ADVERTISEMENT

ಕೊತಂಬರಿ ಬೆಲೆ ಕ್ವಿಂಟಲ್‌ಗೆ ₹ 2 ಸಾವಿರ ಹೆಚ್ಚಳ

ಬದನೆ, ಹಿರೇಕಾಯಿ, ಸಬ್ಬಸಗಿ ಬೆಲೆ ಸ್ಥಿರ; ರೈತರ ಕೈಗೆ ಸಿಗದ ಉತ್ತಮ ಬೆಲೆ

ಚಂದ್ರಕಾಂತ ಮಸಾನಿ
Published 12 ಜನವರಿ 2019, 6:30 IST
Last Updated 12 ಜನವರಿ 2019, 6:30 IST
ಬೀದರ್‌ನಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ
ಬೀದರ್‌ನಲ್ಲಿ ಮಾರಾಟಕ್ಕೆ ಇಡಲಾದ ತರಕಾರಿ   

ಬೀದರ್‌: ಜಿಲ್ಲೆಯಲ್ಲಿ ನಿಧಾನವಾಗಿ ಚಳಿ ಕಡಿಮೆಯಾಗುತ್ತಿದೆ. ಅಷ್ಟೇ ನಿಧಾನವಾಗಿ ತರಕಾರಿ ಬೆಲೆ ಏರುತ್ತಿದೆ. ಒಂದು ವಾರದಲ್ಲಿ ವಿವಿಧ ಬಗೆಯ ತರಕಾರಿ ಬೆಲೆ ಕ್ವಿಂಟಲ್‌ಗೆ ಕನಿಷ್ಠ ₹ 500 ರಿಂದ ₹ 2 ಸಾವಿರ ವರೆಗೂ ಹೆಚ್ಚಾಗಿದೆ. ಸಂಕ್ರಮಣ ಹಬ್ಬದ ಸಂದರ್ಭದಲ್ಲಿ ತರಕಾರಿ ಬೆಲೆ ಹೆಚ್ಚಳವಾಗಿರುವುದು ಗ್ರಾಹಕರನ್ನು ಆತಂಕಕ್ಕೆ ಒಳಗಾಗುವಂತೆ ಮಾಡಿದೆ.

ಕೊತ್ತಂಬರಿ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 1,500 ರಿಂದ ₹ 2 ಸಾವಿರ, ಬೆಳ್ಳೊಳ್ಳಿ ಹಾಗೂ ಟೊಮೆಟೊ ₹ 1,000, ಆಲೂಗಡ್ಡೆ ₹ 800, ಈರುಳ್ಳಿ, ಮೆಂತೆ ಸೊಪ್ಪು, ಗಜ್ಜರಿ ₹ 500 ಹಾಗೂ ಬೆಂಡೆಕಾಯಿ ₹ 200 ವರೆಗೆ ಏರಿಕೆಯಾಗಿದೆ.

ಬೆಂಗಳೂರಲ್ಲಿ ಟೊಮೆಟೊ ಪ್ರತಿ ಕೆ.ಜಿಗೆ ₹ 150ಕ್ಕೆ ಮಾರಾಟವಾಗುತ್ತಿರುವ ಸುದ್ದಿ ಕೇಳಿ ಗ್ರಾಹಕರು ಗಾಬರಿಪಟ್ಟುಕೊಂಡಿದ್ದರು. ಆದರೆ, ಇಲ್ಲಿಯ ಚಿಲ್ಲರೆ ಮಾರುಕಟ್ಟೆಯಲ್ಲಿ ₹ 10 ರಿಂದ ₹ 15ಕ್ಕೆ ಮಾರಾಟವಾಗುತ್ತಿದೆ. ಜಿಲ್ಲೆಯ ಕೆಲ ಗ್ರಾಮಗಳಲ್ಲಿ ಟೊಮೆಟೊ ಲಭ್ಯವಿದ್ದರೂ ರೈತರ ಕೈಗೆ ಉತ್ತಮ ಬೆಲೆ ದೊರೆಯುತ್ತಿಲ್ಲ. ಖಾನಾವಳಿ, ಹೋಟೆಲ್‌ ಹಾಗೂ ಡಾಬಾ ಮಾಲೀಕರಿಗೆ ಅನುಕೂಲವಾಗಿ ಪರಿಣಮಿಸಿದೆ.

