ADVERTISEMENT

ದೇಶದಲ್ಲೇ ಅತೀ ಉದ್ದ, ಎತ್ತರದ ಜಲಕಾಲುವೆ: ತಿಡಗುಂದಿ ನಾಲಾ ಜಲಸೇತುವೆ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2020, 12:01 IST
Last Updated 24 ಏಪ್ರಿಲ್ 2020, 12:01 IST
ವಿಜಯಪುರ ಜಿಲ್ಲೆಯ ತಿಡಗುಂದಿ ವಿಸ್ತರಣಾ ನಾಲೆಗೆ ಶಾಸಕ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ದೇವಾನಂದ ಚವ್ಹಾಣ ಅವರು ಶುಕ್ರವಾರ ಬಾಗಿನ ಅರ್ಪಿಸಿರುವ ಮೂಲಕ ಜಲಸೇತುವೆಯನ್ನು ಲೋಕಾರ್ಪಣೆ ಮಾಡಿದರು –ಪ್ರಜಾವಾಣಿ ಚಿತ್ರ
ವಿಜಯಪುರ ಜಿಲ್ಲೆಯ ತಿಡಗುಂದಿ ವಿಸ್ತರಣಾ ನಾಲೆಗೆ ಶಾಸಕ ಎಂ.ಬಿ.ಪಾಟೀಲ, ಬಸನಗೌಡ ಪಾಟೀಲ ಯತ್ನಾಳ, ದೇವಾನಂದ ಚವ್ಹಾಣ ಅವರು ಶುಕ್ರವಾರ ಬಾಗಿನ ಅರ್ಪಿಸಿರುವ ಮೂಲಕ ಜಲಸೇತುವೆಯನ್ನು ಲೋಕಾರ್ಪಣೆ ಮಾಡಿದರು –ಪ್ರಜಾವಾಣಿ ಚಿತ್ರ   
""

ವಿಜಯಪುರ: ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೇ ಹಂತದ ತಿಡಗುಂದಿ ವಿಸ್ತರಣಾ ನಾಲೆಗೆ ನಿರ್ಮಿಸಿರುವ ದೇಶದಲ್ಲೇ ಅತೀ ಉದ್ದನೆಯ ಮತ್ತು ಎತ್ತರದ ಜಲಸೇತುವೆ(ಅಕ್ವಾಡಕ್ಟ್‌)ಯನ್ನು ಶಾಸಕ ಎಂ.ಬಿ.ಪಾಟೀಲ ಲೋಕಾರ್ಪಣೆ ಮಾಡಿದರು.

ತಾಲ್ಲೂಕಿನ ಬುರಾಣಪುರ ಗೋದಾಮು ಬಳಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಾಲೆಗೆ ಬಾಗಿನ ಅರ್ಪಿಸಿ, ಗಂಗಾಪೂಜೆ ನೆರವೇರಿಸಿ ಮಾತನಾಡಿದ ಅವರು, 14.73 ಕಿ.ಮೀ.ಉದ್ದನೆಯ ಈ ಮೇಲ್ಸೇತುವೆ ಕಾಲುವೆಯನ್ನು ₹ 280.26 ಕೋಟಿ ವೆಚ್ಚದಲ್ಲಿ ಎರಡು ವರ್ಷದಲ್ಲಿ ನಿರ್ಮಿಸಲಾಗಿದೆ ಎಂದರು.

ಈ ಕಾಲುವೆಯಿಂದ ವಿಜಯಪುರ ಮತ್ತು ಇಂಡಿ ತಾಲ್ಲೂಕಿನ 29 ಗ್ರಾಮಗಳ ಸುಮಾರು 63,190 ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯವಾಗಲಿದೆ ಹಾಗೂ 25 ಕೆರೆಗಳು ಭರ್ತಿಯಾಗಲಿವೆ ಎಂದು ಹೇಳಿದರು.

ADVERTISEMENT

ದೇಶಕ್ಕೆ ಮಾದರಿ:ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿ, ತಿಡಗುಂದಿ ಕಾಲುವೆ ಜಲಸೇತುವೆಯು ದೇಶಕ್ಕೆ ಮಾದರಿಯಾಗಿದೆ. ಈ ಕಾಲುವೆ ನಿರ್ಮಾಣದಿಂದಾಗಿ ಕೃಷ್ಣೆಯ ನೀರು ರಾಜ್ಯದ ಗಡಿಯವರೆಗೂ ತಲುಪಿದಂತಾಗಿದೆ. ಯೋಜನೆಯ ರೂವಾರಿ ಎಂ.ಬಿ.ಪಾಟೀಲಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಆಲಮಟ್ಟಿ ಜಲಾಶಯದಿಂದ ವಿಜಯಪುರ ಜಿಲ್ಲೆಯ ಪಾಲಿನ ನೀರು ಬಳಕೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರ ಈ ನಿಟ್ಟಿನಲ್ಲಿ ಶ್ರಮಿಸಲಿದೆ ಎಂದು ಹೇಳಿದರು.

ಜಲಸೇತುವೆಯಲ್ಲಿ ವಾಹನ ಸಂಚಾರ:ತಾಲ್ಲೂಕಿನ ಬುರಾಣಪುರ ಗೋದಾಮಿನ ಬಳಿಯಿಂದ ಆರಂಭಗೊಂಡು ಭೂತನಾಳ ವರೆಗೂ ನೆಲಮಟ್ಟದಿಂದ ಸರಾಸರಿ 30 ಮೀಟರ್‌ ಎತ್ತರದಲ್ಲಿ ತಲೆ ಎತ್ತಿ ನಿಂತಿರುವ ನಾಲೆಯ ಜಲ ಸೇತುವೆ ಮೇಲೆ ವಾಹನಗಳ ಸಂಚಾರಕ್ಕೂ ಅವಕಾಶವಿರುವುದು ವಿಶೇಷವಾಗಿದೆ.

ಶಾಸಕ ದೇವಾನಂದ ಚವ್ಹಾಣ, ಮಾಜಿ ಶಾಸಕರಾದ ಪ್ರೊ.ರಾಜು ಅಲಗೂರ, ವಿಠಲ ಕಟಕದೋಂಡ ಮತ್ತು ಡಾ.ಮಹಾಂತೇಶ ಬಿರಾದಾರ, ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಕಾರಿಗಳು, ರೈತರು ಇದ್ದರು.

ವಿಜಯಪುರ ಜಿಲ್ಲೆಯ ತಿಡಗುಂದಿ ವಿಸ್ತರಣಾ ನಾಲೆಗೆ ನಿರ್ಮಿಸಿರುವ ದೇಶದಲ್ಲೇ ಅತೀ ಉದ್ದನೆಯ ಮತ್ತು ಎತ್ತರದ ಜಲಸೇತುವೆ–ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.