
ಬೆಂಗಳೂರು: ನಟ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ 2025ರ ಸೆಪ್ಟೆಂಬರ್‌ನಲ್ಲಿಯೇ ಘೋಷಣೆಯಾಗಿದ್ದು, ಪ್ರಶಸ್ತಿ ಪ್ರದಾನಕ್ಕೆ ದಿನಾಂಕ ನಿಗದಿಪಡಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ‘ಡಾ.ವಿಷ್ಣು ಸೇನಾ ಸಮಿತಿ’ಯು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಜಯಮಾಲಾ ಅವರಿಗೆ ಮನವಿ ಸಲ್ಲಿಸಿದೆ.
ವೀರಕಪುತ್ರ ಶ್ರೀನಿವಾಸ ಅವರ ನೇತೃತ್ವದಲ್ಲಿ ವಿಷ್ಣು ಸೇನಾ ಸಮಿತಿಯ ಮುಖಂಡರು ಜಯಮಾಲಾ ಅವರನ್ನು ಗುರುವಾರ ಭೇಟಿ ಮಾಡಿದ್ದರು. ‘ವಿಷ್ಣುವರ್ಧನ್ ಅವರಿಗೆ ಪ್ರಶಸ್ತಿ ಘೋಷಣೆಯಾಗಿ ಆರು ತಿಂಗಳು ಕಳೆದರೂ, ಸಮಾರಂಭದ ದಿನಾಂಕ ಘೋಷಣೆಯಾಗಿಲ್ಲ. ಈ ಬಗ್ಗೆ ಸರ್ಕಾರದ ಜತೆ ಮಾತುಕತೆ ನಡೆಸಿ, ಸಮಾರಂಭ ಆಯೋಜಿಸಬೇಕು’ ಎಂದು ಮನವಿ ಸಲ್ಲಿಸಿದ್ದಾರೆ.
‘ಅಭಿಮಾನ್ ಸ್ಟುಡಿಯೊದಲ್ಲಿ ಇದ್ದ ವಿಷ್ಣುವರ್ಧನ್ ಅವರ ಸ್ಮಾರಕವನ್ನು ತೆರವುಗೊಳಿಸಲಾಗಿದೆ. ಆ ಜಾಗದಲ್ಲಿ ಮಾಲ್, ವಾಣಿಜ್ಯ ಸಂಕೀರ್ಣ ನಿರ್ಮಾಣವಾಗುವುದು ವಿಷ್ಣುವರ್ಧನ್ ಅವರಿಗೆ ಮಾಡುವ ಅವಮಾನ. ಹೀಗಾಗಿ ಆ ಜಾಗವು ಮೂಲ ಉದ್ದೇಶಕ್ಕೇ ಬಳಕೆಯಾಗುವಂತೆ ಮಂಡಳಿಯು ಎಚ್ಚರಿಕೆ ವಹಿಸಬೇಕು’ ಎಂದು ಮನವಿ ಸಲ್ಲಿಸಿದ್ದಾರೆ.
ವಿಷ್ಣು ಸೇನಾ ಸಮಿತಿಯ ಆನಂದ ರಾಜ್, ಮಲ್ಲಿಕಾರ್ಜುನ್, ಎಸ್.ರಘು ಮತ್ತು ಮೂರ್ತಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.