ADVERTISEMENT

ಮತದಾರರ ಮಾಹಿತಿ ಕಳವು| ಬಿಬಿಎಂಪಿಯ 4 ಅಧಿಕಾರಿಗಳು ಕಸ್ಟಡಿಗೆ, ಹಿರಿಯರಿಗೆ ನೋಟಿಸ್?

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2022, 20:38 IST
Last Updated 27 ನವೆಂಬರ್ 2022, 20:38 IST
   

ಬೆಂಗಳೂರು: ಮತದಾರರ ಮಾಹಿತಿ ಕಳವು ಹಾಗೂ ದುರ್ಬಳಕೆ ಪ್ರಕರಣದಲ್ಲಿ ಬಂಧಿಸಲಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನಾಲ್ವರು ಅಧಿಕಾರಿಗಳನ್ನು ಹೆಚ್ಚಿನ ವಿಚಾರಣೆ
ಗಾಗಿ ಇದೇ 29 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ.

ಚಿಲುಮೆ ಸಂಸ್ಥೆ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಶಿವಾಜಿನಗರದ ಕಂದಾಯ ಅಧಿಕಾರಿ ಸುಹೇಲ್‌ ಅಹಮದ್‌, ಮಹದೇವಪುರದ ಕಂದಾಯ ಅಧಿಕಾರಿ ಕೆ.ಚಂದ್ರಶೇಖರ್‌, ರಾಜರಾಜೇಶ್ವರಿ ನಗರದ ಕಂದಾಯ ಅಧಿಕಾರಿ ಮಹೇಶ್‌ ಹಾಗೂ ಚಿಕ್ಕಪೇಟೆಯ ಉಪ ಕಂದಾಯ ಅಧಿಕಾರಿ ವಿ.ಬಿ. ಭೀಮಾಶಂಕರ್‌ ಅವರನ್ನು ಶನಿವಾರ ಸಂಜೆ ಬಂಧಿಸಲಾಗಿತ್ತು. ಅವರನ್ನೆಲ್ಲ ಕೋರಮಂಗಲದಲ್ಲಿರುವ ನ್ಯಾಯಾಧೀಶರ ಮನೆಗೆ ಭಾನುವಾರ ಸಂಜೆ ಹಾಜರುಪಡಿಸಲಾಯಿತು.

‘ಮತದಾರರ ಸಮೀಕ್ಷೆ ಮಾಡಲು ಸಹಕರಿಸಿದ್ದ ಅಧಿಕಾರಿಗಳು, ಚಿಲುಮೆ ಸಂಸ್ಥೆಯ ಸಿಬ್ಬಂದಿಗೆ ಮತಗಟ್ಟೆ ಅಧಿಕಾರಿ (ಬಿಎಲ್‌ಒ) ಗುರುತಿನ ಚೀಟಿ ಮಾಡಿಕೊಟ್ಟಿದ್ದರು. ಇದೀಗ ಅಧಿಕಾರಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಕಸ್ಟಡಿಗೆ ಪಡೆಯಲಾಗಿದೆ. ವಿಚಾರಣೆ ಮುಂದುವರಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

ಹಿರಿಯ ಅಧಿಕಾರಿಗಳಿಗೆ ನೋಟಿಸ್: ‘ಬಿಬಿಎಂಪಿ ವ್ಯಾಪ್ತಿಯ ಮತದಾರರ ಪಟ್ಟಿ ಪರಿಷ್ಕರಣೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ಆಧಾರ್ ಸಂಖ್ಯೆ ಜೋಡಣೆ ಮಾಡುವ ಕೆಲಸವನ್ನು ಚಿಲುಮೆ ಸಂಸ್ಥೆಗೆ ನೀಡಲಾಗಿತ್ತು. ಹಿರಿಯ ಅಧಿಕಾರಿಗಳ ಸೂಚನೆಯಂತೆ ಗುರುತಿನ ಚೀಟಿ ನೀಡಿದ್ದಾಗಿ ಬಂಧಿತ ಅಧಿಕಾರಿಗಳು ಹೇಳುತ್ತಿದ್ದಾರೆ’ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

‘ಚಿಲುಮೆ ಸಂಸ್ಥೆಗೆ ಸಹಾಯ ಮಾಡಿದ್ದರು ಎನ್ನಲಾದ ಹಿರಿಯ ಅಧಿಕಾರಿಗಳ ಪಟ್ಟಿ ಸಿದ್ಧಪಡಿ
ಸಲಾಗುತ್ತಿದ್ದು, ಸೂಕ್ತ ಪುರಾವೆಗಳನ್ನು ಮುಂದಿಟ್ಟುಕೊಂಡು ಅವರಿಗೆಲ್ಲ ನೋಟಿಸ್ ನೀಡಲಾಗುವುದು. ವಿಚಾರಣೆ ನಡೆಸಿದ ನಂತರವೇ ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಮೂಲಗಳು ಹೇಳಿವೆ.

ಮಧ್ಯವರ್ತಿಯನ್ನು ಬಿಟ್ಟು ಕಳುಹಿಸಿದ ಪೊಲೀಸರು: ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ಆರೋಪದಡಿ ಶಿವಕುಮಾರ್ ಎಂಬುವರನ್ನು ಶನಿವಾರ ವಶಕ್ಕೆ ಪಡೆದಿದ್ದ ಪೊಲೀಸರು, ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿದ್ದಾರೆ.

‘ಶಿವಕುಮಾರ್ ಭಾಗಿ ಬಗ್ಗೆ ಅನುಮಾನ ಮಾತ್ರ ಇತ್ತು. ಹೀಗಾಗಿ, ವಿಚಾರಣೆ ನಡೆಸಿ ಹೇಳಿಕೆ ಪಡೆದು ಕಳುಹಿಸಲಾಗಿದೆ. ಅಗತ್ಯವಿದ್ದರೆ ಪುನಃ ವಿಚಾರಣೆಗೆ ಬರುವಂತೆಯೂ ಅವರಿಗೆ ಸೂಚಿಸಲಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.