ADVERTISEMENT

ಉದ್ಯಮಿಗಳ ಸಾಲ ಮನ್ನಾ: ಪರಿಷತ್‌ನಲ್ಲಿ ಮಾತಿನ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2025, 23:30 IST
Last Updated 18 ಮಾರ್ಚ್ 2025, 23:30 IST
<div class="paragraphs"><p>ಸಿದ್ದರಾಮಯ್ಯ ಅವರು ‘ಪ್ರಜಾವಾಣಿ’ ವರದಿಯನ್ನು ಪ್ರದರ್ಶಿಸಿದರು. ಎನ್‌.ಎಸ್‌. ಬೋಸರಾಜು, ಕೆ. ಗೋವಿಂದರಾಜು, ಸಲೀಂ ಅಹಮದ್‌ ಇದ್ದರು</p></div>

ಸಿದ್ದರಾಮಯ್ಯ ಅವರು ‘ಪ್ರಜಾವಾಣಿ’ ವರದಿಯನ್ನು ಪ್ರದರ್ಶಿಸಿದರು. ಎನ್‌.ಎಸ್‌. ಬೋಸರಾಜು, ಕೆ. ಗೋವಿಂದರಾಜು, ಸಲೀಂ ಅಹಮದ್‌ ಇದ್ದರು

   

   –ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಮೋದಿ ರೈತರ ಸಾಲ ಮನ್ನಾ ಮಾಡಿಲ್ಲ. ಅವರು ಸಾಲ ಮನ್ನಾ ಮಾಡಿರುವುದು ಉದ್ಯಮಿಗಳದ್ದು. ಅದಾನಿ, ಅಂಬಾನಿಯದ್ದು’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿಗೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ವಿಚಾರದಲ್ಲಿ ಆಡಳಿತ–ವಿಪಕ್ಷ ಸದಸ್ಯರ ನಡುವೆ ಮಾತಿನ ಜಟಾಪಟಿಯೇ ನಡೆಯಿತು.

ADVERTISEMENT

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡುತ್ತಿದ್ದ ವೇಳೆ ಸಾಲ ಮನ್ನಾ ವಿಷಯ ಪ್ರಸ್ತಾಪಿಸಿದ ಮುಖ್ಯಮಂತ್ರಿ, ‘ರೈತರ ಸಾಲ ಮನ್ನಾ ಮಾಡಿ ಎಂದಾಗ ನೋಟು ಪ್ರಿಂಟ್ ಮಾಡುವ ಮಷಿನ್ ಇಲ್ಲ ಎಂದು ಇದೇ ಸದನದಲ್ಲಿ ಯಡಿಯೂರಪ್ಪ ಹೇಳಿದ್ದರು. ಮೋದಿ ಉದ್ಯಮಿಗಳ ₹ 16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ’ ಎಂದರು.

ಆಗ ಕ್ರಿಯಾಲೋಪ ಎತ್ತಿದ ಬಿಜೆಪಿಯ ಸಿ.ಟಿ. ರವಿ, ‘ಮುಖ್ಯಮಂತ್ರಿ ಸುಳ್ಳು ಹೇಳುತ್ತಿದ್ದಾರೆ’ ಎಂದರು. ‘ಉತ್ತರ ಕೊಡುವಾಗ ಕ್ರಿಯಾಲೋಪ ಎತ್ತಲು ಅವಕಾಶ ಇಲ್ಲ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು. ‘ಸಾಂವಿಧಾನಿಕ ಸ್ಥಾನದಲ್ಲಿರುವ ಮುಖ್ಯಮಂತ್ರಿ ಸದನದ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ರವಿ ಆಕ್ರೋಶ ವ್ಯಕ್ತಪಡಿಸಿದರು.

‘ನಾನು ಉತ್ತರ ನೀಡುವಾಗ ಅಡ್ಡಿಪಡಿಸಿದರೆ, ಯಾರಿಗೂ ಹೆದರುವುದಿಲ್ಲ’ ಎಂದು ಮುಖ್ಯಮಂತ್ರಿ ತಿರುಗೇಟು ನೀಡಿದರು.

‘ನಮ್ಮ ಸರ್ಕಾರದ ‘ಗ್ಯಾರಂಟಿ’ಯನ್ನು ಮೋದಿ ಕಾಪಿ ಮಾಡಿದರು’ ಎಂದು ಮುಖ್ಯಮಂತ್ರಿ ಹೇಳಿದಾಗ, ‘ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು. ಹೀಗಾಗಿ ನಾವೂ ಗ್ಯಾರಂಟಿ ತಂದೆವು’ ಎಂದು ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸಮರ್ಥಿಸಿದರು.

