬಂದಿದ್ದು, ಗುತ್ತಿಗೆದಾರರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.