ADVERTISEMENT

ಪರಿಷತ್‌ ಚುನಾವಣೆ: ಅಖಾಡ ಸಿದ್ಧಪಡಿಸಲು ‘ಕೈ’ ನಾಯಕರ ಸಭೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2021, 6:47 IST
Last Updated 4 ಸೆಪ್ಟೆಂಬರ್ 2021, 6:47 IST
ಡಿ.ಕೆ. ಶಿವಕುಮಾರ್ ಮತ್ತು  ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ
ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ   

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ನಾಲ್ಕು ತಿಂಗಳ ಬಳಿಕ ಖಾಲಿಯಾಗಲಿರುವ ಒಟ್ಟು 29 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಸಲು ಮುಂದಾಗಿರುವ ಕಾಂಗ್ರೆಸ್‌, ಕೆಪಿಸಿಸಿ ಕಚೇರಿಯಲ್ಲಿ ಶನಿವಾರ (ಸೆ. 4) ಮತ್ತು ಭಾನುವಾರ (ಸೆ. 5) ಮಹತ್ವದ ಸಭೆ ಹಮ್ಮಿಕೊಂಡಿದೆ.

ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ 25 ಸದಸ್ಯರ ಸ್ಥಾನಗಳು ಮುಂದಿನ ವರ್ಷ ಜನವರಿಯಲ್ಲಿ ಹಾಗೂ ಶಿಕ್ಷಕರ ಹಾಗೂ ಪದವಿಧರರ ಕ್ಷೇತ್ರಗಳ ನಾಲ್ಕು ಸ್ಥಾನಗಳು ಮುಂದಿನ ವರ್ಷ ಜುಲೈನಲ್ಲಿ ಖಾಲಿ ಆಗಲಿವೆ. ಈ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಗೆ ಅಖಾಡ ಸಿದ್ಧಪಡಿಸಲು ಜಿಲ್ಲಾವಾರು ಕಾಂಗ್ರೆಸ್ ಶಾಸಕರು, ಮಾಜಿ ಶಾಸಕರು, ಮಾಜಿ ಸಚಿವರು, ಮಾಜಿ ಸಂಸದರು ಸೇರಿದಂತೆ ಪ್ರಮುಖ ನಾಯಕರ ಜೊತೆ ಸಭೆ ಆಯೋಜಿಸಲಾಗಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ ಸಭೆ ಆರಂಭಗೊಂಡಿದ್ದು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ನಾಯಕರ ಜೊತೆ ಮೊದಲು ಚರ್ಚೆ ನಡೆಸಿದರು. ಸಭೆಯಲ್ಲಿ ಬಿ.ಕೆ. ಹರಿಪ್ರಸಾದ್, ಪ್ರಮೋದ್ ಮಧ್ವರಾಜ್, ಯು.ಟಿ‌. ಖಾದರ್, ಶಕುಂತಲಾ ಶೆಟ್ಟಿ, ಐವಾನ್ ಡಿಸೋಜಾ, ಅಭಯಚಂದ್ರ ಜೈನ್ ಸೇರಿದಂತೆ ಪ್ರಮುಖರು ಭಾಗವಹಿಸಿದರು.

ADVERTISEMENT

ಖಾಲಿ ಆಗಲಿರುವ ಸ್ಥಾನಗಳು ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ, ಚಿಕ್ಕಮಗಳೂರು, ಕೊಡಗು,ಮೈಸೂರು,ಮಂಡ್ಯ, ಹಾಸನ, ಕೋಲಾರ ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ತುಮಕೂರು, ಶಿವಮೊಗ್ಗ, ರಾಯಚೂರು, ಬಳ್ಳಾರಿ, ಬೆಳಗಾವಿ, ಧಾರವಾಡ ಉತ್ತರ ಕನ್ನಡ, ವಿಜಯಪುರ ಜಿಲ್ಲಾ ವ್ಯಾಪ್ತಿಯಲ್ಲಿವೆ. ಹೀಗಾಗಿ ಈ ಜಿಲ್ಲೆಗಳ ನಾಯಕರ ಜೊತೆ ಪ್ರತ್ಯೇಕ, ಪ್ರತ್ಯೇಕವಾಗಿ ಸಭೆ ನಡೆಯಲಿದೆ. ಚುನಾವಣೆ ಇನ್ನೂ 4–5 ತಿಂಗಳು ಬಾಕಿ ಇರುವಾಗಲೇ ಅಖಾಡ ಸಿದ್ಧಗೊಳಿಸುವುದು ಕೈ ನಾಯಕರ ಲೆಕ್ಕಾಚಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.