ಮೂರು ಗಂಟೆಗೂ ಹೆಚ್ಚು ಹೊತ್ತು ಉತ್ತರ ನೀಡಿದ ಮುಖ್ಯಮಂತ್ರಿ, ‘ವಂದನಾ ನಿರ್ಣಯ ಅಂಗೀಕರಿಸಬೇಕು’ ಎಂದು ಕೋರಿದರು. ಆಗ ಬಿಜೆಪಿ ಸದಸ್ಯರು, ‘ಮುಖ್ಯಮಂತ್ರಿಯ ಉತ್ತರ ತೃಪ್ತಿ ಕೊಟ್ಟಿಲ್ಲ’ ಎಂದು ಸಭಾತ್ಯಾಗ ಮಾಡಿದರು.

ಛಲವಾದಿ ನೀನು ಆರ್‌ಎಸ್‌ಎಸ್‌ ಅಲ್ಲ’

‘ನೀನು ಆರ್‌ಎಸ್‌ಎಸ್‌ ಅಲ್ಲ. ಆರ್‌ಎಸ್‌ಎಸ್‌ ನಿನ್ನನ್ನು ಒಳಗೂ ಸೇರಿಸಲ್ಲ’ ಎಂದು ಛಲವಾದಿ ನಾರಾಯಣಸ್ವಾಮಿಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಹೇಳಿದರು. ಆಗ ನಾರಾಯಣಸ್ವಾಮಿ ‘ನಾನು ಆರ್‌ಎಸ್‌ಎಸ್‌ ಅಲ್ಲ ಬಿಜೆಪಿ. ಆರ್‌ಎಸ್‌ಎಸ್ ಅನ್ನು ಗೌರವಿಸುತ್ತೇನೆ’ ಎಂದರು. ಈ ವೇಳೆ ‘ನಾನು ಆರ್‌ಎಸ್‌ಎಸ್‌ ನಾನೂ ಆರ್‌ಎಸ್‌ಎಸ್‌. ಭಾರತ್ ಮಾತಾಕಿ ಜೈ’ ಎಂದು ಬಿಜೆಪಿ ಸದಸ್ಯರು ಜಯಕಾರ ಹಾಕಿದರು. ಆಗ ಸಂತೋಷ್‌ ಲಾಡ್‌ ‘ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಜೈ’ ಎಂದರು. ಬಿಜೆಪಿ ಸದಸ್ಯರು ‘ಜೈ ಭೀಮ್ ಜೈ ರಾಮ್’ ಎಂದು ಕೂಗಿದರು.

‘ಥೂ... ನಿನ್ ಜನ್ಮಕ್ಕೆ’
‘ಹಿಂದಿನ ಮುಖ್ಯಮಂತ್ರಿ ಐದು ಸಹಿ ಮಾಡಿದರೆ ಅವರ ಮಗ 50 ಸಹಿ ಮಾಡುತ್ತಿದ್ದರು. ಅದರಲ್ಲಿ ಸಂಪಾದಿಸಿದ ಆ ಹಣವನ್ನು ವಿಮಾನದಲ್ಲಿ ಎಲ್ಲಿಗೆ ತೆಗೆದುಕೊಂಡು ಹೋದರು ಎಂಬುದರ ತನಿಖೆಗೆ ಎಸ್‌ಐಟಿ ರಚಿಸಬೇಕು’ ಎಂದು ಯಡಿಯೂರಪ್ಪ ಮತ್ತು ವಿಜಯೇಂದ್ರ ಹೆಸರು ಹೇಳದೆ ಕಾಂಗ್ರೆಸ್‌ನ ಪುಟ್ಟಣ್ಣ ಪ್ರಸ್ತಾಪಿಸಿದ್ದು ಕೋಲಾಹಲಕ್ಕೆ ಕಾರಣವಾಯಿತು. ‘ರಾಜ್ಯಪಾಲರ ಭಾಷಣಕ್ಕೂ ಆ ವಿಷಯಕ್ಕೂ ಏನು ಸಂಬಂಧ’ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ಉಪನಾಯಕ ಸುನಿಲ್ ವಲ್ಯಾಪುರೆ ಮಧ್ಯಪ್ರವೇಶಿಸಿ ‘ನೀ ಯಾವ್ಯಾವ ಪಾರ್ಟಿಲಿದ್ರಿ ಹೆಂಗೆ ಬಂದ್ರಿ ಅಂತ ಗೊತ್ತಿದೆ’ ಎಂದು ತಿರುಗೇಟು ನೀಡಿದರು.  ‘ನೀವು ಹೇಗೆ ಬಂದ್ರಿ ಏನು ಅಂತ ನಮಗೆ ಗೊತ್ತು. ಪಕ್ಕದಲ್ಲೇ ವಿಶ್ವನಾಥ್ ಇದ್ದಾರೆ ಅವರನ್ನೇ ಕೇಳಿ’ ಎಂದ ಪುಟ್ಟಣ್ಣ ‘ಥೂ ನಿನ್ ಜನ್ಮಕ್ಕೆ’ ಎಂಬ ಪದ ಬಳಸಿದ್ದು ವಿಪಕ್ಷ ಸದಸ್ಯರನ್ನು ಕೆರಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.