ADVERTISEMENT

ಎಂಜಿನಿಯರಿಂಗ್‌: ‘ಮೂಲ ಮಾದರಿ’ ಕಡ್ಡಾಯಗೊಳಿಸಿದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 16:03 IST
Last Updated 6 ಫೆಬ್ರುವರಿ 2026, 16:03 IST
ಕೃತಕ ಅತ್ಯುನ್ನತ ಬುದ್ಧಿಮತ್ತೆ (ಎಎಸ್‌ಐ) ಅಳವಡಿಕೆ ಕುರಿತು ಬ್ರಿಟನ್‌ನ ಚಿಯಾಕ್‌ ಎಎಸ್‌ಐ ಜತೆ ವಿಟಿಯು ಒಪ್ಪಂದ ಮಾಡಿಕೊಂಡಿದ್ದು, ಈ ಪತ್ರವನ್ನು  ಸಿಇಒ ಚಂದ್ರಶೇಖರ ನಾಗರಾಜು ಹಾಗೂ ಕುಲಪತಿ ಡಾ.ಎಸ್.ವಿದ್ಯಾಶಂಕರ್‌ ಪ್ರದರ್ಶಿಸಿದರು.
ಕೃತಕ ಅತ್ಯುನ್ನತ ಬುದ್ಧಿಮತ್ತೆ (ಎಎಸ್‌ಐ) ಅಳವಡಿಕೆ ಕುರಿತು ಬ್ರಿಟನ್‌ನ ಚಿಯಾಕ್‌ ಎಎಸ್‌ಐ ಜತೆ ವಿಟಿಯು ಒಪ್ಪಂದ ಮಾಡಿಕೊಂಡಿದ್ದು, ಈ ಪತ್ರವನ್ನು  ಸಿಇಒ ಚಂದ್ರಶೇಖರ ನಾಗರಾಜು ಹಾಗೂ ಕುಲಪತಿ ಡಾ.ಎಸ್.ವಿದ್ಯಾಶಂಕರ್‌ ಪ್ರದರ್ಶಿಸಿದರು.   

ಬೆಂಗಳೂರು: ಎಂಜಿನಿಯರಿಂಗ್‌ನಲ್ಲಿ ‘ನಾವೀನ್ಯ ಮತ್ತು ವಿನ್ಯಾಸ ಚಿಂತನಾ’ ವಿಷಯ ತೆಗೆದುಕೊಳ್ಳುವ ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದು ಮೂಲ ಮಾದರಿ ನಿರ್ಮಿಸುವುದನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಕಡ್ಡಾಯಗೊಳಿಸಿದೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಟಿಯು ಕುಲಪತಿ ಎಸ್.ವಿದ್ಯಾಶಂಕರ್‌, ನಾವೀನ್ಯ ಮತ್ತು ವಿನ್ಯಾಸ ಚಿಂತನಾ ವಿಷಯವನ್ನು ಈಗಾಗಲೇ ಎಂಜಿನಿಯರಿಂಗ್‌ ಕಾಲೇಜುಗಳ ಮೊದಲ ಸೆಮಿಸ್ಟರ್‌ನಲ್ಲಿ ಬೋಧಿಸಲಾಗುತ್ತಿದೆ. ಆದರೆ, ವಿಷಯ ಕುರಿತು ಯಾವುದೇ ನೈಜ ಕಾರ್ಯ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಕೆಲಸ ಮಾಡದೆ ಇದ್ದರೂ ಅವರಿಗೆ ಅಂಕಗಳನ್ನು ನೀಡಲಾಗುತ್ತಿದೆ. ಅದಕ್ಕಾಗಿ ಮೂಲ ಮಾದರಿ ನಿರ್ಮಿಸುವುದನ್ನು ಕಡ್ಡಾಯಗೊಳಿಸಲಾಗುತ್ತಿದೆ ಎಂದರು.

‘ವಿದ್ಯಾರ್ಥಿಗಳು ತಯಾರಿಸಿದ ಮೂಲ ಮಾದರಿಗಳ ಫೋಟೊ ಮತ್ತು ವಿಡಿಯೊಗಳನ್ನು ಅಪ್‌ಲೋಡ್‌ ಮಾಡಲು ಆ್ಯಪ್‌ ಅಭಿವೃದ್ಧಿಪಡಿಸಲು ವಿಶ್ವವಿದ್ಯಾಲಯ ಯೋಜನೆ ರೂಪಿಸಿದೆ. ವಿದ್ಯಾರ್ಥಿಗಳು ಮೊದಲು ಒಂದು ಸಮಸ್ಯೆಯನ್ನು ಗುರುತಿಸಬೇಕು. ಅದರ ಬಗ್ಗೆ ಯೋಚಿಸಿ ವಿಶ್ಲೇಷಣೆ ಮಾಡಿ, ನಂತರ ಪರಿಹಾರವನ್ನು ರೂಪಿಸಬೇಕು. ಇದರಿಂದ ನೈಜ ಕಲಿಕೆ ಸಾಧ್ಯವಾಗುತ್ತದೆ’ ಎಂದು ಹೇಳಿದರು.  

