ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿರುವ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲೇ 'ವಿದ್ಯಾಸಿರಿ'ಯ ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳ ಕೈಸೇರದೆ ಇರುವ ಬಗ್ಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸ್ಕಾಲರ್‌ಶಿಪ್‌ಗೆ ಕನ್ನ ಹಾಕಿದ ಪ್ರಕರಣದಲ್ಲಿ ಅಚ್ಚರಿ ಪಡುವಂತಹದ್ದು ಏನಿಲ್ಲ. ಬಿಜೆಪಿಯ 40% ಕಮಿಷನ್ ಸರ್ಕಾರದಿಂದ ಸ್ಫೂರ್ತಿ ಪಡೆದಿರುವ ಸರ್ಕಾರಿ ನೌಕರರು ನೇರವಾಗಿ ವಿದ್ಯಾರ್ಥಿಗಳು, ಮಹಿಳೆಯರು, ರೈತರು ಹೀಗೆ ಎಲ್ಲರ ಸುಲಿಗೆಗೆ ಇಳಿದಿದ್ದಾರೆ ಎಂದು ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಪ್ರಜಾವಾಣಿಯ 'ವಿದ್ಯಾಸಿರಿ' ಸ್ಕಾಲರ್‌ಶಿಪ್‌ಗೆ ಕನ್ನ- ವರದಿಯನ್ನು ಉಲ್ಲೇಖಿಸಿ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಒಂದೆಡೆ ಅನ್ನಭಾಗ್ಯ, ಕ್ಷೀರಭಾಗ್ಯ, ವಿದ್ಯಾಸಿರಿ ಸೇರಿದಂತೆ ನಮ್ಮ ಸರ್ಕಾರ ಜಾರಿಗೆ ತಂದಿರುವ ಜನಪರ ಯೋಜನೆಗಳಿಗೆ ಹಣ ನೀಡದೆ ನಿರ್ಲಕ್ಷಿಸುತ್ತಿರುವ ಬಿಜೆಪಿ ಸರ್ಕಾರ, ಇನ್ನೊಂದೆಡೆ ಒಂದಿಷ್ಟು ಮಂಜೂರಾಗಿರುವ ಹಣವನ್ನು ಕೂಡಾ ಬಿಡದೆ ಸರ್ಕಾರವೇ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಹಾಸ್ಟೆಲ್‍ನಲ್ಲಿ ಪ್ರವೇಶ ಸಿಗದೆ ಇದ್ದ ವಿದ್ಯಾರ್ಥಿಗಳಿಗೆ ನೆರವಾಗಲು ತಿಂಗಳಿಗೆ ₹1500 ನೀಡುವ ಯೋಜನೆ ವಿದ್ಯಾಸಿರಿ. ನನ್ನ ಸ್ವಂತ ಅನುಭವದ ಆಧಾರದಲ್ಲಿ ರೂಪಿಸಿದ್ದ ಈ ಯೋಜನೆಗೆ ರಾಜ್ಯ ಸರ್ಕಾರ ಕಲ್ಲು ಹಾಕುತ್ತಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.
2017-18ರ ಸಾಲಿನಲ್ಲಿ ವಿದ್ಯಾಸಿರಿ ಯೋಜನೆಗೆ 88,549 ವಿದ್ಯಾರ್ಥಿಗಳು ಫಲಾನುಭವಿಗಳಾಗಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಈ ಯೋಜನೆಗೆ ಹಣ ನೀಡದೆ ಹಿಂದುಳಿದ ಜಾತಿಯ ವಿದ್ಯಾರ್ಥಿಗಳನ್ನು ಬೀದಿಗೆ ತಳ್ಳುತ್ತಿದೆ. ಹಿಂದುಳಿದ ವರ್ಗಗಳ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಹಾಸಿಗೆ, ಹೊದಿಕೆ, ಸೋಪ್‌ಗಳನ್ನೂ ಕೊಟ್ಟಿಲ್ಲ. ವಿದ್ಯಾರ್ಥಿ ವೇತನವನ್ನೂ ಬಾಕಿ ಇಟ್ಟುಕೊಳ್ಳಲಾಗಿದೆ. ಹಾಸ್ಟೆಲ್ ಸಿಬ್ಬಂದಿಗೆ ವೇತನ ಬಿಡುಗಡೆ ಮಾಡಿಲ್ಲ. ಇವೆಲ್ಲವೂ ವಿದ್ಯಾರ್ಥಿಗಳ ವ್ಯಾಸಂಗದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಹಿಂದುಳಿದ ಜಾತಿಗಳ ವಿದ್ಯಾರ್ಥಿಗಳಲ್ಲಿ ಶಿಕ್ಷಣವನ್ನು ಪ್ರೊತ್ಸಾಹಿಸಲು ಜಾರಿಗೆ ತಂದಿರುವ ವಿದ್ಯಾಸಿರಿ ಯೋಜನೆಗೆ ಅವಶ್ಯಕ ಹಣವನ್ನು ರಾಜ್ಯ ಸರ್ಕಾರ ತಕ್ಷಣ ಮಂಜೂರು ಮಾಡಬೇಕು. ಈಗಾಗಲೇ ಮಂಜೂರಾಗಿರುವ ಹಣವನ್ನು ಸುಲಿಗೆ ಮಾಡುತ್ತಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.