ADVERTISEMENT

ಎಂಎಸ್‌ಪಿ ಲೋಪ ಸರಿಪಡಿಸಿ: ವೆಂಕಟರಾವ್‌ ನಾಡಗೌಡ ಒತ್ತಾಯ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 15:51 IST
Last Updated 18 ಮಾರ್ಚ್ 2022, 15:51 IST
ವೆಂಕಟರಾವ್‌ ನಾಡಗೌಡ
ವೆಂಕಟರಾವ್‌ ನಾಡಗೌಡ   

ಬೆಂಗಳೂರು: ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆ ಅಡಿಯಲ್ಲಿ ರೈತರಿಂದ ಆಹಾರ ಧಾನ್ಯ ಖರೀದಿಗೆ ಕೇಂದ್ರ ಸರ್ಕಾರ ಮಿತಿ ಹಾಕಿಲ್ಲ. ರಾಜ್ಯ ಸರ್ಕಾರವೇ ಮಿತಿ ವಿಧಿಸಿರುವುದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಆರೋಪಿಸಿದರು.

ವಿಧಾನಸಭೆಯಲ್ಲಿ ಶುಕ್ರವಾರ ಇಲಾಖಾವಾರು ಬೇಡಿಕೆಗಳ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ‘ನೆರೆಯ ರಾಜ್ಯಗಳಲ್ಲಿ ನವೆಂಬರ್‌– ಡಿಸೆಂಬರ್‌ ತಿಂಗಳಲ್ಲೇ ಎಂಎಸ್‌ಪಿ ಯೋಜನೆಯಡಿ ಖರೀದಿ ಆರಂಭವಾಗುತ್ತದೆ. ಆದರೆ, ನಮ್ಮ ರಾಜ್ಯದಲ್ಲಿ ಜನವರಿ ಬಳಿಕ ಖರೀದಿ ಆರಂಭಿಸಲಾಗುತ್ತಿದೆ. ಇದರಿಂದ ರೈತರು ಕಣದಲ್ಲೇ ತಮ್ಮ ಉತ್ಪನ್ನಗಳನ್ನು ಕಡಿಮೆ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಈ ಲೋಪ ಸರಿಪಡಿಸಬೇಕು’ ಎಂದು ಆಗ್ರಹಿಸಿದರು.

ಕೇಂದ್ರ ಸರ್ಕಾರ ಎಂಎಸ್‌ಪಿ ಅಡಿ ಖರೀದಿಗೆ ಮಿತಿಯನ್ನೇ ಹಾಕಿಲ್ಲ. ಆದರೆ, ರಾಜ್ಯ ಸರ್ಕಾರ ಹಣವಿದ್ದರೂ ಖರೀದಿಸುತ್ತಿಲ್ಲ. ಎಂಎಸ್‌ಪಿ ಯೋಜನೆಯಡಿ ರೈತರ ಉತ್ಪನ್ನಗಳಿಗೆ ಗೌರವಯುತ ದರವನ್ನೂ ನಿಗದಿ ಮಾಡುತ್ತಿಲ್ಲ ಎಂದರು.

ADVERTISEMENT

‘ಕೇವಲ ಮಾತಿನಿಂದ ರೈತರ ಆದಾಯ ದ್ವಿಗುಣಗೊಳ್ಳುವುದಿಲ್ಲ. ರೈತರ ಕುಟುಂಬಗಳ ಮತಗಳ ಮೇಲೆ ಕಣ್ಣಿಟ್ಟು ಯೋಜನೆ ಮಾಡಿದರೆ ಕೃಷಿಕರ ಉದ್ಧಾರ ಆಗುವುದಿಲ್ಲ. ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿರುವ ಡೀಸೆಲ್‌ ಸಬ್ಸಿಡಿ ಯೋಜನೆಯೂ ಅಂತಹದ್ದೇ’ ಎಂದು ವಾಗ್ದಾಳಿ ನಡೆಸಿದರು.

