ADVERTISEMENT

ಬಿಜೆಪಿ–ಜೆಡಿಎಸ್‌ ಒಳ ಒಪ್ಪಂದ: ಸಿದ್ದರಾಮಯ್ಯ

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 20:00 IST
Last Updated 24 ನವೆಂಬರ್ 2021, 20:00 IST
ಸಿದ್ದರಾಮಯ್ಯ
ಸಿದ್ದರಾಮಯ್ಯ    

ಕೋಲಾರ: ‘ವಿಧಾನ ಪರಿಷತ್‌ ಚುನಾವಣೆಗೆ ಜೆಡಿಎಸ್‍ನ ಬೆಂಬಲ ಕೇಳುತ್ತೇವೆ. ಅವರು ಬೆಂಬಲಿಸುವ ವಿಶ್ವಾಸವಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಜೆಡಿಎಸ್‌ನವರ ಜತೆ ಮಾತನಾಡದೆ ಹೇಳಿದ್ದಾರಾ. ಮೈತ್ರಿ ಬಗ್ಗೆ ಯಾವುದೇ ಮಾತುಕತೆ ಆಗಿಲ್ಲ ಎಂದು ಕುಮಾರಸ್ವಾಮಿ ಹೇಳಿರುವುದಕ್ಕೆ ಏನು ಹೇಳಬೇಕು, ಬೆಂಕಿ ಇಲ್ಲದೆ ಹೊಗೆಯಾಡುತ್ತಾ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜ್ಯ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ, ಜೆಡಿಎಸ್ 7 ಕಡೆ ಮಾತ್ರ ಅಭ್ಯರ್ಥಿಗಳನ್ನು ಹಾಕಿದೆ. ಆ ಕ್ಷೇತ್ರಗಳಲ್ಲೂ ಹೊಂದಾಣಿಕೆ ಆಗಿದೆ. ಉಳಿದ 18 ಕಡೆ ಜೆಡಿಎಸ್‌ನವರು ಏನು ಮಾಡುತ್ತಾರೆ. ಹೊಂದಾಣಿಕೆ ಮಾತುಕತೆ ನಡೆದಿದೆ. ಇಲ್ಲದಿದ್ದರೆ ಬಿಎಸ್‍ವೈ ಸುಮ್ಮನೆ ಯಾಕೆ ಹೇಳುತ್ತಾರೆ’ ಎಂದರು.

‘ಮಾಜಿ ಸಚಿವ ಎ. ಮಂಜು ನನ್ನನ್ನು ಭೇಟಿಯಾಗಿಲ್ಲ. ಅವರ ಮಗ ಮಂಥರ್‌ಗೌಡ ಬಿಜೆಪಿ ಸೇರಿಲ್ಲ ಎಂದು ಕೊಡಗಿನ ಸ್ಥಳೀಯ ಕಾಂಗ್ರೆಸ್‌ ಕಾರ್ಯಕರ್ತರು ಹೇಳಿದರು. ಕೊಡಗಿಗೂ ಮಂಥರ್‌ಗೌಡ ಅವರಿಗೂ ಸಂಬಂಧವಿದೆ. ಅವರ ತಾಯಿ ಕೊಡಗಿನವರು’ ಎಂದರು.

ADVERTISEMENT

‘ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪಕ್ಷದೊಳಗೆ ಯಾವುದೇ ಗುಂಪುಗಾರಿಕೆಯಿಲ್ಲ. ಕೋಲಾರದಲ್ಲಿ ಪಕ್ಷದ ಅಭ್ಯರ್ಥಿ ನೂರಕ್ಕೆ ನೂರರಷ್ಟು ಗೆಲ್ಲುತ್ತಾರೆ. ಪಕ್ಷದ ತೀರ್ಮಾನದಂತೆ ನಡೆದುಕೊಳ್ಳುತ್ತೇವೆ ಎಂದು ಮಾಜಿ ಸಂಸದ ಕೆ.ಎಚ್‌. ಮುನಿಯಪ್ಪ ಹೇಳಿದ್ದಾರೆ. ಹಿಂದಿನ ಬಾರಿ ಪಕ್ಷ 14 ಸ್ಥಾನದಲ್ಲಿ ಗೆದ್ದಿತ್ತು. ಈ ಬಾರಿ 15 ಸ್ಥಾನದಲ್ಲಿ ಗೆಲ್ಲುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.