ADVERTISEMENT

ಹಳೇ ವಾಹನಗಳಿಗೆ ಹಸಿರು ತೆರಿಗೆಯ ಹೊರೆ: ಪ್ರತಿವರ್ಷ ಎಫ್‌.ಸಿ ಕಡ್ಡಾಯ

15 ವರ್ಷ ಮೀರಿದ ವಾಹನ ಚಾಲನೆಗೆ

ವಿಜಯಕುಮಾರ್ ಎಸ್.ಕೆ.
Published 24 ಡಿಸೆಂಬರ್ 2021, 19:31 IST
Last Updated 24 ಡಿಸೆಂಬರ್ 2021, 19:31 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಾಹನಗಳ ಗುಜರಿ ನೀತಿ ಪ್ರಕಾರ 15 ವರ್ಷ ಮೀರಿದ ಎಲ್ಲಾ ವಾಹನಗಳನ್ನು ಗುಜರಿಗೆ ಹಾಕಬೇಕಿಲ್ಲ. ಆದರೆ, ಅವುಗಳ ಬಳಕೆ ಮುಂದುವರಿಸಬೇಕಿದ್ದರೆ ಹಸಿರು ತೆರಿಗೆಯ ಹೊರೆಯ ಭಾರವನ್ನು ವಾಹನಗಳ ಮಾಲೀಕರು ಪ್ರತಿವರ್ಷ ಹೊರಬೇಕಾಗುತ್ತದೆ.

15 ವರ್ಷ ಹಳೆಯದಾದ ವಾಹನಗಳು ಅಥವಾ ಚಾಲನೆಗೆ ಯೋಗ್ಯವಿಲ್ಲದ 15 ವರ್ಷದೊಳಗಿನ ವಾಹನಗಳನ್ನು ಸ್ವಯಂಪ್ರೇರಿತವಾಗಿ ಗುಜರಿಗೆ ಹಾಕಲು ಈ ನೀತಿಯಲ್ಲಿ ಅವಕಾಶ ಕಲ್ಪಿಸಲಾಗುತ್ತಿದೆ. ವಾಹನಗಳ ಮಾಲೀಕರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದರೆ, ಅವುಗಳನ್ನು ಯೋಗ್ಯತಾ ಪರೀಕ್ಷೆಗೆ ಒಳಪಡಿಸಿ ಗುಜರಿಗೆ ಹಾಕಲು ಅನುಮತಿ ನೀಡಲಾಗುತ್ತದೆ. ಹೀಗೆ ಗುಜರಿಗೆ ಹಾಕುವ ಮಾಲೀಕರಿಗೆ ಪ್ರಮಾಣಪತ್ರವನ್ನೂ ಸಾರಿಗೆ ಇಲಾಖೆ ನೀಡುತ್ತದೆ.

ಹೀಗೆ ಸ್ವಯಂಪ್ರೇರಿತವಾಗಿ ವಾಹನವನ್ನು ಗುಜರಿಗೆ ಹಾಕುವವರಿಗೆ ಮೂರು ರೀತಿಯ ಅನುಕೂಲಗಳನ್ನು ಸಾರಿಗೆ ಇಲಾಖೆ ಕಲ್ಪಿಸಲಿದೆ. ಪ್ರಮಾಣಪತ್ರ ಪಡೆದವರಿಗೆ ಹೊಸದಾಗಿ ವಾಹನ ಖರೀದಿಸುವಾಗ ಜಿಎಸ್‌ಟಿಯಲ್ಲಿ ಶೇ 3ರಿಂದ ಶೇ5ರಷ್ಟು ವಿನಾಯಿತಿ ಸಿಗಲಿದೆ. ಗುಜರಿಗೆ ಹಾಕಿದ ವಾಹನದ ತೂಕಕ್ಕೆ ತಕ್ಕಷ್ಟು ಹಣವೂ ಪಾವತಿಯಾಗುತ್ತದೆ. ಅಲ್ಲದೇ, ಆದಾಯ ತೆರಿಗೆ ಪಾವತಿಯಲ್ಲೂ ಅವರಿಗೆ ಕೆಲ ವಿನಾಯಿತಿಗಳು ದೊರಕಲಿವೆ. ‌

