ADVERTISEMENT

ರಾಜ್ಯದಲ್ಲಿ ಎಸ್ಐಆರ್ ಜಾರಿ ವಿರೋಧಿಸಿ ನನ್ನ ಮತ ನನ್ನ ಹಕ್ಕು ಅಭಿಯಾನ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 1:24 IST
Last Updated 12 ಅಕ್ಟೋಬರ್ 2025, 1:24 IST
ಚುನಾವಣಾ ಆಯೋಗ
ಚುನಾವಣಾ ಆಯೋಗ   

ಬೆಂಗಳೂರು: ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಜಾರಿಗೊಳಿಸಲು ವಿವಿಧ ನಾಗರಿಕ ಸಂಘಟನೆಗಳ ನೇತೃತ್ವದಲ್ಲಿ ಶುಕ್ರವಾರ ನಡೆದ ದುಂಡು ಮೇಜಿನ ಸಭೆಯಲ್ಲಿ ವಿರೋಧ ವ್ಯಕ್ತಪಡಿಸಲಾಯಿತು. ಎಸ್ಐಆರ್‌ಗೆ ವಿರೋಧಿಸಿ  ರಾಜ್ಯದಾದ್ಯಂತ ನನ್ನ ಮತ ನನ್ನ ಹಕ್ಕು ಅಭಿಯಾನ ನಡೆಸಲು ನಿರ್ಧರಿಸಲಾಯಿತು. 

ಸಿಪಿಐ–ಎಂಎಲ್‌ನ ರಾಜ್ಯ ಕಾರ್ಯದರ್ಶಿ ಕ್ಲಿಫ್ಟನ್ ಡಿ ರೊಜಾರಿಯೊ ಮಾತನಾಡಿ, ‘ಬಿಹಾರದಲ್ಲಿ ಎಸ್ಐಆರ್ ಜಾರಿಗೊಳಿಸುವ ಮೂಲಕ ಮತದಾರರ ಪಟ್ಟಿಯಿಂದ 68 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ. ಇದರಲ್ಲಿ ಪ್ರಮುಖವಾಗಿ ಮಹಿಳೆಯರು, ದಲಿತರು, ಮುಸ್ಲಿಮರು, ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಆಯೋಗವು ಕೇಳಿರುವ ದಾಖಲೆಗಳು ಬಹುತೇಕ ಸಾರ್ವಜನಿಕರ ಬಳಿ ಇಲ್ಲ’ ಎಂದು ಹೇಳಿದರು.

ಬಹುತ್ವ ಕರ್ನಾಟಕದ ಸದಸ್ಯ ವಿನಯ್ ಶ್ರೀನಿವಾಸ್ ಮಾತನಾಡಿ, ‘ಎಸ್ಐಆರ್‌ ಹೆಸರಿನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಜಾರಿಗೊಳಿಸಲು ಚುನಾವಣೆ ಆಯೋಗವು ಸಿದ್ಧತೆ ನಡೆಸುತ್ತಿದೆ. ಮತದಾರರು ಮತ ಚಲಾವಣೆ ಮಾಡಲು ಅರ್ಹರು ಎಂಬುದು ಸಾಬೀತು ಪಡಿಸಬೇಕಾಗಿದೆ. ಇದರಿಂದ ನಾಗರಿಕರು ಕಿರುಕುಳ ಅನುಭವಿಸುವ ಸಾಧ್ಯತೆ ಇದೆ. ಇದು ಮತದಾನದ ಹಕ್ಕನ್ನು ಕಸಿದುಕೊಳ್ಳುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.   

ADVERTISEMENT

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪತ್ರಕರ್ತ ಇಂದೂಧರ ಹೊನ್ನಾಪುರ, ‘ಎಸ್ಐಆರ್ ಜಾರಿಗೆ ವಿರೋಧಿಸಲು ನಾವೆಲ್ಲರೂ ಸಾಮೂಹಿಕವಾಗಿ ಒಗ್ಗೂಡಬೇಕು. ಮತದಾರರು ತಮ್ಮ ನಾಯಕರನ್ನು ಆಯ್ಕೆ ಮಾಡುತ್ತಾರೆ. ಆದರೆ ಈಗ ಚುನಾವಣೆ ಆಯೋಗವು ಮತದಾರರನ್ನು ಆಯ್ಕೆ ಮಾಡುವ ಜವಾಬ್ದಾರಿಯನ್ನು ತಮ್ಮ ಮೇಲೆ ತೆಗೆದುಕೊಳ್ಳುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸಲು ತಳಮಟ್ಟದಲ್ಲಿ ಚಳವಳಿಯನ್ನು ರೂಪಿಸಿಸಬೇಕು’ ಎಂದು ಕರೆ ನೀಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.