ADVERTISEMENT

ವಿಧಾನ ಪರಿಷತ್‌: ಮದ್ಯಪ್ರಿಯ ಗಂಡಸರಿಗೂ ₹2 ಸಾವಿರ– ಸ್ವಾರಸ್ಯಕರ ಚರ್ಚೆ

​ಪ್ರಜಾವಾಣಿ ವಾರ್ತೆ
Published 29 ಫೆಬ್ರುವರಿ 2024, 16:27 IST
Last Updated 29 ಫೆಬ್ರುವರಿ 2024, 16:27 IST
<div class="paragraphs"><p>ವಿಧಾನ ಪರಿಷತ್‌</p></div>

ವಿಧಾನ ಪರಿಷತ್‌

   

ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ಗುರುವಾರ ನಡೆದ ಬಜೆಟ್‌ ಮೇಲಿನ ಚರ್ಚೆಯಲ್ಲಿ ಪ್ರಸ್ತಾಪವಾದ ‘ಮದ್ಯ’ದ ವಿಚಾರ ಸದನವನ್ನು ನಗೆಗಡಲಲ್ಲಿ ತೇಲಿಸಿತು.

ಬಿಜೆಪಿಯ ಎಚ್‌.ವಿಶ್ವನಾಥ್‌, ‘ಸರ್ಕಾರಗಳು ಮದ್ಯದ ದರಗಳನ್ನು ಗಣನೀಯವಾಗಿ ಏರಿಕೆ ಮಾಡುತ್ತಲೇ ಬಂದಿವೆ. ಇದರಿಂದ ಮದ್ಯಪ್ರಿಯರಿಗೆ ನಿರಾಸೆಯಾಗಿದೆ. ಬಹಳಷ್ಟು ಜನರು ಮದ್ಯ ವ್ಯಸನದಿಂದ ಸ್ವಯಂ ಮುಕ್ತಿ ಪಡೆಯುತ್ತಿದ್ದಾರೆ. ನಮ್ಮಂಥವರಿಗೆ ಇಸ್ಪೀಟ್‌ ಆಡಲೂ ಬರುವುದಿಲ್ಲ. ಇರುವ ಒಂದು ಅಭ್ಯಾಸಕ್ಕೂ ಸಂಚಕಾರ ಬಂದಿದೆ. ಸರ್ಕಾರ ದರ ಇಳಿಕೆ ಮಾಡಬೇಕು’ ಎಂದು ಮನವಿ ಮಾಡಿದರು. 

ADVERTISEMENT

ಅವರ ಮಾತಿಗೆ ಧ್ವನಿಗೂಡಿಸಿದ ಭಾರತಿ ಶೆಟ್ಟಿ, ಗೃಹಲಕ್ಷ್ಮಿ ಹೆಸರಲ್ಲಿ ಸರ್ಕಾರ ನೀಡುವ ₹2 ಸಾವಿರವನ್ನು ಅವರ ಗಂಡಂದಿರೇ ತೆಗೆದುಕೊಳ್ಳುತ್ತಿದ್ದಾರೆ. ಇತ್ತ ಮಹಿಳೆಯರಿಗೆ ತಿಂಗಳು ಹಣ ನೀಡಿ, ಅತ್ತ ಮದ್ಯದ ಬೆಲೆ ಏರಿಸಿದ್ದಾರೆ. ಮದ್ಯ ಕುಡಿಯುವವರು ಹೆಚ್ಚುವರಿ ₹2 ಸಾವಿರ ಖರ್ಚು ಮಾಡುವಂತಾಗಿದೆ. ಆ ಹಣ  ಮರಳಿ ಸರ್ಕಾರದ ಖಜಾನೆ ಸೇರುತ್ತಿದೆ. ಹಾಗಾಗಿ, ಮದ್ಯ ಕುಡಿಯುವ ಗಂಡಸರಿಗೂ ಸರ್ಕಾರ ತಿಂಗಳಿಗೆ ₹2 ಸಾವಿರ ನೀಡಬೇಕು ಎಂದರು.

ಜಿಎಸ್‌ಟಿ ಅಷ್ಟೇ ಅಲ್ಲ, ಭಕ್ತಿಯೂ ಉತ್ತರಕ್ಕೆ:

ಬಿಜೆಪಿಯ ಎಚ್‌.ವಿಶ್ವನಾಥ್‌ ಮಾತನಾಡಿ, ‘ದಕ್ಷಿಣದ ಹಣ ಜಿಎಸ್‌ಟಿ ರೂಪದಲ್ಲಿ ಉತ್ತರಕ್ಕೆ ಹರಿಯುತ್ತಿದೆ. ಎದ್ದಾಗಿನಿಂದ ಮಲಗುವವರೆಗೂ ಪ್ರತಿಯೊಂದಕ್ಕೂ ಜಿಎಸ್‌ಟಿ ತೆರಬೇಕಿದೆ. ಇದು ಬರೀ ಜಿಎಸ್‌ಟಿ ಕಥೆಯಲ್ಲ. ರಾಮಮಂದಿರ ನಿರ್ಮಾಣದ ನಂತರ ಭಕ್ತಿಯೂ ಉತ್ತರದತ್ತ ಹರಿಯುತ್ತಿದೆ. ಶ್ರೀರಾಮ ನಮ್ಮೆಲ್ಲರ ಅಸ್ಮಿತೆ ನಿಜ. ಆದರೆ, ಇದರಿಂದ ದಕ್ಷಿಣದ ತಿರುಪತಿ, ಧರ್ಮಸ್ಥಳದಂತಹ ದೇಗುಲಗಳ ಭಕ್ತಿ ಕಡಿಮೆಯಾಗಬಾರದು’ ಎಂದರು.

‘ಸದನದ ಸದಸ್ಯರು ಪರಸ್ಪರ ವೈರಿಗಳಂತೆ ವರ್ತಿಸುತ್ತಿದ್ದಾರೆ. ಗಾಂಧೀಜಿ ಹೇಳಿದಂತೆ ನಮಗೆ ಸಮ್ಮತಿ ಇಲ್ಲ ಎಂದರೆ ಹೇಗೆ? ತಿಳಿವಳಿಕೆ ನಮ್ಮ ಧರ್ಮ ಆಗಬೇಕು. ನಾವು ಜನತಂತ್ರ ವ್ಯವಸ್ಥೆಯಲ್ಲಿ ಇದ್ದೇವೆ ಎನ್ನುವುದನ್ನು ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.