ADVERTISEMENT

ಕಡ್ಡಾಯವಲ್ಲ: 15 ವರ್ಷ ಮೀರಿದ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವಲ್ಲ. ಚಾಲನೆ ಮಾಡಲು ಮಾಲೀಕರು ಬಯಸಿದರೆ ವರ್ಷಕ್ಕೊಮ್ಮೆ ಯೋಗ್ಯತಾ ಪರೀಕ್ಷೆ ಮಾಡಿಸಿಕೊಂಡು ಪ್ರಮಾಣಪತ್ರ (ಎಫ್‌.ಸಿ) ಪಡೆಯಬೇಕಾಗುತ್ತದೆ (ಈ ಹಿಂದೆ 5 ವರ್ಷಕ್ಕೊಮ್ಮೆ ಎಫ್‌.ಸಿ ಪಡೆಯಲು ಅವಕಾಶ ಇತ್ತು).ರಸ್ತೆಯಲ್ಲಿ ಸಂಚರಿಸಲು ವಾಹನ ಯೋಗ್ಯವಾಗಿದ್ದರೂ ಎಫ್‌.ಸಿಗೆ ನಿಗದಿಪಡಿಸಿರುವ ಸಾಮಾನ್ಯ ಶುಲ್ಕದ ಜೊತೆಗೆ ಹೆಚ್ಚುವರಿಯಾಗಿ ಹಸಿರು ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ.

ವಾಹನಗಳಿಗೆ ₹500 ರಿಂದ ₹2,500ರಷ್ಟು ಹಸಿರು ತೆರಿಗೆ ನಿಗದಿಪಡಿಸಲಾಗಿದೆ. ರಾಜ್ಯದಲ್ಲಿರುವ 2.50 ಕೋಟಿ ವಾಹನಗಳಲ್ಲಿ 15 ವರ್ಷ ಮೀರಿದ 40 ಲಕ್ಷಕ್ಕೂ ಹೆಚ್ಚು ವಾಹನಗಳಿವೆ. ಅವುಗಳನ್ನು ಗುಜರಿಗೆ ಹಾಕುವ ಆಸಕ್ತಿ ಮಾಲೀಕರಿಗೆ ಇಲ್ಲ ಎಂದಾದರೆ ಪ್ರತಿವರ್ಷ ಹಸಿರು ತೆರಿಗೆ ಪಾವತಿಸುವುದು ಅನಿವಾರ್ಯ.

ಈ ಹಸಿರು ತೆರಿಗೆಯಿಂದಲೇ ಸರ್ಕಾರಕ್ಕೆ ಸಾಕಷ್ಟು ವರಮಾನ ಬರಲಿದೆ. ಹೀಗೆ ಬರುವ ವರಮಾನವನ್ನು ಪರಿಸರ ಸಮತೋಲನ ಕಾಪಾಡುವ ಕಾರ್ಯಕ್ರಮಗಳಿಗೆ ಬಳಸಬೇಕು ಎಂದು ಹಸಿರು ನ್ಯಾಯಪೀಠ ಆದೇಶ ನೀಡಿದೆ ಎನ್ನುತ್ತಾರೆ ಸಾರಿಗೆ ಇಲಾಖೆ ಅಧಿಕಾರಿಗಳು.