ADVERTISEMENT

ಪ್ರಸ್ತುತ ವಿಟಿಯುನ ನಾಲ್ಕು ಕೇಂದ್ರಗಳು ಮತ್ತು ವಿಶ್ವವಿದ್ಯಾಲಯದ ಮೂರು ಅಂಗ ಕಾಲೇಜುಗಳಲ್ಲಿ ಇದೇ ಮಾದರಿಯ ವ್ಯವಸ್ಥೆ ಜಾರಿಯಲ್ಲಿದ್ದು, ಸುಮಾರು 2,000 ವಿದ್ಯಾರ್ಥಿಗಳು ತಮ್ಮ ಕಲ್ಪನೆಗಳ ಆಧಾರದಲ್ಲಿ ಮೂಲ ಮಾದರಿಗಳನ್ನು ನಿರ್ಮಿಸುತ್ತಿದ್ದಾರೆ. ವಿದ್ಯಾರ್ಥಿಗಳ ತಂಡ ಕೃಷಿ ಕ್ಷೇತ್ರ, ಬಸ್‌ನಿಲ್ದಾಣ ಸೇರಿದಂತೆ ಯಾವುದೇ ಒಂದು ಸ್ಥಳಕ್ಕೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಯನ್ನು ಗುರುತಿಸಿ, ಪರಿಹಾರವನ್ನು ಕಂಡುಹಿಡಿದು ಮೂಲ ಮಾದರಿ ನಿರ್ಮಿಸಿದ್ದಾರೆ. ಫೆ. 28ರಂದು ವಿಶ್ವವಿದ್ಯಾಲಯ ಆಯೋಜಿಸಿರುವ ‘ಓಪನ್ ಡೇ’ಯಲ್ಲಿ ಈ ಮಾದರಿಗಳನ್ನು ಪ್ರದರ್ಶಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ವಿಟಿಯು ಬೆಂಗಳೂರು ಪ್ರಾದೇಶಿಕ ಕಚೇರಿಯ ನಿರ್ದೇಶಕ ಎಚ್.ಆರ್.ಸುದರ್ಶನ ರೆಡ್ಡಿ, ಚಿಯಾಕ್‌ ಎಎಸ್‌ಐನ ಸಹ ಸಂಸ್ಥಾಪಕ ಜೆ.ಎಚ್.ಪ್ರತೀಕ್‌, ಬೆಂಗಳೂರು ಪ್ರಾದೇಶಿಕ ಕಚೇರಿಯ ವಿಶೇಷಾಧಿಕಾರಿ ಅಜಿತ್‌ ಪದ್ಯಾಣ ಉಪಸ್ಥಿತರಿದ್ದರು.

ಕೃತಕ ಅತ್ಯುನ್ನತ ಬುದ್ಧಿಮತ್ತೆ: ವಿಟಿಯು ಒಪ್ಪಂದ

ಕೃತಕ ಬದ್ಧಿಮತ್ತೆಯನ್ನು(ಎಐ) ಮೀರಿಸುವ ಕೃತಕ ಅತ್ಯುನ್ನತ ಬುದ್ಧಿಮತ್ತೆ (ಎಎಸ್‌ಐ) ಅಳವಡಿಕೆಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮುಂದಾಗಿದ್ದು ಬ್ರಿಟನ್‌ನ ‘ಚಿಯಾಕ್ ಎಎಸ್‌ಐ’ ಕಂಪನಿ ಜತೆ ಶುಕ್ರವಾರ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದಕ್ಕೆ ವಿಟಿಯು ಕುಲಪತಿ ಡಾ.ಎಸ್.ವಿದ್ಯಾಶಂಕರ್‌ ಮತ್ತು ಚಿಯಾಕ್‌ ಎಎಸ್‌ಐ ಸಿಇಒ ಚಂದ್ರಶೇಖರ ನಾಗರಾಜು ಪರಸ್ಪರ ಸಹಿ ಮಾಡಿದರು. ಒಪ್ಪಂದದ ನಂತರ ಮಾತನಾಡಿದ ವಿದ್ಯಾಶಂಕರ್‌ ‘ಮುಂದಿನ ಶೈಕ್ಷಣಿಕ ಸಾಲಿನಿಂದ ವಿಟಿಯು ತನ್ನ ಪಠ್ಯಕ್ರಮದಲ್ಲಿ ಭವಿಷ್ಯದ ತಂತ್ರಜ್ಞಾನ–ಎಎಸ್‌ಐ ಪರಿಚಯಿಸಲಿದ್ದು ಚಿಯಾಕ್ ಸಂಸ್ಥೆ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಇಂಟರ್ನ್‌ಶಿಪ್‌ಗಳು ಹಾಗೂ ಪರಿಣಾಮಕಾರಿ ಬೋಧನೆಗಾಗಿ ಎಂಜಿನಿಯರಿಂಗ್ ಕಾಲೇಜು ಉಪನ್ಯಾಸಕರಿಗೆ ಪಠ್ಯಪುಸ್ತಕಗಳನ್ನು ಒದಗಿಸಲಿದೆ. ಈ ಪಠ್ಯಪುಸ್ತಕಗಳು ಸಂಶೋಧನೆ ಮುಂದುವರಿದಂತೆ ಸ್ವಯಂ ನವೀಕರಣಗೊಳ್ಳಲಿವೆ’ ಎಂದರು. ಚಿಯಾಕ್‌ ಸಿಇಒ ಚಂದ್ರಶೇಖರ ನಾಗರಾಜು ಮಾತನಾಡಿ ‘ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ 2030ರೊಳಗೆ ಎಎಸ್‌ಐ ಕ್ಷೇತ್ರದಲ್ಲಿ ಭಾರತ ಪ್ರಭುತ್ವ ಸಾಧಿಸಬೇಕಿದೆ. ಭಾರತದಲ್ಲಿ 10 ಲಕ್ಷ ಎಂಜಿನಿಯರ್‌ಗಳನ್ನು ಈ ಕ್ಷೇತ್ರಕ್ಕೆ ಪರಿಚಯಿಸುವ ಗುರಿ  ಹೊಂದಿದ್ದೇವೆ’ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.