ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ
(ಫೇಸ್‌ಬುಕ್ ಚಿತ್ರ)
ಬೆಂಗಳೂರು: ಜಾತಿವಾರು ಸಮೀಕ್ಷೆ ವೇಳೆ ಲಿಂಗಾಯತ ವೀರಶೈವ ಸಮುದಾಯದ ಯಾರೂ ಧರ್ಮದ ಕಾಲಂನಲ್ಲಿ ಹಿಂದೂ ಎಂದು ನಮೂದಿಸಬಾರದು. ಬದಲಿಗೆ ‘ವೀರಶೈವ ಲಿಂಗಾಯತ’ ಎಂದು ಬರೆಯಿಸಿ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಕರೆ ನೀಡಿದೆ.
ಮಹಾಸಭಾದ ಮಹಾಪ್ರಧಾನ ಕಾರ್ಯದರ್ಶಿ ಈಶ್ವರ ಬಿ.ಖಂಡ್ರೆ ಅವರು, ನಗರದಲ್ಲಿ ಭಾನುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಈ ಕರೆ ನೀಡಿದರು.
ವೀರಶೈವ ಲಿಂಗಾಯತರು ಹಿಂದೂ ಎಂದು ಬರೆಯಿಸಬಾರದೆ ಎಂದು ಸುದ್ದಿಗಾರರ ಪ್ರಶ್ನಿಸಿದಾಗ, ‘ಹೌದು. ಹಾಗೆ ಬರೆಯಿಸಬಾರದು. ಹಿಂದೂ ಸನಾತನ ಧರ್ಮಕ್ಕೂ, ವೀರಶೈವ ಲಿಂಗಾಯತ ಧರ್ಮಕ್ಕೂ ಸಂಬಂಧವಿಲ್ಲ. ಹೀಗಾಗಿ ನಮ್ಮ ಸಮುದಾಯದ ಎಲ್ಲರೂ, ತಾವು ‘ವೀರಶೈವ ಲಿಂಗಾಯತ’ ಧರ್ಮದವರು ಎಂದೇ ಬರೆಯಿಸಬೇಕು’ ಎಂದು ಉತ್ತರಿಸಿದರು.
‘ಇದು ಜಾತಿ ಪ್ರಮಾಣ ಪತ್ರಕ್ಕಾಗಿ ನಡೆಸುತ್ತಿರುವ ಸಮೀಕ್ಷೆ ಅಲ್ಲ. ಬದಲಿಗೆ ರಾಜ್ಯದ ಜನರ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯ ಬಗ್ಗೆ ಅರಿತುಕೊಳ್ಳಲು ಮತ್ತು ಅದರ ಆಧಾರದಲ್ಲಿ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು ನಡೆಸುತ್ತಿರುವ ಸಮೀಕ್ಷೆ. ಹೀಗಾಗಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲರೂ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಭಾಗಿಯಾಗಬೇಕು’ ಎಂದರು.
‘ಸಮೀಕ್ಷೆಯಲ್ಲಿ ಭಾಗವಹಿಸುವಾಗ ಬಹಳ ಎಚ್ಚರಿಕೆಯಿಂದ ವಿವರ ನೀಡಬೇಕು. ಜಾತಿಯ ಕಾಲಂನಲ್ಲಿ ಉಪ ಜಾತಿಯ ಹೆಸರು ಬರೆಯಿಸಬಾರದು. ಬದಲಿಗೆ ‘ಲಿಂಗಾಯತ’ ಅಥವಾ ‘ವೀರಶೈವ’ ಅಥವಾ ‘ವೀರಶೈವ ಲಿಂಗಾಯತ’ ಎಂದು ಬರೆಯಿಸಬೇಕು. ಉಪಜಾತಿ ಕಾಲಂನಲ್ಲಿ ತಮ್ಮ ಉಪಜಾತಿಗಳ ಸರಿಯಾದ ಹೆಸರನ್ನು ಬರೆಯಿಸಬೇಕು. ಗಣತಿದಾರರು ಸರಿಯಾಗಿ ಮಾಹಿತಿ ದಾಖಲಿಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.