ಎಣ್ಣೆ ಕಾಳುಗಳ ಬೆಳೆಯನ್ನು ಸರ್ಕಾರ ಪ್ರೋತ್ಸಾಹಿಸಬೇಕು. ಖಾಸಗಿ ಜಮೀನುಗಳ ಕೆರೆಗಳ ಅಭಿವೃದ್ಧಿಗೆ ಅನುದಾನ ನೀಡಬೇಕು. ಕೋಳಿ ಸಾಕಣೆಯನ್ನೂ ಕೃಷಿ ವ್ಯಾಪ್ತಿಗೆ ತರಬೇಕು. ಅಂತರರಾಷ್ಟ್ರೀಯ ಮಟ್ಟದ ಕುಕ್ಕುಟ ಉದ್ಯಮ ಕಂಪನಿಗಳ ಹಿಡಿತದಿಂದ ರಾಜ್ಯದ ಕೋಳಿ ಸಾಕಣೆದಾರರನ್ನು ಹೊರತರಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

‘ನೇಕಾರರಿಗೆ ನೆರವು ನೀಡಿ’: ಬಿಜೆಪಿಯ ಸಿದ್ದು ಸವದಿ ಮಾತನಾಡಿ, ‘ನೇಕಾರರು ಸಂಕಷ್ಟದಲ್ಲಿದ್ದಾರೆ. ಅವರಿಗೆ ಹೆಚ್ಚಿನ ಆರ್ಥಿಕ ನೆರವು ನೀಡಬೇಕು. ನೇಕಾರ ಕುಟುಂಬಗಳು ಪಡೆದಿರುವ ನಗದು ಸಾಲ ₹ 7 ಕೋಟಿ ಇದ್ದು, ಅದನ್ನು ಮನ್ನಾ ಮಾಡಲು ಸರ್ಕಾರ ಹಿಂದೇಟು ಹಾಕುತ್ತಿರುವುದು ಸರಿಯಲ್ಲ’ ಎಂದರು.

ಬಿಪಿಎಲ್‌ ಪಡಿತರ ಚೀಟಿಗಳನ್ನು ರದ್ದು ಮಾಡಿರು ನಿರ್ಧಾರವನ್ನೂ ವಾಪಸ್‌ ಪಡೆಯಬೇಕು. ವಸತಿ ಯೋಜನೆಗಳ ಅನುಷ್ಠಾನದಲ್ಲಿ ಅಧಿಕಾರಿಗಳು ಅಕ್ರಮ ಎಸಗುತ್ತಿದ್ದಾರೆ. ಅನರ್ಹರಿಗೆ ಮನೆಗಳನ್ನು ಮಂಜೂರು ಮಾಡುತ್ತಿದ್ದಾರೆ. ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕೃಷಿ ಕಾಯ್ದೆಗಳ ತಿದ್ದುಪಡಿ ವಾಪಸ್‌ಗೆ ಆಗ್ರಹ
ಜೆಡಿಎಸ್‌ನ ವೆಂಕಟರಾವ್‌ ನಾಡಗೌಡ ಅವರು ಕನಿಷ್ಠ ಬೆಂಬಲ ಬೆಲೆ ಯೋಜನೆ ಕುರಿತು ಮಾತನಾಡುವಾಗ ಮಧ್ಯ ಪ್ರವೇಶಿಸಿದ ಬಿಜೆಪಿ ಬಿ.ಎಸ್‌. ಯಡಿಯೂರಪ್ಪ, ‘ನಮ್ಮ ಸರ್ಕಾರ ರೈತರಿಗಾಗಿ ಏನೂ ಮಾಡಿಲ್ಲ ಎಂಬುದು ಸರಿಯಲ್ಲ. ನಾವೂ ಸಾಕಷ್ಟು ಕೆಲಸ ಮಾಡಿದ್ದೇವೆ’ ಎಂದರು.

ಆಗ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ, ‘ಯಡಿಯೂರಪ್ಪ ಅವರ ಮಾತು ಮತ್ತು ಕೃತಿ ಒಂದೇ ತೆರನಾಗಿಲ್ಲ. ಅವರ ಕಾಲದಲ್ಲೇ ಕೃಷಿ ಸಂಬಂಧಿ ಕಾನೂನುಗಳಿಗೆ ಮೂರು ಕರಾಳ ತಿದ್ದುಪಡಿ ತರಲಾಗಿದೆ. ಅದರಿಂದಲೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಪರ ಇದ್ದರೆ ಆ ಕಾನೂನುಗಳ ತಿದ್ದುಪಡಿ ವಾಪಸ್‌ ಪಡೆಯಿರಿ’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.