ADVERTISEMENT

ಮಹಿಳಾ ಸ್ವಸಹಾಯ ಗುಂಪುಗಳಿಗೆ ‘ವಾಲ್‌ಮಾರ್ಟ್‌’ ನೆರವು

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2025, 15:16 IST
Last Updated 4 ನವೆಂಬರ್ 2025, 15:16 IST
ರಾಷ್ಟ್ರೀಯ ಜೀವನೋಪಾಯ ಮಿಷನ್‌ ನಿರ್ದೇಶಕಿ ಆರ್. ಸ್ನೇಹಲ್‌ ಮತ್ತು ಐ2ಐ ಫೌಂಡೇಶನ್‌ನ ಟ್ರಸ್ಟಿ ಪಾರುಲ್‌ ಸೋನಿ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದರು. ಸಚಿವ ಶರಣಪ್ರಕಾಶ ಪಾಟೀಲ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಉಪಸ್ಥಿತರಿದ್ದರು.
ರಾಷ್ಟ್ರೀಯ ಜೀವನೋಪಾಯ ಮಿಷನ್‌ ನಿರ್ದೇಶಕಿ ಆರ್. ಸ್ನೇಹಲ್‌ ಮತ್ತು ಐ2ಐ ಫೌಂಡೇಶನ್‌ನ ಟ್ರಸ್ಟಿ ಪಾರುಲ್‌ ಸೋನಿ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದರು. ಸಚಿವ ಶರಣಪ್ರಕಾಶ ಪಾಟೀಲ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಉಪಸ್ಥಿತರಿದ್ದರು.   

ಬೆಂಗಳೂರು: ಮಹಿಳಾ ಸ್ವಸಹಾಯ ಗುಂಪುಗಳಿಗೆ ಇನ್ನು ಮುಂದೆ ಜಾಗತಿಕ ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸುವ ಮತ್ತು ಮಾರಾಟ ಮಾಡುವ ಅವಕಾಶ ದೊರೆಯಲಿದೆ.

ಸ್ವಸಹಾಯ ಗುಂಪುಗಳ ಸಾಮರ್ಥ್ಯ ಹೆಚ್ಚಿಸಲು ಕೌಶಲಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಯ ರಾಷ್ಟ್ರೀಯ ಜೀವನೋಪಾಯ ಮಿಷನ್‌ (ಎನ್‌ಎಲ್‌ಎಂ),  ಬಹುರಾಷ್ಟ್ರೀಯ ಕಂಪನಿ ವಾಲ್‌ಮಾರ್ಟ್‌ ಜತೆ ಒಪ್ಪಂದ ಮಾಡಿಕೊಂಡಿದೆ. 

ಕೌಶಲಾಭಿವೃದ್ಧಿ ಸಚಿವ ಶರಣಪ್ರಕಾಶ ಪಾಟೀಲ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ನೇತೃತ್ವದಲ್ಲಿ ಎನ್‌ಎಲ್‌ಎಂ ನಿರ್ದೇಶಕಿ ಆರ್. ಸ್ನೇಹಲ್‌ ಮತ್ತು ಐ2ಐ ಫೌಂಡೇಶನ್‌ನ ಟ್ರಸ್ಟಿ ಪಾರುಲ್‌ ಸೋನಿ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದರು. ಫ್ಲಿಪ್‌ಕಾರ್ಟ್‌ ಮತ್ತು ವಾಲ್‌ಮಾರ್ಟ್‌ ಸಂಸ್ಥೆಯ ಮಾರುಕಟ್ಟೆ ಜತೆ ಇ-ಕಾಮರ್ಸ್ ಸಂಪರ್ಕವನ್ನು ಸಾಧಿಸಲು ಈ ಒಪ್ಪಂದ ಅವಕಾಶ ಕಲ್ಪಿಸಲಿದೆ. 

ADVERTISEMENT

ಒಪ್ಪಂದ ಮೂರು ವರ್ಷಗಳ ಅವಧಿ ಒಳಗೊಂಡಿದ್ದು, ವಾಲ್‌ಮಾರ್ಟ್‌ ವೃದ್ಧಿಯ ಅನುಷ್ಠಾನ ಪಾಲುದಾರ ‘ಐಡಿಯಾಸ್‌ ಟು ಇಂಪ್ಯಾಕ್ಟ್‌ ಫೌಂಡೇಶನ್‌ ಮೂಲಕ ಸ್ವಸಹಾಯ ಗುಂಪುಗಳಿಗೆ ಉಚಿತ ಡಿಜಿಟಲ್‌ ಕಲಿಕೆ ತರಬೇತಿ, ವ್ಯಾಪಾರ ಪರಿಕರ ಮತ್ತು ಮಾರ್ಗದರ್ಶನ ನೀಡಲಿದೆ. ಸ್ವಸಹಾಯ ಗುಂಪುಗಳಿಗೆ ಡಿಜಿಟಲ್ ವ್ಯವಸ್ಥೆ, ಇ-ಕಾಮರ್ಸ್‌ ಮತ್ತು ಮಾರ್ಕೆಟಿಂಗ್‌ ಮತ್ತು ಇತರ ಸಾಮರ್ಥ್ಯಗಳಲ್ಲಿ ವಿಶೇಷ ತರಬೇತಿ ದೊರೆಯಲಿದೆ.

ಒಪ್ಪಂದದ ನಂತರ ಮಾತನಾಡಿದ ಸಚಿವ ಶರಣ ಪ್ರಕಾಶ ಪಾಟೀಲ, ‘ಈ ಒಪ್ಪಂದದಿಂದ ಸ್ವಸಹಾಯ ಗುಂಪುಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೊಸ ಮಾರುಕಟ್ಟೆಗಳಿಗೆ ಅವಕಾಶ, ಆದಾಯ ಸಿಗಲಿದೆ’ ಎಂದರು.

ವಾಲ್‌ಮಾರ್ಟ್‌ ಹಿರಿಯ ಉಪಾಧ್ಯಕ್ಷ ಜೇಸನ್‌ ಫ್ರೆಮ್‌ಸ್ಟಾಡ್‌ ಮಾತನಾಡಿ, ‘ಒಪ್ಪಂದದ ಫಲವಾಗಿ ಸ್ವಸಹಾಯ ಗುಂಪುಗಳ ಉತ್ಪನ್ನಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಲು ಅವಕಾಶ ದೊರೆಯಲಿದೆ’ ಎಂದರು.

ದೇಶೀಯ ಅಂತರರಾಷ್ಟ್ರೀಯ ಪ್ರಯಾಣಿಕರನ್ನು ಆಕರ್ಷಿಸಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಶೇಷ ಸ್ವಸಹಾಯ ಗುಂಪುಗಳ ಉತ್ಪನ್ನಗಳ ಕೇಂದ್ರವನ್ನು ಸ್ಥಾಪಿಸಲಾಗುವುದು
ಶಾಲಿನಿ ರಜನೀಶ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.