ADVERTISEMENT

ಮತ ಕಳವು: ಚುನಾವಣಾ ಆಯೋಗದಿಂದ ಸ್ಥಳ ಪರಿಶೀಲನೆ?

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 19:31 IST
Last Updated 8 ಆಗಸ್ಟ್ 2025, 19:31 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ಬೆಂಗಳೂರು: ಮಹದೇವುರ ವಿಧಾನಸಭಾ ಕ್ಷೇತ್ರದ ಕೆಲವು ಸಣ್ಣ ಮನೆಗಳಲ್ಲಿ ಹತ್ತಾರು ಮಂದಿ ಮತದಾರರು ನೋಂದಣಿ ಮಾಡಿಕೊಂಡಿದ್ದ ವಿಳಾಸಗಳಿಗೆ ಸರ್ಕಾರದ ಕೆಲ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ್ದಾರೆ. 

ಮಹದೇವಪುರದ ಮುನಿರೆಡ್ಡಿ ಗಾರ್ಡನ್‌ನ 35ನೇ ನಂಬರ್‌ ಮನೆ, ತುಳಸಿ ಟಾಕೀಸ್‌ನ ಹಿಂಬದಿ ರಸ್ತೆಯ ಮನೆ ಮತ್ತು 153 ಬೈರಿ ಕ್ಲಬ್‌ಗೆ ಮತಗಟ್ಟೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಇದು ಚುನಾವಣಾ ಆಯೋಗದ ಅಧಿಕೃತ ಆದೇಶದ ಮೇರೆಗೆ ನಡೆದ ಪರಿಶೀಲನೆಯೇ ಎಂಬುದು ದೃಢಪಟ್ಟಿಲ್ಲ. ‘ಈ ವಿಳಾಸದಲ್ಲಿ ನೋಂದಾಯಿಸಿದ ಒಬ್ಬ ಮತದಾರರೂ ಸ್ಥಳದಲ್ಲಿಲ್ಲ’ ಎಂದು ಮೂಲಗಳು ಖಚಿತಪಡಿಸಿವೆ.

ಮುನಿರೆಡ್ಡಿ ಗಾರ್ಡನ್‌ನ 35ನೇ ನಂಬರ್‌ನ ಮನೆಯಲ್ಲಿ 80 ಮಂದಿ ಮತದಾರರು ನೋಂದಾಯಿಸಿದ್ದು, ಒಬ್ಬರೂ ಆ ಮನೆಯಲ್ಲಿ ಇಲ್ಲ. ಅದೇ ಬೀದಿಯಲ್ಲಿ 30ಕ್ಕೂ ಹೆಚ್ಚು ಮನೆಗಳನ್ನು ಬಾಡಿಗೆಗೆ ನೀಡಿರುವ ಜಯರಾಮ್‌ ಎಂಬುವವರು, ‘ಈ 80ರಲ್ಲಿ ಒಬ್ಬರಿಗೂ ನಾನು ಮನೆ ಬಾಡಿಗೆಗೆ ನೀಡಿಲ್ಲ. ಅವರನ್ನು ಇಲ್ಲಿ ನೋಡಿಯೇ ಇಲ್ಲ’ ಎಂದಿದ್ದಾರೆ.

ADVERTISEMENT

ಇನ್ನು 153 ಬೈರಿ ಕ್ಲಬ್‌ನ ವಿಳಾಸದಲ್ಲಿ ನೋಂದಣಿಯಾಗಿರುವ ಮತದಾರರ ಬಗ್ಗೆ ವಿಚಾರಿಸಿದಾಗ ಅದರ ಮಾಲೀಕರು, ‘ಜನವರಿಯಲ್ಲಿ ಮ್ಯಾನೇಜ್‌ಮೆಂಟ್‌ ಬದಲಾಗಿದೆ. ಈ ವಿಳಾಸದಲ್ಲಿ ನೋಂದಣಿಯಾಗಿರುವ 68 ಮಂದಿಯಲ್ಲಿ ಯಾರೊಬ್ಬರೂ ಈಗ ಇಲ್ಲಿ ಕೆಲಸ ಮಾಡುತ್ತಿಲ್ಲ’ ಎಂದಿದ್ದಾರೆ.

ತುಳಸಿ ಟಾಕೀಸ್‌ನ ಹಿಂಬದಿ ರಸ್ತೆಯ ಮನೆಯಲ್ಲಿ 46 ಮಂದಿ ಮತದಾರರು ನೋಂದಣಿ ಮಾಡಿಸಿದ್ದು, ಅವರಲ್ಲಿ ಯಾರೊಬ್ಬರೂ ಅಲ್ಲಿ ಇಲ್ಲ ಎಂಬುದು ತಿಳಿದುಬಂದಿದೆ. 

ಪರಿಶೀಲನೆ ಬಗ್ಗೆ ವಿಚಾರಿಸಿದಾಗ ಬೆಂಗಳೂರು ನಗರ ಜಿಲ್ಲೆ ಜಿಲ್ಲಾಧಿಕಾರಿ ಜಿ.ಜಗದೀಶ್‌, ‘ಪರಿಶೀಲನೆ ನಡೆಸುವಂತೆ ಚುನಾವಣಾ ಆಯೋಗದಿಂದ ನಮಗೆ ಯಾವುದೇ ನಿರ್ದೇಶನ ಬಂದಿಲ್ಲ’ ಎಂದರು.

ಚುನಾವಣಾ ಆಯೋಗದ ಕಚೇರಿ ಸಂಖ್ಯೆಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.