ADVERTISEMENT

ಮನರಂಜನಾ ಕ್ಲಬ್‌: ತನಿಖೆಗೆ ಸದನ ಸಮಿತಿ

ವಿಧಾನ ಪರಿಷತ್‌ನಲ್ಲಿ ಸಚಿವ ಎಸ್‌.ಟಿ.ಸೋಮಶೇಖರ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2020, 19:34 IST
Last Updated 11 ಮಾರ್ಚ್ 2020, 19:34 IST
ಎಚ್‌.ಎಂ.ರೇವಣ್ಣ
ಎಚ್‌.ಎಂ.ರೇವಣ್ಣ   

ಬೆಂಗಳೂರು: ‘ಬೆಂಗಳೂರು ನಗರ ಮತ್ತು ರಾಜ್ಯದ ಇತರ ಕಡೆಗಳಲ್ಲಿ ಸರ್ಕಾರಿ ನಿವೇಶನಗಳಲ್ಲಿ ಗುತ್ತಿಗೆ ಪಡೆದು ನಡೆಸುತ್ತಿರುವ ಮನರಂಜನಾ ಕ್ಲಬ್‌ಗಳ ಕಾರ್ಯವೈಖರಿ ಬಗ್ಗೆ ಸದನ ಸಮಿತಿಯಿಂದ ತನಿಖೆ ನಡೆಸಲಾಗುವುದು’ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಹೇಳಿದರು.

ಕಾಂಗ್ರೆಸ್ ಸದಸ್ಯ ಎಚ್.ಎಂ.ರೇವಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ‘ಈ ಹಿಂದೆ ವಿಧಾನಸಭೆಯಲ್ಲಿ ಸದನ ಸಮಿತಿ ರಚಿಸಲಾಗಿತ್ತು, ಆದರೆ ಅದರ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ವಿಧಾನ ಪರಿಷತ್‌ನಲ್ಲಿ ಪ್ರತ್ಯೇಕ ಸದನ ಸಮಿತಿ ರಚಿಸಿ, ಈ ಕ್ಷೇತ್ರದಲ್ಲಿ ತಜ್ಞರಾದ ಸದಸ್ಯರನ್ನೇ ಸೇರಿಸಿಕೊಂಡು ಸರ್ಕಾರ ಎಂತಹ ಕ್ರಮ ಕೈಗೊಳ್ಳಬಹುದು’ ಎಂಬ ತೀರ್ಮಾನಕ್ಕೆ ಬರಲಾಗುವುದು ಎಂದರು.

‘ಒಂದೊಂದು ಕ್ಲಬ್‌ಗೆ ಒಂದೊಂದು ಬಗೆಯ ಗುತ್ತಿಗೆ ಮೊತ್ತ ನಿಗದಿಪಡಿಸಲಾಗಿದೆ. ಬೌರಿಂಗ್‌ ಇನ್‌ಸ್ಟಿಟ್ಯೂಟ್‌ಗೆ ವಾರ್ಷಿಕ ಗುತ್ತಿಗೆಶುಲ್ಕ ಕೇವಲ ₹ 30. ಆದರೆ ಅಲ್ಲಿನ ವಸ್ತ್ರಸಂಹಿತೆಯಿಂದಾಗಿ ಶಾಸಕರೂ ಸಹ ಅಲ್ಲಿಗೆ ತೆರಳುವುದಕ್ಕೆ ಸಾಧ್ಯವಿಲ್ಲದಂತಾಗಿದೆ, ಇಲ್ಲಿ ಮದ್ಯ ಪೂರೈಕೆ ಸಹಿತ ಭಾರಿ ವಾಣಿಜ್ಯ ವಹಿವಾಟು ನಡೆಯುತ್ತಿದೆ’ಎಂದು ರೇವಣ್ಣ ಅಳಲು ತೋಡಿಕೊಂಡರು.

ADVERTISEMENT

ಶಾಸಕರಿಗೆ ಪ್ರತ್ಯೇಕ ಮನರಂಜನಾ ಕ್ಲಬ್‌ ವ್ಯವಸ್ಥೆ ಮಾಡಬೇಕು, ‘ಕಾವೇರಿ–ಅನುಗ್ರಹ’ ಸಮೀಪದ 2 ಎಕರೆ ಲೋಕೋಪಯೋಗಿ ಇಲಾಖೆಗೆ ಸೇರಿದ ಸ್ಥಳವನ್ನು ಅದಕ್ಕಾಗಿ ನೀಡಬೇಕು ಎಂದು ಒತ್ತಾಯಿಸಿದರು.

‘ಈ ಸ್ಥಳದ ಬಗ್ಗೆ ಸರಿಯಾಗಿ ಮಾಹಿತಿ ಇಲ್ಲ, ಪರಿಶೀಲಿಸಿ, ನಿರ್ಧಾರಕ್ಕೆ ಬರಲಾಗುವುದು’ ಎಂದು ಲೋಕೋಪಯೋಗಿ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

ಪ್ರಕಾಶ್ ರಾಠೋಡ್‌, ಕೆ.ಸಿ.ಕೊಂಡಯ್ಯ, ಬಸವರಾಜ ಹೊರಟ್ಟಿ, ಶರಣಪ್ಪ ಮಟ್ಟೂರು, ಡಾ.ವೈ.ಎ.ನಾರಾಯಣ ಸ್ವಾಮಿ, ತೇಜಸ್ವಿನಿ ಗೌಡ, ‍‍ಕೆ.ಎ.ತಿಪ್ಪೇಸ್ವಾಮಿ ಮೊದಲಾದವರೂ ಚರ್ಚೆಯಲ್ಲಿ ಪಾಲ್ಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.