ADVERTISEMENT

‘ಕರಿಬೇವು, ಸಬ್ಬಸಗಿ ಸೊಪ್ಪು ಹಾಗೂ ಹಿರೇಕಾಯಿ ಬೆಲೆ ಸ್ಥಿರವಾಗಿದೆ. ಹೂಕೋಸು, ಬಿಟ್‌ರೂಟ್‌ ಹಾಗೂ ಬೆಂಡೆಕಾಯಿ ಬೆಲೆ ಮಾತ್ರ ಕಡಿಮೆಯಾಗಿದೆ’ ಎಂದು ಭಾರತ ವೆಜಿಟೆಬಲ್‌ ಶಾಪ್‌ನ ಮಾಲೀಕ ಅಬ್ದುಲ್‌ ಗಣಿ ಹೇಳುತ್ತಾರೆ.

‘ಸಂಕ್ರಮಣದ ನಂತರ ಸಹಜವಾಗಿ ಬಿಸಿಲು ಹೆಚ್ಚಾಗಲಿದೆ. ಮೊದಲೇ ಈ ಬಾರಿ ಮುಂಗಾರು ಹಾಗೂ ಹಿಂಗಾರಿನಲ್ಲಿ ಮಳೆ ಸರಿಯಾಗಿ ಸುರಿದಿಲ್ಲ. ನೀರಾವರಿ ಸೌಲಭ್ಯವಿರುವ ಪ್ರದೇಶಗಳಿಂದ ಮಾತ್ರ ಮಾರುಕಟ್ಟೆಗೆ ತರಕಾರಿ ಬರುತ್ತಿದೆ. ಬರುವ ದಿನಗಳಲ್ಲಿ ತರಕಾರಿ ಬೆಲೆಯೂ ಹೆಚ್ಚಳವಾಗಲಿದೆ’ ಎನ್ನುತ್ತಾರೆ ಅವರು.

ಸೋಲಾಪುರದ ಈರುಳ್ಳಿ, ಗಜ್ಜರಿ ಹಾಗೂ ಹಿರೇಕಾಯಿ, ಶಹಾಪುರದ ಮೆಣಸಿನಕಾಯಿ, ವಲ್ಲೋರದ ಮೆಂತೆ, ಹೈದರಾಬಾದ್‌ನ ಬೀನ್ಸ್, ಬಿಟ್‌ರೂಟ್, ತೊಂಡೆಕಾಯಿ ಹಾಗೂ ಟೊಮೆಟೊ ಬೀದರ್‌ ಸಗಟು ತರಕಾರಿ ಮಾರುಕಟ್ಟೆಗೆ ಆವಕವಾಗಿದೆ.

ಬೀದರ್, ಚಿಟಗುಪ್ಪ ಹಾಗೂ ಭಾಲ್ಕಿಯಿಂದ ಕೊತ್ತಂಬರಿ, ಕರಿಬೇವು ಸಬ್ಬಸಗಿ, ಹೂಕೋಸು, ಎಲೆಕೋಸು ಹಾಗೂ ಬದನೆಕಾಯಿ ಬಂದಿವೆ.

**

ಬೀದರ್‌ ತರಕಾರಿ ಸಗಟು ಮಾರುಕಟ್ಟೆ
ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಈರುಳ್ಳಿ 800-1,000 1,000-1,500
ಮೆಣಸಿನಕಾಯಿ 2,000-2,500 2,500-3,000
ಆಲೂಗಡ್ಡೆ 1,000-1,200 1,500-2,000
ಎಲೆಕೋಸು 1,000-1,200 1,500-2,000
ಬೆಳ್ಳೂಳ್ಳಿ 2,000-2,500 3,000-3,500
ಗಜ್ಜರಿ 2,000-2,500 2,500-3,000
ಬೀನ್ಸ್‌ 3,000-3,500 3,000-3,500
ಬದನೆಕಾಯಿ 3,000-3,500 3,000-3,500
ಮೆಂತೆ ಸೊಪ್ಪು 2,000-2,500 3,000-3,500
ಹೂಕೋಸು 3,000-3,500 2,500-3,000
ಸಬ್ಬಸಗಿ 2,000-2,500 2,000-2,500
ಬಿಟ್‌ರೂಟ್‌ 3,000-3,500 3,500-4,000
ಕರಿಬೇವು 4,000-4,500 4,000-4,500
ಕೊತಂಬರಿ 5,000-6,000 3,500-4,000
ಟೊಮೆಟೊ 1,200-1,500 2,000-2,500
ತೊಂಡೆಕಾಯಿ 4,000-4,200 3,500-4,000
ಬೆಂಡೆಕಾಯಿ 3,500-4,000 3,000-3,500
ಹಿರೇಕಾಯಿ 3,500-4,000 3,500-4,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.