ಹಸಿರು ತೆರಿಗೆ ಹೆಚ್ಚಿಸಲು ಸಲಹೆ
15 ವರ್ಷ ಮೀರಿದ ವಾಹನಗಳನ್ನು ಗುಜರಿಗೆ ಒಪ್ಪಿಸಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವವರಿಗೆ ₹1 ಲಕ್ಷ ಸಹಾಯಧನ ನೀಡಬೇಕು ಎಂಬ ಪ್ರಸ್ತಾವನೆಯನ್ನೂ ರಾಜ್ಯ ಸರ್ಕಾರವುಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ಸದ್ಯ ಪ್ರಸ್ತಾಪಿಸಿರುವ ಹಸಿರು ತೆರಿಗೆಯನ್ನು ಕನಿಷ್ಠ ₹5 ಸಾವಿರದಿಂದ ₹6 ಸಾವಿರದ ತನಕ ಹೆಚ್ಚಿಸಬೇಕು ಎಂದೂ ಸಲಹೆ ನೀಡಿದೆ.

‘ಗುಜರಿ ನೀತಿ ಜಾರಿಯಿಂದ ಪರಿಸರ ಮಾಲಿನ್ಯ ಕಡಿಮೆಯಾಗಲಿದೆ. ಸಹಾಯಧನ ದೊರೆತರೆ ಎಲೆಕ್ಟ್ರಿಕ್ ವಾಹನಗಳತ್ತ ಜನ ಆಕರ್ಷಿತರಾಗಲಿದ್ದಾರೆ’ ಎಂದು ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಶಿವರಾಜ ಪಾಟೀಲ ಹೇಳಿದರು.

ಎರಡು ವರ್ಷ ವಿನಾಯಿತಿಗೆ ಮನವಿ
‘15 ವರ್ಷ ಹಳೆಯದಾದ ವಾಹನಗಳನ್ನು ಬಳಸಬೇಕಿದ್ದರೆ ಹಸಿರು ತೆರಿಗೆ ಪಾವತಿಸಬೇಕಾಗುತ್ತದೆ. ಕೋವಿಡ್‌ ಕಾರಣದಿಂದ ಎರಡು ವರ್ಷಗಳ ವಿನಾಯಿತಿ ನೀಡಬೇಕು’ ಎಂದು ಕರ್ನಾಟಕ ರಾಜ್ಯ ಟ್ರಾವೆಲ್ಸ್‌ ಮಾಲೀಕರ ಸಂಘದ ಅಧ್ಯಕ್ಷ ಕೆ. ರಾಧಾಕೃಷ್ಣ ಹೊಳ್ಳ ಒತ್ತಾಯಿಸಿದರು.

‘ಕೋವಿಡ್‌ ಕಾರಣದಿಂದ ಎರಡು ವರ್ಷಗಳಿಂದ ಕೆಲ ವಾಹನಗಳು ರಸ್ತೆಗೇ ಇಳಿದಿ‌ಲ್ಲ. ಅವುಗಳನ್ನು ಬಳಸಲು ಹಸಿರು ತೆರಿಗೆ ಪಾವತಿಸಬೇಕೆಂದರೆ ವಾಹನಗಳ ಮಾಲೀಕರಿಗೆ ಹೊರೆಯಾಗಲಿದೆ. ಈ ಬೇಡಿಕೆ ಪರಿಗಣಿಸಲು ಒತ್ತಾಯಿಸಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ತಿಳಿಸಿದರು.

ಹಸಿರು ತೆರಿಗೆ: ಯಾವುದಕ್ಕೆ–ಎಷ್ಟು?

* ದ್ವಿಚಕ್ರ ವಾಹನಕ್ಕೆ ಪ್ರತಿವರ್ಷ ‌ಎಫ್‌.ಸಿ ಶುಲ್ಕದ ಜೊತೆಗೆ ₹500

* ಲಘು ವಾಹನಗಳಿಗೆ ಪ್ರತಿವರ್ಷಎಫ್‌.ಸಿ ಶುಲ್ಕದ ಜೊತೆಗೆ ₹1 ಸಾವಿರ

* ಸರಕು ಸಾಗಣೆ ಮತ್ತು ಭಾರಿ ವಾಹನಗಳಿಗೆ ಪ್ರತಿವರ್ಷಎಫ್‌.ಸಿ ಶುಲ್ಕದ ಜೊತೆಗೆ ₹2,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.