ADVERTISEMENT

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಸ್ಥಾನ: ವಿಜಯೇಂದ್ರ ಸ್ಥಾನ ಸದ್ಯ ಅಭಾದಿತ

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 0:30 IST
Last Updated 14 ಜನವರಿ 2026, 0:30 IST
<div class="paragraphs"><p>ಬಿ.ವೈ. ವಿಜಯೇಂದ್ರ</p></div>

ಬಿ.ವೈ. ವಿಜಯೇಂದ್ರ

   

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇದೇ 20ರಂದು ಚುನಾವಣೆ ನಡೆಯಲಿದ್ದು, ರಾಷ್ಟ್ರೀಯ ಕಾರ್ಯಾಧ್ಯಕ್ಷ ನಿತಿನ್‌ ನಬಿನ್‌ ಅವರು ನೂತನ ಅಧ್ಯಕ್ಷರಾಗಲು ವೇದಿಕೆ ಸಿದ್ಧವಾಗಿದೆ. 

ರಾಷ್ಟ್ರೀಯ ಅಧ್ಯಕ್ಷರ ಚುನಾವಣೆಗೆ ಮುನ್ನ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ, ಗುಜರಾತ್‌, ಮಧ್ಯಪ್ರದೇಶ ಸೇರಿದಂತೆ 30 ರಾಜ್ಯಗಳಲ್ಲಿ ರಾಜ್ಯ ಘಟಕಕ್ಕೆ ನೂತನ ಸಾರಥಿಗಳ ನೇಮಕವಾಗಿದೆ. ಪ್ರಮುಖ ರಾಜ್ಯಗಳ ಪೈಕಿ ಕರ್ನಾಟಕವಷ್ಟೇ ಉಳಿದಿದೆ. 19ಕ್ಕೆ ಮುನ್ನ ರಾಜ್ಯ ಘಟಕಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ. ಅಧ್ಯಕ್ಷರಾಗಿ ಎರಡು ವರ್ಷ ಪೂರ್ಣಗೊಳಿಸಿರುವ ಬಿ.ವೈ. ವಿಜಯೇಂದ್ರ ಅವರನ್ನು ಇನ್ನಷ್ಟು ಸಮಯ ಮುಂದುವರಿಸಲು ವರಿಷ್ಠರು ಒಲವು ತೋರಿದ್ದಾರೆ.

ADVERTISEMENT

‘ವಿಜಯೇಂದ್ರ ಸಾಧನೆ ನೋಡಿಕೊಂಡು 2028ರ ವಿಧಾನಸಭಾ ಚುನಾವಣೆಗೆ ಮುನ್ನ ವರಿಷ್ಠರು ನಾಯಕತ್ವದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದರು. 

‘ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ವಿಜಯೇಂದ್ರ ಅವರ ಬಗೆಗೆ ಇದ್ದ ಪ್ರಮುಖ ಆರೋಪ. ಈಚಿನ ದಿನಗಳಲ್ಲಿ ಹಿರಿಯರು ಹಾಗೂ ವಿಜಯೇಂದ್ರ ಜತೆಗೂಡಿ ಕೆಲಸ ಮಾಡುತ್ತಿದ್ದಾರೆ. ಆಂತರಿಕ ಕಲಹ ಬಹುತೇಕ ಶಮನವಾಗಿದೆ. ಇಂತಹ ಸಮಯದಲ್ಲಿ ಚುನಾವಣೆ ನಡೆಸಿದರೆ ಗೊಂದಲ ಸೃಷ್ಟಿಯಾಗಲಿದೆ’ ಎಂದು ಅವರು ಹೇಳಿದರು. 

ವಿಜಯೇಂದ್ರ ಬದಲಾವಣೆಗೆ ಒತ್ತಾಯಿಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಬಿಜೆಪಿ ಭಿನ್ನಮತೀಯರು ಹೋರಾಟ ನಡೆಸಿದ್ದರು. ಪಕ್ಷದಿಂದ ಯತ್ನಾಳ ಅವರನ್ನು ಕಳೆದ ವರ್ಷ ಉಚ್ಚಾಟಿಸಲಾಗಿತ್ತು. ಆ ಬಳಿಕ ಭಿನ್ನಮತೀಯರು ಸ್ವಲ್ಪ ತಣ್ಣಗಾಗಿದ್ದರು. ‘ಅಧ್ಯಕ್ಷರಾಗಿ ವಿಜಯೇಂದ್ರ ಎರಡು ವರ್ಷ ಪೂರ್ಣಗೊಳಿಸಿದ್ದಾರೆ. ಅವರು ಮತ್ತೊಂದು ವರ್ಷ ಮುಂದುವರಿಯುವುದಕ್ಕೆ ನಮ್ಮ ಆಕ್ಷೇಪ ಇಲ್ಲ. ಆದರೆ, 2028ರ ಚುನಾವಣೆಗೆ ಮುನ್ನ ನಾಯಕತ್ವ ಬದಲಾವಣೆ ಆಗಬೇಕು’ ಎಂದು ಭಿನ್ನರು ದಾಳ ಉರುಳಿಸಿದ್ದರು. ಕೇಂದ್ರ ನಾಯಕರ ಗಮನಕ್ಕೂ ಈ ವಿಷಯವನ್ನು ತಂದಿದ್ದರು. ಇನ್ನೊಂದೆಡೆ, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಮೂರು ಸಲ ಭೇಟಿ ಮಾಡಿ ತಮ್ಮನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸುವಂತೆ ಮನವಿ ಮಾಡಿಕೊಂಡಿದ್ದರು. 

ಬಿಹಾರದ ಐದು ಬಾರಿಯ ಶಾಸಕ ನಬಿನ್‌ ಅವರನ್ನು ರಾಷ್ಟ್ರಿಯ ಕಾರ್ಯಾಧ್ಯಕ್ಷರನ್ನಾಗಿ ಡಿಸೆಂಬರ್‌ 14ರಂದು ನೇಮಕ ಮಾಡಲಾಗಿತ್ತು. ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಇದೇ 19ರಂದು ನಾಮಪತ್ರ ಸಲ್ಲಿಸಲಿದ್ದಾರೆ. 20ರಂದು ಚುನಾವಣೆ ನಡೆಯಲಿದೆ. 

ಬಿಜೆಪಿ ಆಡಳಿತವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಬಿಜೆಪಿ ರಾಜ್ಯ ಘಟಕಗಳ ಅಧ್ಯಕ್ಷರು, ಕೇಂದ್ರ ಸಚಿವರು, ಪಕ್ಷದ ರಾಷ್ಟ್ರೀಯ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರು ದೆಹಲಿಯಲ್ಲಿ ಹಾಜರಿರುವಂತೆ ತಿಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ಏತನ್ಮಧ್ಯೆ, ಬಿಜೆಪಿ ಅಧ್ಯಕ್ಷರ ಚುನಾವಣೆಗೆ ಸಿದ್ಧತೆಗಳ ಕುರಿತು ಹಾಲಿ ಅಧ್ಯಕ್ಷ ಜೆ.ಪಿ. ನಡ್ಡಾ ಅಧ್ಯಕ್ಷತೆಯಲ್ಲಿ ಪ್ರಮುಖರ ಸಭೆ ಮಂಗಳವಾರ ಇಲ್ಲಿ ನಡೆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.